ರಸ್ತೆ ಗುಂಡಿ ಪತ್ತೆಹಚ್ಚಿ ಆಟೋಮ್ಯಾಟಿಕ್ ಆಗಿ ದೂರು ದಾಖಲಿಸುವ ಹೊಸ ಎಐ ಆ್ಯಪ್ ಕಂಡು ಹಿಡಿದ ಬೆಂಗಳೂರಿನ ಟೆಕ್ಕಿ

ಬೆಂಗಳೂರು: ಸಿಲಿಕಾನ್ ಸಿಟಿ ಅಂದ್ರೆ ಮೊದಲು ನೆನಪಾಗೋದು ಎಲ್ಲರಿಗೂ ಟ್ರಾಫಿಕ್ ಹಾಗೂ ರಸ್ತೆ ಗುಂಡಿಗಳೇ ಅಲ್ವಾ? ಅದ್ರಲ್ಲಂತೂ, ಮಳೆಗಾಲ ಬಂತು ಅಂದ್ರೆ ಸಾಕು, ಗುಂಡಿಗಳಿಂದಾಗಿ ವಾಹನ ಸವಾರರು ಜೀವ ಕೈಯಲ್ಲಿಡಿದು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ರಸ್ತೆಯಲ್ಲಿನ ಗುಂಡಿಗಳಿಂದಾಗಿ ವಾಹನಗಳು ಹಾಳಾಗುವುದು ಮಾತ್ರವಲ್ಲದೆ, ದೇಶಾದ್ಯಂತ ಪ್ರತಿ ವರ್ಷ 2000ಕ್ಕೂ ಹೆಚ್ಚು ಮಂದಿ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಈ ಸಮಸ್ಯೆಯಿಂದ ಬೇಸತ್ತ ಬೆಂಗಳೂರಿನ ಇಂಜಿನಿಯರ್ ಒಬ್ಬರು ಇದಕ್ಕೆ ತಂತ್ರಜ್ಞಾನದ ಮೂಲಕವೇ ತಿರುಗೇಟು ನೀಡಲು ನಿರ್ಧರಿಸಿದ್ದಾರೆ. ರಸ್ತೆ ಗುಂಡಿಗಳನ್ನ ಪತ್ತೆಹಚ್ಚಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಆಟೋಮ್ಯಾಟಿಕ್ ಆಗಿ ದೂರು ನೀಡುವ ವಿನೂತನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಆ್ಯಪ್ ಒಂದನ್ನ ಇವರು ತಯಾರಿಸಿದ್ದಾರೆ.

Bengaluru Techie

ಪ್ರಸಿದ್ಧ ಉದ್ಯಮಿ ವೈಭವ್ ಸಿಸಿಂಟಿ ಅವರು ಈ ಕುರಿತಾದ ವಿಡಿಯೋವನ್ನು 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿದ್ದು, ಟೆಕ್ಕಿಯ ಈ ಅದ್ಭುತ ನಾವೀನ್ಯತೆಗೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಆ್ಯಪ್ ಹೇಗೆ ಕೆಲಸ ಮಾಡುತ್ತದೆ ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಆ್ಯಪ್ ಹೇಗೆ ಕೆಲಸ ಮಾಡುತ್ತದೆ?

ಈ ಯುವ ಟೆಕ್ಕಿಯು 'ಕೋಡೆಕ್ಸ್' ಎಂಬ ಎಐ ತಂತ್ರಜ್ಞಾನವನ್ನ ಬಳಸಿ ಈ ಆ್ಯಪ್ ಅನ್ನು ರೆಡಿ ಮಾಡಿದ್ದಾರೆ. ಈ ವ್ಯವಸ್ಥೆಯು ಪರಿಣಾಮಕಾರಿಯಾಗಿ ಕೆಲಸ ಮಾಡಲು ಅವರು ತಮ್ಮ ಕಾರಿನಲ್ಲಿ ಡ್ಯಾಶ್‌ಕ್ಯಾಮ್ , ಜಿಪಿಎಸ್ ಮತ್ತು ಆಕ್ಸಿಲರೋಮೀಟರ್ ಅನ್ನು ಅಳವಡಿಸಿದ್ದಾರೆ. ಕಾರು ಚಲಾಯಿಸುತ್ತಿರುವಾಗ ಈ ಕ್ಯಾಮೆರಾ ನಿರಂತರವಾಗಿ ರಸ್ತೆಯ ವಿಡಿಯೋವನ್ನು ರೆಕಾರ್ಡ್ ಮಾಡುತ್ತದೆ.

