Bengaluru Temperature: ನಗರದಲ್ಲಿ ತಾಪಮಾನ ಏರಿಕೆ, ಹಾಗಾದ್ರೆ ಮಳೆ ಮುನ್ಸೂಚನೆ ಇಲ್ಲವೇ!
ಬೆಂಗಳೂರು, ಡಿಸೆಂಬರ್ 04: ರಾಜಧಾನಿ ಬೆಂಗಳೂರು ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಹವಾಮಾನ ವಿಚಾರದಲ್ಲಿ ಭಾರೀ ಬದಲಾವಣೆಗೆ ಸಾಕ್ಷಿಯಾಗುತ್ತಿದೆ. ನಗರದಲ್ಲಿ ಮೇ ತಿಂಗಳಿನಲ್ಲಿ ಅಬ್ಬರಿಸುತ್ತಿದ್ದ ಮಳೆ, ಪ್ರಸಕ್ತ ವರ್ಷ ಜೂನ್ ತಿಂಗಳಲ್ಲಿ ಒಂದೇ ಒಂದು ಹನಿ ಮಳೆ ಬೀಳದೇ 'ಶೂನ್ಯ ಮಳೆ' ತಿಂಗಳ ಪರಿಸ್ಥಿತಿ ನಿರ್ಮಿಸಿತ್ತು. ಇತ್ತೀಚಿನ ದಿನಗಳಲ್ಲಿ ಬಿಸಿಲು ಸಹಿತ ಭಾರೀ ಮಳೆ ದಾಖಲಾಗುತ್ತಿದೆ.
ಇದೀಗ ಚಂಡಮಾರುತ ಫೆಂಗಲ್ ಅಬ್ಬರದ ಮಧ್ಯೆ ಬೆಂಗಳೂರಿನಲ್ಲಿ ತಾಪಮಾನ ದಿಢೀರ್ ಏರಿಕೆ ಆಗಿದೆ. ಕಳೆದ 24 ಗಂಟೆಗಳ ಅಂತರದಲ್ಲಿ ನಗರ ಜನರು ಹವಾಮಾನದಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತಿದ್ದಾರೆ.

ಒಂದು ವಾರದಿಂದ ಇದ್ದ ಮಬ್ಬು ವಾತಾವರಣ, ಮೈಕೊರೆವ ಚಳಿ, ಜಿಟಿ ಜಿಟಿ ಮತ್ತು ವ್ಯಾಪಕ ಮಳೆಗೆ ತತ್ತರಿಸಿದ್ದ ಜನರು ದಿಢೀರ್ ಬಿಸಿಲು ದರ್ಶನಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಹೀಗೆ ಬೆಳಗ್ಗೆ -ರಾತ್ರಿ ಚಳಿ, ಮಧ್ಯಾಹ್ನ ಬಿಸಿಲು ಹಾಗೂ ಜೋರು ಮಳೆ ಕಂಡು ಏನಾಗುತ್ತಿದೆ ಬೆಂಗಳೂರಿನಲ್ಲಿ ಎಂದು ಆಲೋಚಿಸುವವರೇ ಹೆಚ್ಚಾಗಿದ್ದಾರೆ.
ಯಾವಾಗ ಕೊಡೆ ಒಯ್ಯಬೇಕು? ಯಾವಾಗ ಬೆಚ್ಚಗಿನ ಧಿರಿಸು ಧರಿಸಬೇಕು? ಯಾವ ಕ್ಷಣದಲ್ಲಿ ಹವಾಮಾನದಲ್ಲಿ ಏನು ಬದಲಾವಣೆಗಳು ಆಗುತ್ತವೆಯೋ, ಸ್ಮಾರ್ಟ್ ಫೋನ್ ನಲ್ಲಿನ ವೆದರ್ ಅಲರ್ಟ್ ಏನು ಮುನ್ಸೂಚನೆ ಕೊಡುತ್ತದೆಯೋ? ಎಂಬುದು ತಿಳಿಯದಾಗಿದೆ. ಅಷ್ಟರ ಮಟ್ಟಿಗೆ ಗಂಟೆಗಳಲ್ಲಿ, ಕೆಲವೊಮ್ಮೆ ನಿಮಿಷಗಳಲ್ಲಿ ಹವಾಮಾನ ಬದಲಾವಣೆ ಆಗುತ್ತಿದೆ. ಇದಕ್ಕೆ ಕಾರಣವೇನು ಎಂದು ಅನೇಕರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.

