ಬೆಂಗಳೂರು: ನಕಲಿ ಟ್ರಾಫಿಕ್ ಫೈನ್ ಲಿಂಕ್ ಕ್ಲಿಕ್ ಮಾಡಿ 7.22 ಲಕ್ಷ ರೂ. ಕಳೆದುಕೊಂಡ ಟೆಕ್ಕಿ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೈಬರ್ ವಂಚಕರ ಹಾವಳಿ ದಿನೇ ದಿನೇ ಮಿತಿಮೀರುತ್ತಿದ್ದು, ವಿದ್ಯಾವಂತರು ಹಾಗೂ ಐಟಿ ಉದ್ಯೋಗಿಗಳೇ ಇವರ ಬಲೆಗೆ ಅತಿ ಸುಲಭವಾಗಿ ಬೀಳುತ್ತಿದ್ದಾರೆ. ಇದೀಗ 'ಟ್ರಾಫಿಕ್ ಫೈನ್' (ಸಂಚಾರಿ ನಿಯಮ ಉಲ್ಲಂಘನೆ ದಂಡ) ಕಟ್ಟುವಂತೆ ಬಂದ ನಕಲಿ ಎಸ್ಎಂಎಸ್ ಲಿಂಕ್ ಅನ್ನು ಕ್ಲಿಕ್ ಮಾಡಿದ ಎಲೆಕ್ಟ್ರಾನಿಕ್ಸ್ ಸಿಟಿಯ 37 ವರ್ಷದ ಟೆಕ್ಕಿಯೊಬ್ಬರು ಬರೋಬ್ಬರಿ 7.22 ಲಕ್ಷ ರೂಪಾಯಿ ಕಳೆದುಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ವಂಚನೆ ನಡೆದದ್ದು ಹೇಗೆ?
ಪೊಲೀಸ್ ಮೂಲಗಳ ಮಾಹಿತಿಯ ಪ್ರಕಾರ, ಎಲೆಕ್ಟ್ರಾನಿಕ್ಸ್ ಸಿಟಿ ನಿವಾಸಿಯಾಗಿರುವ ಸಂತ್ರಸ್ತ ಟೆಕ್ಕಿಯ ಮೊಬೈಲ್‌ಗೆ ಮಾರ್ಚ್ 26 ರಂದು ಅಪರಿಚಿತ ಸಂಖ್ಯೆಯಿಂದ ಸಂದೇಶವೊಂದು ಬಂದಿತ್ತು. ಅದರಲ್ಲಿ, "ನೀವು ಸಂಚಾರಿ ನಿಯಮ ಉಲ್ಲಂಘಿಸಿದ್ದು, 1,120 ರೂ. ದಂಡ ವಿಧಿಸಲಾಗಿದೆ. ದಂಡದ ವಿವರಗಳನ್ನು ಪರಿಶೀಲಿಸಲು ಮತ್ತು ಪಾವತಿಸಲು ಈ ಲಿಂಕ್ ಕ್ಲಿಕ್ ಮಾಡಿ" ಎಂದು ಸೂಚಿಸಲಾಗಿತ್ತು. ಇತ್ತೀಚೆಗಷ್ಟೇ ಹೊಸ ಕಾರು ಖರೀದಿಸಿದ್ದ ಈ ಟೆಕ್ಕಿ, ವಾಹನ ಸಂಬಂಧಿತ ಸೇವೆಗಳಿಗಾಗಿ ಸರ್ಕಾರದ ಅಧಿಕೃತ 'mParivahan' ಆ್ಯಪ್ ಅನ್ನು ಆಗಾಗ ಬಳಸುತ್ತಿದ್ದರು. ಹೀಗಾಗಿ, ಈ ದಂಡದ ಮೆಸೇಜ್ ಕೂಡ ಅಸಲಿ ಇರಬಹುದು ಎಂದು ಸಂಪೂರ್ಣವಾಗಿ ನಂಬಿ ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದಾರೆ.

ಸಂತ್ರಸ್ತರು ಆ ಲಿಂಕ್ ಕ್ಲಿಕ್ ಮಾಡಿದ ತಕ್ಷಣ, ಅಸಲಿ 'mParivahan' ಆ್ಯಪ್‌ನಂತೆಯೇ ಬಹುತೇಕ ಹೋಲುವ ನಕಲಿ ಅಪ್ಲಿಕೇಶನ್ ಒಂದನ್ನು ಡೌನ್‌ಲೋಡ್ ಮಾಡಲು ಪ್ರೇರೇಪಿಸಲಾಗಿದೆ. ಇದು ಅಸಲಿ ಆ್ಯಪ್ ಇರಬೇಕು ಎಂದು ಭಾವಿಸಿ ಅದನ್ನು ಇನ್‌ಸ್ಟಾಲ್ ಮಾಡಿದ್ದಾರೆ. ಆದರೆ, ಇನ್‌ಸ್ಟಾಲ್ ಆದ ಕೆಲವೇ ಕ್ಷಣಗಳಲ್ಲಿ ಆ ಆ್ಯಪ್ ಮೊಬೈಲ್ ಸ್ಕ್ರೀನ್‌ನಿಂದ ಕಾಣೆಯಾಗಿದೆ(Disappear). ಇದಾದ ಸ್ವಲ್ಪ ಹೊತ್ತಿನಲ್ಲೇ ಟೆಕ್ಕಿಯ ಮೊಬೈಲ್‌ಗೆ ಬ್ಯಾಂಕ್‌ನಿಂದ ಸಾಲು ಸಾಲು ಹಣ ಕಡಿತಗೊಂಡ ಮೆಸೇಜ್‌ಗಳು ಬರಲು ಶುರುವಾಗಿವೆ.