ಇದರಲ್ಲಿ ಅಳವಡಿಸಲಾಗಿರುವ 'ವಿಷನ್ ಮಾಡೆಲ್' ತಂತ್ರಜ್ಞಾನವು ರಸ್ತೆಯಲ್ಲಿ ಎದುರಾಗುವ ಗುಂಡಿಗಳನ್ನ ತಕ್ಷಣವೇ ಗುರುತಿಸಿ, ಅವುಗಳನ್ನ ಚಿಕ್ಕ, ಮಧ್ಯಮ ಮತ್ತು ದೊಡ್ಡ ಗುಂಡಿಗಳೆಂದು ವಿಂಗಡಿಸುತ್ತದೆ. ಬರಿಗಣ್ಣಿಗೆ ಸ್ಪೀಡ್ ಬ್ರೇಕರ್‌ನಂತೆ ಕಾಣುವ ಗುಂಡಿಗಳನ್ನ ಕೂಡ ಈ ಮಾಡೆಲ್ ನಿಖರವಾಗಿ ಸ್ಕ್ಯಾನ್ ಮಾಡಿ ಪತ್ತೆಹಚ್ಚುತ್ತದೆ.

ಗುತ್ತಿಗೆದಾರರ ಹೊಣೆಗಾರಿಕೆ ಪತ್ತೆ ಹಚ್ಚುವ ಕೋಡೆಕ್ಸ್

ಈ ಆ್ಯಪ್‌ನ ವಿಶೇಷವೆಂದರೆ, ಇದು ಕೇವಲ ಗುಂಡಿಗಳನ್ನ ಮಾತ್ರ ಪತ್ತೆಹಚ್ಚುವುದಿಲ್ಲ, ಬದಲಾಗಿ ಆ ರಸ್ತೆಯನ್ನ ಸರಿಪಡಿಸಬೇಕಾದ ಜವಾಬ್ದಾರಿ ಯಾರದ್ದು ಎಂಬುದನ್ನು ಸಹ ಹುಡುಕಿ ತೆಗೆಯುತ್ತದೆ. ವಾಸ್ತವವಾಗಿ, ಭಾರತದಲ್ಲಿ ನಿರ್ಮಾಣವಾಗುವ ಬಹುಪಾಲು ರಸ್ತೆಗಳು ವಾರಂಟಿ ಅವಧಿಯಲ್ಲಿರುತ್ತವೆ. ಅಂದರೆ, ರಸ್ತೆ ಹಾಳಾದರೆ ಅಥವಾ ಗುಂಡಿ ಬಿದ್ದರೆ ಅದನ್ನು ಉಚಿತವಾಗಿ ಸರಿಪಡಿಸಬೇಕಾದ ಕಾನೂನಾತ್ಮಕ ಜವಾಬ್ದಾರಿ ರಸ್ತೆ ನಿರ್ಮಿಸಿದ ಗುತ್ತಿಗೆದಾರನ ಮೇಲಿರುತ್ತದೆ.