ಇಂದು ಬುಧವಾರ ಡಿಸೆಂಬರ್ 04ರಂದು ಬೆಳಗ್ಗೆಯಿಂದಲೇ ಬಿಸಿಲಿನ ದರ್ಶನವಾಗಿದೆ. ಇಂದು ಗರಿಷ್ಠ 27-28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಗರಿಷ್ಠ ತಾಪಮಾನದಲ್ಲಿ ಹೆಚ್ಚಳವಾಗಿದೆ. ಇದು ಎರಡು ದಿನಕ್ಕೂ ಮೊದಲು ಗರಿಷ್ಠ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಕನಿಷ್ಠ 18-19 ಡಿಗ್ರಿ ಸೆಲ್ಸಿಯಸ್ ಕಂಡ ಬರುತ್ತಿದೆ.
ಎರಡು ದಿನ ಹಗುರ ಮಳೆ: ಒಣ ಹವೆ ಮುಂದುವರಿಕೆ
ಜೋರಾಗಿದ್ದ ಸುರಿಯುತ್ತಿದ್ದ ಮಳೆ ಬೆಂಗಳೂರಿಗೆ ಬಿಡುವು ಕೊಡುವ ಸಾಧ್ಯತೆ ಇದೆ. ಈ ಮೂಲಕ ಚಂಡಮಾರುತ ಅಬ್ಬರ ತಗ್ಗಿದೆ. ನಗರದಲ್ಲಿ ಮುಂದಿನ 48 ಗಂಟೆಗಳವರೆಗೆ ಕೆಲವೆಡೆ ಮಾತ್ರವೇ ಹಗುರ ಮಳೆ ಆಗುವ ಸಾಧ್ಯತೆ ಇದೆ. ಎಲ್ಲಿಯೂ ಸಾಧಾರಣ, ಭಾರೀ ಮಳೆಯ ಲಕ್ಷಣಗಳು ಇಲ್ಲ. ಸದ್ಯದ ಮುನ್ಸೂಚನೆ ಪ್ರಕಾರ, ಸಾರ್ವಜನಿಕರು, ವ್ಯಾಪಾರಸ್ಥರು ನಿಶ್ಚಿಂತೆಯಿಂದ ಓಡಾಡಬಹುದು.
ಮುಂದಿನ ಎರಡು ದಿನ ಹಗುರ ಮಳೆ ಬರಲಿದ್ದು, ನಂತರ ನಗರದಲ್ಲಿ ಒಣ ಹವೆ ಮುಂದುವರಿಯಲಿದೆ. ಕೆಲವೊಮ್ಮೆ ಮೋಡ ಕವಿದ ವಾತಾವರಣ ಕಂಡು ಬಂದರೂ ಸಹಿತ ವ್ಯಾಪಕ ಮಳೆ ಆಗುವುದು ಅನುಮಾನ ಎನ್ನಲಾಗಿದೆ. ಶುಷ್ಕ ವಾತಾವರಣ ಜೊತೆಗೆ ಬೆಳಗ್ಗೆ, ರಾತ್ರಿ ಚಳಿ, ಮಂಜು ಹೆಚ್ಚಾಗುವ ನಿರೀಕ್ಷೆ ಇದೆ.
ನಗರದ ವಿವಿಧೆಡೆ ಬಿದ್ದ ಮಳೆ, ತಾಪಮಾನ ವಿವರ
ಹವಾಮಾನ ಇಲಾಖೆ ಬುಧವಾರ ಬೆಳಗ್ಗೆ ನೀಡಿರುವ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಬೆಂಗಳೂರು ನಗರದಲ್ಲಿ 21 ಮಿಲಿ ಮೀಟರ್ ಮಳೆ ಆಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIAL) 2 ಮಿ.ಮೀ, ಬೆಂಗಳೂರು ಎಚ್‌ಎಎಲ್ ಏರ್‌ಪೋರ್ಟ್‌ನಲ್ಲಿ 0.7.ಮಿ.ಮೀ ಮಳೆ ದಾಖಲಾಗಿದೆ.
ಇನ್ನು ಇದೇ ಪ್ರದೇಶಗಳಲ್ಲಿ ಕ್ರಮವಾಗಿ ನೆನ್ನೆಯ ತಾಪಮಾನ ನೋಡುವುದಾದರೆ, ಗರಿಷ್ಠ 25.1 ಮತ್ತು ಕನಿಷ್ಠ 19.2 ಡಿಗ್ರಿಸೆಲ್ಸಿಯಸ್, ಗರಿಷ್ಟ 28.7 ಮತ್ತು ಕನಿಷ್ಠ 18.5 ಹಾಗೂ ಗರಿಷ್ಠ 25.8 ಮತ್ತು ಕನಿಷ್ಠ 18.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.












Click it and Unblock the Notifications