7.22 ಲಕ್ಷ ರೂ. ದೋಚಿದ ಖದೀಮರು
ಗಾಬರಿಗೊಂಡು ಬ್ಯಾಂಕ್ ಖಾತೆ ಹಾಗೂ ಮೆಸೇಜ್‌ಗಳನ್ನು ಪರಿಶೀಲಿಸಿದಾಗ, ತಮ್ಮ ಕ್ರೆಡಿಟ್ ಕಾರ್ಡ್ ಬಳಸಿ ವಿವಿಧ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅನಧಿಕೃತ ವಹಿವಾಟುಗಳನ್ನು ನಡೆಸಿರುವುದು ಕಂಡುಬಂದಿದೆ. ಕೇವಲ ಕೆಲವೇ ನಿಮಿಷಗಳ ಅಂತರದಲ್ಲಿ ವಂಚಕರು ಟೆಕ್ಕಿಯ ಕ್ರೆಡಿಟ್ ಕಾರ್ಡ್‌ನಿಂದ ಒಟ್ಟು 7.22 ಲಕ್ಷ ರೂ.ಗಳನ್ನು ದೋಚಿದ್ದಾರೆ.
ಸಂತ್ರಸ್ತರು ಪೊಲೀಸರಿಗೆ ನೀಡಿರುವ ಮಾಹಿತಿಯ ಪ್ರಕಾರ, ಅವರ ಕ್ರೆಡಿಟ್ ಕಾರ್ಡ್ ಸುಮಾರು 12 ಲಕ್ಷ ರೂ.ಗಳ ಗರಿಷ್ಠ ಮಿತಿಯನ್ನು ಹೊಂದಿತ್ತು. ಅದೃಷ್ಟವಶಾತ್, ಅನುಮಾನಾಸ್ಪದ ಮತ್ತು ಸತತ ವಹಿವಾಟುಗಳನ್ನು ಗಮನಿಸಿದ ಬ್ಯಾಂಕ್‌ನ ಸೈಬರ್ ಭದ್ರತಾ ವ್ಯವಸ್ಥೆಯು ತಕ್ಷಣವೇ ಅಲರ್ಟ್ ಆಗಿ ಕಾರ್ಡ್ ಅನ್ನು ಬ್ಲಾಕ್ ಮಾಡಿದೆ. ಇದರಿಂದಾಗಿ ಖಾತೆಯಲ್ಲಿದ್ದ ಉಳಿದ ಹಣ ವಂಚಕರ ಪಾಲಾಗುವುದು ತಪ್ಪಿದೆ.
ಸೈಬರ್ ಪೊಲೀಸರ ಎಚ್ಚರಿಕೆ
ಈ ಘಟನೆ ಕುರಿತು ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿದೆ. ಮಾಲ್‌ವೇರ್ (Malware) ಹೊಂದಿದ್ದ ನಕಲಿ ಆ್ಯಪ್ ಮೂಲಕ ವಂಚಕರು ಟೆಕ್ಕಿಯ ಮೊಬೈಲ್ ನಿಯಂತ್ರಣ ಪಡೆದು, ಕ್ರೆಡಿಟ್ ಕಾರ್ಡ್ ವಿವರಗಳು ಮತ್ತು ಒಟಿಪಿ ಕದ್ದು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಸಾರ್ವಜನಿಕರು ಅಪರಿಚಿತ ಮೊಬೈಲ್ ಸಂಖ್ಯೆಗಳಿಂದ ಬರುವ ಟ್ರಾಫಿಕ್ ಫೈನ್, ವಿದ್ಯುತ್ ಬಿಲ್ ಅಥವಾ ಬ್ಯಾಂಕ್ ಕೆವೈಸಿ ಲಿಂಕ್‌ಗಳನ್ನು ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬಾರದು. ಅಧಿಕೃತ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆ್ಯಪ್ ಸ್ಟೋರ್ ಹೊರತುಪಡಿಸಿ ಎಪಿಕೆ (APK) ಫೈಲ್‌ಗಳ ಮೂಲಕ ಯಾವುದೇ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಬಾರದು. ಸಂಚಾರಿ ದಂಡವನ್ನು ಪಾವತಿಸಲು ಯಾವಾಗಲೂ ಅಧಿಕೃತ 'Karnataka One' ಅಥವಾ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗಳನ್ನು ಮಾತ್ರ ಬಳಸುವಂತೆ ಸೈಬರ್ ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications