ಬೆಂಗಳೂರು ಟ್ರಾಫಿಕ್ ಪೊಲೀಸರ 'ಕಾಪ್ ಫಾರ್ ಎ ಡೇ' ಅಭಿಯಾನ: ಒಂದು ದಿನದ ಮಟ್ಟಿಗೆ ನೀವೂ ಆಗಬಹುದು ಪೊಲೀಸ್ !

ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಎಂದರೆ ಸಾಕು, ವಾಹನ ಸವಾರರು ಮಾತ್ರ ಒಮ್ಮೆ ಬೆಚ್ಚಿಬೀಳುತ್ತಾರೆ. ಅಂತಹದ್ರಲ್ಲಿ ಇಂತಹ ಟ್ರಾಫಿಕ್ ಅನ್ನ ಪ್ರತಿದಿನ ನಿರ್ವಹಣೆ ಮಾಡುವ ಪೊಲೀಸರ ಕಷ್ಟವಾದರೂ ಎಂಥದ್ದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸಾರ್ವಜನಿಕರಿಗೆ ಈಗ ಅದ್ಭುತ ಅವಕಾಶವೊಂದು ಒದಗಿಬಂದಿದೆ.

ಬೆಂಗಳೂರು ಟ್ರಾಫಿಕ್ ಪೊಲೀಸ್‌ ಇಲಾಖೆಯು ಸಾರ್ವಜನಿಕರಿಗಾಗಿ ತನ್ನ ಬಹುನಿರೀಕ್ಷಿತ 'ಕಾಪ್ ಫಾರ್ ಎ ಡೇ' ಅಭಿಯಾನವನ್ನ ಮರಳಿ ತಂದಿದೆ. ಇದರ ಮೂಲಕ ಆಸಕ್ತ ನಾಗರಿಕರು ಒಂದು ದಿನದ ಮಟ್ಟಿಗೆ ಸಂಚಾರಿ ಪೊಲೀಸರಾಗಿ ಕೆಲಸ ಮಾಡಿ ವಿಶೇಷ ಅನುಭವವನ್ನ ಪಡೆಯಬಹುದು.

Bengaluru Traffic Police

'ಕಾಪ್ ಫಾರ್ ಎ ಡೇ' ಅಭಿಯಾನದ ಉದ್ದೇಶ

ಸಾರ್ವಜನಿಕರು ಕೇವಲ ವಾಹನ ಸವಾರರಾಗಿ ಮಾತ್ರವಲ್ಲದೆ, ಟ್ರಾಫಿಕ್ ಪೊಲೀಸರ ಸ್ಥಾನದಲ್ಲಿ ನಿಂತು ಸಂಚಾರ ನಿರ್ವಹಣೆಯ ಸವಾಲುಗಳನ್ನ ಖುದ್ದಾಗಿ ಅರ್ಥಮಾಡಿಕೊಳ್ಳಬೇಕು ಎಂಬುದು ಈ ಅಭಿಯಾನದ ಪ್ರಮುಖ ಉದ್ದೇಶ. ಬೆಂಗಳೂರಿನ ರಸ್ತೆಗಳಲ್ಲಿ, ಅದರಲ್ಲೂ ವಿಶೇಷವಾಗಿ ಪೀಕ್ ಅವರ್‌ಗಳಲ್ಲಿ ವಾಹನ ದಟ್ಟಣೆಯನ್ನ ನಿಯಂತ್ರಿಸುವುದು ಎಷ್ಟು ಕಷ್ಟ ಎಂಬ ವಾಸ್ತವವನ್ನ ಜನರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಈ ಹೆಜ್ಜೆ ಇಡಲಾಗಿದೆ.

"ನಮ್ಮ ಸಂಚಾರಿ ಸಿಬ್ಬಂದಿ ಎದುರಿಸುವ ಸವಾಲುಗಳನ್ನ ನೀವೇ ಖುದ್ದಾಗಿ ಅರಿಯಿರಿ, ನಿಮ್ಮ ಅನುಭವಗಳನ್ನ ಹಂಚಿಕೊಳ್ಳಿ ಮತ್ತು ರಸ್ತೆಗಳನ್ನ ಮತ್ತಷ್ಟು ಸುರಕ್ಷಿತ ಹಾಗೂ ಸುಗಮವಾಗಿಸಲು ನಿಮ್ಮ ಅಮೂಲ್ಯ ಸಲಹೆಗಳನ್ನ ನೀಡಿ" ಎಂದು ಪೊಲೀಸ್ ಇಲಾಖೆ ಎಕ್ಸ್ ಖಾತೆಯಲ್ಲಿ ಮನವಿ ಮಾಡಿದೆ. ಈ ಹಿಂದೆ ಕೂಡ ಈ ಕಾರ್ಯಕ್ರಮ ಯಶಸ್ವಿಯಾಗಿತ್ತು, ಹೀಗಾಗಿ ಇದನ್ನು ಮತ್ತೆ ಜಾರಿ ಮಾಡಲಾಗುತ್ತಿದೆ.

ಬಿಟಿಪಿ ಆಸ್ಟ್ರಮ್ ಆ್ಯಪ್ ಮೂಲಕ ಸುಲಭ ನೋಂದಣಿ ಪ್ರಕ್ರಿಯೆ

ಒಂದು ದಿನದ ಮಟ್ಟಿಗೆ ಪೊಲೀಸ್ ಆಗುವ ಇಚ್ಛೆ ಇರುವವರು ಬಿಟಿಪಿ ಆಸ್ಟ್ರಮ್ ಆ್ಯಪ್ ಮೂಲಕ ತಮ್ಮ ಹೆಸರನ್ನ ನೋಂದಾಯಿಸಿಕೊಳ್ಳಬಹುದು. "ಅನುಭವಿಸಿ, ಅರ್ಥಮಾಡಿಕೊಳ್ಳಿ ಮತ್ತು ಭಾಗವಹಿಸಿ. ನಾವೆಲ್ಲರೂ ಸೇರಿ ಸುರಕ್ಷಿತ ಬೆಂಗಳೂರನ್ನ ಕಟ್ಟೋಣ" ಎಂಬ ಘೋಷವಾಕ್ಯದೊಂದಿಗೆ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಿದೆ.

