Bengaluru Cool Cool: ನಗರದಲ್ಲಿ ಚಳಿ ಏರಿಕೆ, ತಾಪಮಾನ ಇಳಿಕೆ, ಹವಾಮಾನ ವರದಿ
ಬೆಂಗಳೂರು, ಡಿಸೆಂಬರ್ 12: ರಾಜಧಾನಿ ಬೆಂಗಳೂರಿನಲ್ಲಿ ಉತ್ತರ ಒಳನಾಡಿನಂತೆ ಬೇಸಿಗೆಯ ತಾಪಮಾನ ಈವರೆಗೆ ಕಂಡು ಬಂದಿತ್ತು. ಚಳಿಗಾಲದಲ್ಲೂ ಸಹ ಈ ಬಾರಿ ನಗರದಲ್ಲಿ ಅಷ್ಟಾಗಿ ಚಳಿ ಇರದೇ, ನಿರೀಕ್ಷಿತ ಮಳೆಯು ಬಾರದೇ ಬಿಸಿಲಿನ ವಾತಾವರಣ ಕಂಡು ಬಂದಿತ್ತು. ಆದರೆ ಇದಕ್ಕೆಲ್ಲ ಇನ್ನು ಮುಂದೆ ಬ್ರೇಕ್ ಬೀಳಲಿದೆ. ನಾಳೆಯಿಂದ ನಗರದಲ್ಲಿ ಚಳಿ ಆವರಿಸುವ ಮುನ್ಸೂಚನೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ವರದಿ ತಿಳಿಸಿದೆ.
ನಗರದಲ್ಲಿ ಚಳಿಗಾಲ ಆರಂಭವಾಗಿ ಎರಡು ತಿಂಗಳು (ಅಕ್ಟೋಬರ್ ಮತ್ತು ನವೆಂಬರ್) ಕಳೆದಿದೆ. ಈವರೆಗೆ ಅಷ್ಟಾಗಿ ಚಳಿ ಕಂಡು ಬಂದಿರಲಿಲ್ಲ. ವಾಡಿಕೆಯಷ್ಟು ಮಳೆಯು ಆಗದೇ ಉದ್ಯಾನ ನಗರಿ ಬೆಂಗಳೂರು ಬಿಸಿಲಿನ ಜಿಲ್ಲೆಗಳಂತಾಗಿತ್ತು. ಇದೀಗ ಮತ್ತೆ ತಂಪು ವಾತಾವರಣಕ್ಕೆ ಬೆಂಗಳೂರು ಮರಳಲಿದೆ.

ನಾಳೆ ಬುಧವಾರ ಡಿಸೆಂಬರ್ 13 ರಿಂದ ಬೆಂಗಳೂರಿನಲ್ಲಿ ತಾಪಮಾನ ಇನ್ನಷ್ಟು ಇಳಿಕೆಯಾಗಿ, ಬೆಳಗ್ಗೆ ಮತ್ತು ಸಂಜೆ ಚಳಿಯ ಪ್ರಮಾಣ ಹೆಚ್ಚಾಗಲಿದೆ. ಇವತ್ತು ಮಂಗಳವಾರವೇ ಚಳಿ ಹೆಚ್ಚಾಗಿದ್ದನ್ನು ನಾವು ಗಮನಿಸಬಹುದಾಗಿದೆ. ಈ ಹಿಂದೆ ನಗರದ ತಾಪಮಾನ ಕನಿಷ್ಠ 18-19 ಡಿಗ್ರಿ ಸೆಲ್ಸಿಯಸ್ ಇತ್ತು. ಗರಿಷ್ಠ ತಾಪಮಾನ 28 ಆಸುಪಾಸು ದಾಖಲಾಗುತ್ತಿತ್ತು.
ನಗರದ ಕನಿಷ್ಠ ತಾಪಮಾನ 16 ಡಿ.ಸೆ.ಗೆ ಇಳಿಕೆ
ಆದರೆ ನಾಳೆಯಿಂದ ಕನಿಷ್ಠ ತಾಪಮಾನ ಮತ್ತಷ್ಟು ಇಳಿಕೆ ಆಗಲಿದೆ. ಅಂದರೆ ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆ ಆಗುವ ಮೂಲಕ ನಗರದಲ್ಲಿ ಚಳಿ ಹೆಚ್ಚಾಗಲಿದೆ. ಈ ವೇಳೆ ಗರಿಷ್ಠ ತಾಪಮಾನ ಎಂದಿನಂತೆ ಸಾಮಾನ್ಯವಾಗಿರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಡಿಸೆಂಬರ್ 18ರವರೆಗೆ ಚಳಿ ಪ್ರಯಾಣ ನೋಡುವದಾರೆ, ನಾಳೆ ಬುಧವಾರ ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್, ಗುರುವಾರವೂ 16, ಶುಕ್ರವಾರ 17 ಮತ್ತು ಶನಿವಾರ 18ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ. ನಂತರ ಭಾನುವಾರ ಮತ್ತೆ ವಾತಾವರಣದಲ್ಲಿ ಚಳಿ ಹೆಚ್ಚಾಗಲಿದ್ದು, ಅಂದು 17 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಕಂಡು ಬರಲಿದೆ. ಈ ಮೂಲಕ ಈವಾರಂತ್ಯವು ಸಹ ಚಳಿಯಿಂದ ಕೂಡಿರಲಿದೆ ಎಂದು ಹೇಳಲಾಗುತ್ತಿದೆ.

ರಾಜಧಾನಿಯಲ್ಲಿ ಹೆಚ್ಚಲಿದೆ ಚಳಿ
ರಾಜಧಾನಿ ಬೆಂಗಳೂರಿಗೆ ಮುಂದಿನ ದಿನಗಳಲ್ಲಿ ಹಿಂಗಾರು ಮಳೆ ದುರ್ಬಲವಾಗಿರಲಿದೆ. ಮಳೆ ಮುನ್ಸೂಚನೆಗಳು ನಗರದಕ್ಕೆ ಸದ್ಯಕ್ಕೆ ಇಲ್ಲದಾಗಿದೆ. ಹೀಗಾಗಿ ಮಧ್ಯಾಹ್ನ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ನಷ್ಟು ದಾಖಲಾಗಬಹುದು ಎಂದು ಹವಾಮಾನ ಮುನ್ಸೂಚನೆ ವರದಿ ತಿಳಿಸಿದೆ.
ರಾಜ್ಯ ಎಲ್ಲ ಜಿಲ್ಲೆಗಳ ಪೈಕಿ ವಿಜಯಪುರದಲ್ಲಿ ಭಾರೀ ಚಳಿ
ಬೆಂಗಳೂರು ಹೊರತುಪಡಿಸಿದರೆ ರಾಜ್ಯದ ವಿಜಯಪುರ ಜಿಲ್ಲೆಯಲ್ಲಿ ಅತ್ಯಧಿಕ ಚಳಿ ವರದಿ ಆಗಿದೆ. ಇಲ್ಲಿ12 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಇನ್ನುಳಿದಂತೆ ಬೀದರ್ ಮತ್ತು ಚಿಕ್ಕಮಗಳೂರಿನಲ್ಲಿ 15 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗುವ ಮೂಲಕ ಚಳಿ ಹೆಚ್ಚಾಗಿದೆ.
ಉಳಿದಂತೆ ರಾಯಚೂರಿನಲ್ಲಿ 16, ಬಾಗಲಕೋಟೆಯಲ್ಲಿ 16, ಗದಗ ಮತ್ತು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸಹ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇನ್ನೂ ರಾಜ್ಯದ ಗರಿಷ್ಠ ತಾಪಮಾನ ಕಾರವಾರದಲ್ಲಿ 35 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಐಎಂಡಿ ಹವಾಮಾನ ವರದಿ ಮಾಹಿತಿ ನೀಡಿದೆ.












Click it and Unblock the Notifications