50 ಲಕ್ಷ ಸಂಬಳವಿದ್ದರೂ ಐಫೋನ್, ಐಷಾರಾಮಿ ಕಾರು ಬೇಡ: ಹೊಸ ಟ್ರೆಂಡ್ ಸೃಷ್ಟಿಸಿದ 27 ವರ್ಷದ ಬೆಂಗಳೂರು ಟೆಕ್ಕಿ
ಬೆಂಗಳೂರು: ಐಟಿ ಉದ್ಯೋಗಿ ಅಥವಾ ಟೆಕ್ಕಿ ಎಂದಾಕ್ಷಣ ಕೈತುಂಬಾ ಸಂಬಳ, ವಾರಾಂತ್ಯದಲ್ಲಿ ಪಾರ್ಟಿ, ದುಬಾರಿ ಬಟ್ಟೆ, ಕೈಲೊಂದು ಲೇಟೆಸ್ಟ್ ಐಫೋನ್, ಐಷಾರಾಮಿ ಕಾರು ಹೀಗೆ ಆಡಂಬರದ ಜೀವನಶೈಲಿಯೇ ಕಣ್ಮುಂದೆ ಬರುತ್ತದೆ. ಆದರೆ, ಇಲ್ಲೊಬ್ಬರು 27 ವರ್ಷದ ಬೆಂಗಳೂರಿನ ಟೆಕ್ಕಿ ಈ ಎಲ್ಲಾ ಸಾಮಾನ್ಯ ಕಲ್ಪನೆಗಳನ್ನು ಸಂಪೂರ್ಣವಾಗಿ ಹುಸಿಗೊಳಿಸಿದ್ದಾರೆ. ವರ್ಷಕ್ಕೆ ಬರೋಬ್ಬರಿ 50 ಲಕ್ಷ ರೂ. ಗಳಿಗೂ ಅಧಿಕ ವೇತನ ಪಡೆಯುತ್ತಿದ್ದರೂ, ಇವರು ಮಾತ್ರ ಐಷಾರಾಮಿ ವಸ್ತುಗಳಿಗಿಂತ ಭವಿಷ್ಯದ ಉಳಿತಾಯ ಹಾಗೂ ನೆಮ್ಮದಿಯ ಜೀವನಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಈ ಮೂಲಕ ಇಂದಿನ ಯುವಜನತೆಗೆ ಹಣಕಾಸು ನಿರ್ವಹಣೆಯ ಅತ್ಯುತ್ತಮ ಪಾಠವನ್ನು ಹೇಳಿಕೊಟ್ಟಿದ್ದಾರೆ.
ಡೇಟಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಈ ಯುವತಿ, ಇನ್‌ಸ್ಟಾಗ್ರಾಮ್‌ನಲ್ಲಿ @thinking.mori ಎಂಬ ಖಾತೆಯ ಮೂಲಕ ತಮ್ಮ ಜೀವನಶೈಲಿ ಮತ್ತು ಹಣಕಾಸು ನಿರ್ಧಾರಗಳ ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಯುವಕ-ಯುವತಿಯರು ಪ್ರತಿಷ್ಠೆಗಾಗಿ ಖರೀದಿಸುವ ಲೇಟೆಸ್ಟ್ ಮಾಡೆಲ್‌ನ ಐಫೋನ್, ಝರಾ (Zara) ದಂತಹ ಬ್ರಾಂಡೆಡ್ ಬಟ್ಟೆಗಳು, ದುಬಾರಿ ಬೆಲೆಯ ಹ್ಯಾಂಡ್‌ಬ್ಯಾಗ್‌ಗಳು ಹಾಗೂ ಐಷಾರಾಮಿ ಕಾರುಗಳನ್ನು ತಾವು ಉದ್ದೇಶಪೂರ್ವಕವಾಗಿಯೇ ಖರೀದಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇವು ಕೇವಲ ತಾತ್ಕಾಲಿಕ ಖುಷಿ ನೀಡುವ ವಸ್ತುಗಳಷ್ಟೇ ಹೊರತು, ದೀರ್ಘಕಾಲಿಕ ನೆಮ್ಮದಿ ನೀಡುವುದಿಲ್ಲ ಎಂಬುದು ಅವರ ನಂಬಿಕೆಯಾಗಿದೆ.

ಇದರ ಬದಲಾಗಿ ಅವರು "ಅನುಭವಗಳಿಗೆ" ಹಣ ಹೂಡಿಕೆ ಮಾಡಲು ಇಷ್ಟಪಡುತ್ತಾರೆ. ಅಂದರೆ, ಹೊಸ ಜಾಗಗಳ ಪ್ರವಾಸ, ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯುವುದು ಅವರ ಮೊದಲ ಆದ್ಯತೆಯಾಗಿದೆ. ಇಷ್ಟೊಂದು ದೊಡ್ಡ ಮೊತ್ತದ ಸಂಬಳ ಪಡೆಯುತ್ತಿದ್ದರೂ, ಐಷಾರಾಮಿ ಜೀವನ ಏಕೆ ನಡೆಸುತ್ತಿಲ್ಲ ಎಂಬುದಕ್ಕೂ ಅವರು ಸ್ಪಷ್ಟನೆ ನೀಡಿದ್ದಾರೆ. "ನನ್ನ ಕೈಯಲ್ಲಿ ಹಣವಿದ್ದರೂ, ಅದರ ಜೊತೆಗೆ ಜವಾಬ್ದಾರಿಗಳು ಮತ್ತು ಸಾಲಗಳೂ ಇವೆ. ಹಾಗಾಗಿ ವಸ್ತುಗಳಿಗಿಂತ ಅನುಭವಗಳಿಗೆ ನಾನು ಆದ್ಯತೆ ನೀಡುತ್ತೇನೆ. ದುಬಾರಿ ಹ್ಯಾಂಡ್‌ಬ್ಯಾಗ್‌ಗಳೆಂದರೆ ನನಗೂ ಇಷ್ಟ, ಆದರೆ ಅವುಗಳಿಗಿಂತ ನನ್ನ ಹಣಕಾಸಿನ ಭದ್ರತೆ ಹಾಗೂ ಶಿಸ್ತು ನನಗೆ ಹೆಚ್ಚು ಮುಖ್ಯ" ಎಂದು ಅವರು ವಿವರಿಸಿದ್ದಾರೆ.