ಅರ್ಜಿಗಳನ್ನು ಪರಿಶೀಲಿಸಿದ ಬಳಿಕ ಆಸಕ್ತರನ್ನ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ನಾಗರಿಕರಿಗೆ ಟ್ರಾಫಿಕ್ ನಿರ್ವಹಣೆ ಕುರಿತು ಸಂಚಾರಿ ಸಿಬ್ಬಂದಿಯಿಂದ ಪ್ರಾಥಮಿಕ ತರಬೇತಿ ನೀಡಲಾಗುತ್ತದೆ. ತದನಂತರ ಅವರನ್ನ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ದಟ್ಟಣೆಯ ಸಮಯದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ.

ನೆಟ್ಟಿಗರ ವ್ಯಾಪಕ ಮೆಚ್ಚುಗೆ

ಪೊಲೀಸರ ಈ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ನೆಟ್ಟಿಗರು ಈ ಐಡಿಯಾವನ್ನ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. "ರಾಂಗ್ ಸೈಡ್‌ನಲ್ಲಿ ಬರುವ ವಾಹನ ಸವಾರರೇ, ನಿಮ್ಮ ಜೀವನದ ಅತಿ ಕೆಟ್ಟ ದಿನವನ್ನು ಎದುರಿಸಲು ಸಿದ್ಧರಾಗಿ" ಎಂದು ಬಳಕೆದಾರರೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮತ್ತು ಆರಿನ್ ಕ್ಯಾಪಿಟಲ್‌ನ ಅಧ್ಯಕ್ಷರಾದ ಮೋಹನ್‌ದಾಸ್ ಪೈ ಅವರು ಕೂಡ ಈ ಹೆಜ್ಜೆಯನ್ನ ಸ್ವಾಗತಿಸಿದ್ದಾರೆ. "ಸಾರ್ವಜನಿಕರೊಂದಿಗೆ ಪೊಲೀಸರನ್ನ ಹತ್ತಿರವಾಗಿಸುವ ಒಳ್ಳೆಯ ಕ್ರಮವಿದು. ಅದೇ ರೀತಿ ಸಾರ್ವಜನಿಕರೊಂದಿಗೆ ಪೊಲೀಸರು ಹೆಚ್ಚು ಸೌಜನ್ಯದಿಂದ ವರ್ತಿಸುವಂತೆಯೂ ತರಬೇತಿ ನೀಡಿ" ಎಂದು ಅವರು ಸಲಹೆ ನೀಡಿದ್ದಾರೆ.

ಮುಂಬೈ, ಪುಣೆಯಲ್ಲೂ ಸಿಟಿಜನ್ ಟ್ರಾಫಿಕ್ ಕಾಪ್ಸ್ ವ್ಯವಸ್ಥೆಗೆ ಆಗ್ರಹ

ಬೆಂಗಳೂರಿನ ಈ ಐಡಿಯಾ ನೋಡಿದ ಮುಂಬೈ ಮತ್ತು ಪುಣೆಯ ಜನರು, ತಮ್ಮ ನಗರಗಳಲ್ಲೂ ಇಂಥದ್ದೇ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಆಗ್ರಹಿಸುತ್ತಿದ್ದಾರೆ. "ನಮಗೂ ಮುಂಬೈನಲ್ಲಿ ಈ ವ್ಯವಸ್ಥೆ ಬೇಕು. ಕೆಲವು ಗಂಟೆಗಳ ಕಾಲ ಟ್ರಾಫಿಕ್ ನಿರ್ವಹಿಸಲು ನಾನು ಸಿದ್ಧ. ಈ ಕೆಲಸ ಎಷ್ಟು ಕಷ್ಟ ಎಂದು ಎಲ್ಲರಿಗೂ ಅರ್ಥವಾಗಲು ಇದೊಂದು ಉತ್ತಮ ಅವಕಾಶ" ಎಂದು ವ್ಯಕ್ತಿಯೊಬ್ಬರು ಬರೆದುಕೊಂಡಿದ್ದಾರೆ.

ಮತ್ತೊಬ್ಬರು ಪ್ರತಿಕ್ರಿಯಿಸಿ, "ಮುಂಬೈನಲ್ಲಿ ಈ ಯೋಜನೆ ಜಾರಿಯಾದರೆ ನಾನೇ ಮೊದಲು ಹೆಸರು ನೋಂದಾಯಿಸಿಕೊಳ್ಳುತ್ತೇನೆ. ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವಾಗ ಸಿಗುವ ಖುಷಿ ಬೇರೊಂದಿಲ್ಲ. ರಸ್ತೆಯಲ್ಲಿ ಕೇವಲ ಎರಡು ಗಂಟೆ ನಿಂತರೆ ಸಾಕು, ತಪ್ಪು ಯಾವಾಗಲೂ ರಸ್ತೆ ಅಥವಾ ಪೊಲೀಸರದ್ದಲ್ಲ, ಕೆಲವೊಮ್ಮೆ ನಮ್ಮದೇ ತಪ್ಪು ಎಂದು ಅರಿವಾಗುತ್ತದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+