ಟೆಕ್ಕಿ ಅಭಿವೃದ್ಧಿಪಡಿಸಿರುವ ಈ ಆ್ಯಪ್, ಸರ್ಕಾರದ ಸುಮಾರು 2,900ಕ್ಕೂ ಅಧಿಕ ಗುತ್ತಿಗೆ ದಾಖಲೆಗಳನ್ನು ಕ್ಷಣಮಾತ್ರದಲ್ಲಿ ಪರಿಶೀಲಿಸುತ್ತದೆ. ಆ ರಸ್ತೆಯ ನಿಖರವಾದ ಟೆಂಡರ್ ಸಂಖ್ಯೆ ಹಾಗೂ ಅದರ ನಿರ್ವಹಣೆಯ ಉಸ್ತುವಾರಿ ವಹಿಸಿರುವ ಅಧಿಕಾರಿಯನ್ನು ಪತ್ತೆ ಹಚ್ಚುತ್ತದೆ.

ಕೇವಲ 4 ಸೆಕೆಂಡುಗಳಲ್ಲಿ ದೂರು ಸಿದ್ಧ

ರಸ್ತೆಯಲ್ಲಿ ಒಮ್ಮೆ ಗುಂಡಿ ಪತ್ತೆಯಾದ ತಕ್ಷಣ, ಈ ಎಐ ಆ್ಯಪ್ ಕೇವಲ 4 ಸೆಕೆಂಡುಗಳಲ್ಲಿ ದೂರು ದಾಖಲಿಸಲು ಬೇಕಾದ ಪೂರ್ಣ ಮಾಹಿತಿಯನ್ನ ಸಿದ್ಧಪಡಿಸುತ್ತದೆ. ಅದರಲ್ಲಿ ಗುಂಡಿಯ ಫೋಟೋ, ನಿಖರವಾದ ಜಿಯೋ-ಲೊಕೇಶನ್, ಟೆಂಡರ್ ನಂಬರ್ ಮತ್ತು ಸಂಬಂಧಪಟ್ಟ ಅಧಿಕಾರಿಯ ಹೆಸರನ್ನ ಒಳಗೊಂಡ ದೂರು ಅಂದರೆ ಕಂಪ್ಲೇಂಟ್‌ ಫೈಲ್ ಆಗಲು ಸಿದ್ಧವಾಗುತ್ತದೆ.

ಈ ಟೆಕ್ಕಿ ಕಚೇರಿಗೆ ಹೋಗುವ ಒಂದೇ ಒಂದು ಡ್ರೈವ್‌ನಲ್ಲಿ ಬರೋಬ್ಬರಿ 12 ರಸ್ತೆ ಗುಂಡಿಗಳನ್ನ ಪತ್ತೆಹಚ್ಚಿದ್ದು, ಕೇವಲ ಕೆಲವೇ ನಿಮಿಷಗಳಲ್ಲಿ 12 ದೂರುಗಳನ್ನು ಈ ಆ್ಯಪ್ ಸಿದ್ಧಪಡಿಸಿದೆ.

ಸಾಮಾನ್ಯವಾಗಿ ರಸ್ತೆ ಗುಂಡಿಗಳ ಬಗ್ಗೆ ದೂರು ನೀಡಲು ಬಿಬಿಎಂಪಿ ಆ್ಯಪ್ ಅಥವಾ ಕಚೇರಿಗಳಿಗೆ ಅಲೆದಾಡಬೇಕಾಗುತ್ತದೆ. ಜೊತೆಗೆ, ಯಾವ ರಸ್ತೆ ಯಾವ ಅಧಿಕಾರಿಯ ವ್ಯಾಪ್ತಿಗೆ ಬರುತ್ತದೆ ಎಂಬುದು ಜನಸಾಮಾನ್ಯರಿಗೆ ತಿಳಿದಿರುವುದಿಲ್ಲ. ಆದರೆ, ಹೊಸ ಎಐ ಆ್ಯಪ್ ಈ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಿದೆ.

ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿಗೆ ಕಡಿವಾಣ ಹಾಕಲು ಹಾಗೂ ಗುತ್ತಿಗೆದಾರರನ್ನ ಹೊಣೆಗಾರರನ್ನಾಗಿ ಮಾಡಲು ಈ ತಂತ್ರಜ್ಞಾನ ಭವಿಷ್ಯದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+