ತಮ್ಮ ಹೆತ್ತವರಿಗಾಗಿ ಅವರು ಇತ್ತೀಚೆಗೆ ಒಂದು ಮನೆಯನ್ನು ಖರೀದಿಸಿದ್ದು, ಅದಕ್ಕಾಗಿ ಪ್ರತಿ ತಿಂಗಳು 30,000 ರೂ. ಇಎಂಐ ಕಟ್ಟುತ್ತಿದ್ದಾರೆ. "ಮನೆ ಖರೀದಿಸುವುದು ಆರ್ಥಿಕವಾಗಿ ಹೊರೆ ಎಂಬುದು ನನಗೆ ತಿಳಿದಿದೆ. ಆದರೆ, ಕೆಲವು ನಿರ್ಧಾರಗಳು ಭಾವನಾತ್ಮಕವಾಗಿರುತ್ತವೆ. ನನಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಪೋಷಕರಿಗಾಗಿ ಏನಾದರೂ ಮಾಡಬೇಕು ಎಂಬ ಕಾರಣಕ್ಕೆ ಈ ಮನೆ ಖರೀದಿಸಿದೆ" ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಈಕೆ ಪ್ರವಾಸದ ಬಗ್ಗೆಯೂ ಅಷ್ಟೇ ಆಸಕ್ತಿ ಹಾಗೂ ಒಲವು ಹೊಂದಿದ್ದಾರೆ. "ನನ್ನನ್ನು ಹತ್ತಿರದಿಂದ ಬಲ್ಲವರಿಗೆ ನಾನು ಪ್ರವಾಸಕ್ಕಾಗಿ 10 ಲಕ್ಷ ರೂಪಾಯಿಗಳನ್ನಾದರೂ ಸುಲಭವಾಗಿ ಖರ್ಚು ಮಾಡುತ್ತೇನೆ ಎಂಬುದು ತಿಳಿದಿದೆ. 2025ರ ವರ್ಷದಲ್ಲಿಯೇ ನಾನು ನನ್ನ ಪ್ರವಾಸಗಳಿಗಾಗಿ ಸುಮಾರು 7 ಲಕ್ಷ ರೂ. ಖರ್ಚು ಮಾಡಿದ್ದೇನೆ" ಎಂದು ಅವರು ಮಾಹಿತಿ ನೀಡಿದ್ದಾರೆ. ಪ್ರವಾಸ, ಬಾಡಿಗೆ ಮತ್ತು ಇತರೆ ಖರ್ಚುಗಳ ನಡುವೆಯೂ ಅವರು ಭವಿಷ್ಯಕ್ಕಾಗಿ ದೊಡ್ಡ ಮೊತ್ತವನ್ನು ಉಳಿತಾಯ ಮಾಡುತ್ತಿದ್ದಾರೆ ಎಂಬುದು ಅಚ್ಚರಿಯ ಸಂಗತಿ.
ಪ್ರಸ್ತುತ ತಿಂಗಳಿಗೆ ಅಂದಾಜು 3 ಲಕ್ಷ ರೂ. ಇನ್-ಹ್ಯಾಂಡ್ ಸಂಬಳ ಪಡೆಯುತ್ತಿರುವ ಈಕೆ, ಅದರಲ್ಲಿ ಬರೋಬ್ಬರಿ 1 ಲಕ್ಷ ರೂಪಾಯಿಗಳನ್ನು ನೇರವಾಗಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಇದಲ್ಲದೆ, ಯಾವುದೇ ತುರ್ತು ಪರಿಸ್ಥಿತಿ ಎದುರಾದರೂ ಕನಿಷ್ಠ ಆರು ತಿಂಗಳ ಕಾಲ ನಿಶ್ಚಿಂತೆಯಿಂದ ಜೀವನ ನಡೆಸಲು ಬೇಕಾಗುವಷ್ಟು ಹಣವನ್ನು 'ಎಮರ್ಜೆನ್ಸಿ ಫಂಡ್' ರೂಪದಲ್ಲಿ ಕೂಡಿಟ್ಟಿದ್ದಾರೆ. ತೋರಿಕೆಯ ಜೀವನಕ್ಕಿಂತ, ಆರ್ಥಿಕ ಸ್ವಾತಂತ್ರ್ಯ ಮತ್ತು ಮಾನಸಿಕ ನೆಮ್ಮದಿಯೇ ನಿಜವಾದ ಶ್ರೀಮಂತಿಕೆ ಎಂಬುದನ್ನು ಈ ಯುವತಿ ತಮ್ಮ ಸ್ಫೂರ್ತಿದಾಯಕ ಕಥೆಯ ಮೂಲಕ ಸಾಬೀತುಪಡಿಸಿದ್ದಾರೆ.














Click it and Unblock the Notifications