ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಡೆಂಗ್ಯೂ ಪ್ರಕರಣಗಳು: ಇರಲಿ ಎಚ್ಚರಿಕೆ
ಬೆಂಗಳೂರು, ಜುಲೈ 14: ಮಳೆಗಾಲ ಶುರುವಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಕಾಯಿಲೆ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಡೆಂಗ್ಯೂ ಕಾಯಿಲೆ ಈ ಬಾರಿ ಹೆಚ್ಚಾಗಿ ಬಾಧಿಸುತ್ತಿದೆ. ಕಳೆದ 11 ದಿನಗಳಲ್ಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 178ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.
2023ರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 3565 ಕ್ಕೂ ಹೆಚ್ಚು ಡೆಂಗ್ಯೂ ಶಂಕಿತರ ಗುರುತು ಪತ್ತೆಯಾಗಿದೆ. ಇದರಲ್ಲಿ 1009 ಜನರ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಇದರಲ್ಲಿ 905 ಜನರಿಗೆ ಡೆಂಗ್ಯೂ ಸೋಂಕು ಇರುವುದು ಪತ್ತೆಯಾಗಿದೆ. ಡೆಂಗ್ಯೂ ಕಾಯಿಲೆಯಿಂದ ಈವರೆಗೂ ಯಾರೂ ಮೃತಪಟ್ಟಿಲ್ಲವಾದರೂ, ಇದರ ಬಗ್ಗೆ ನಿರ್ಲಕ್ಷ್ಯ ವಹಿಸುವಂತಿಲ್ಲ.

2022ರಲ್ಲಿ ಬೆಂಗಳೂರಿನಲ್ಲಿ 585 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದವು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದೆ. ಡೆಂಗ್ಯೂ ಮಾರಕ ಕಾಯಿಲೆ ಅಲ್ಲದೇ ಹೋದರು, ಮಕ್ಕಳು, ಹಿರಿಯರ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ.
ಡೆಂಗ್ಯೂ ಜ್ವರದ ಸಾಮಾನ್ಯ ಲಕ್ಷಣಗಳು
ಸೊಳ್ಳೆಗಳು ಕಚ್ಚಿದ ನಾಲ್ಕರಿಂದ ಹತ್ತು ದಿನಗಳಲ್ಲಿ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳಲಿದೆ. ಇದು ರೋಗಿಯಿಂದ ರೋಗಿಗೆ ದಿನಗಳಲ್ಲಿ, ಕಾಯಿಲೆಯ ಪ್ರಮಾಣದಲ್ಲಿ ವ್ಯತ್ಯಾಸವಾಗಲಿದೆ. ಸಾಮಾನ್ಯ ಲಕ್ಷಣಗಳೆಂದರೆ ಮೈಕೈ ನೋವು, ಅಲರ್ಜಿಯ ರೀತಿಯಲ್ಲಿ ಗುಳ್ಳೆಗಳು, ವಾಂತಿ, ಹೊಟ್ಟೆನೋವು, ತಲೆ ನೋವು, ಜ್ವರ, ಸುಸ್ತು, ವಾಂತಿ, ಹೊಟ್ಟೆನೋವು ಲಕ್ಷಣಗಳು ಕಂಡು ಬಂದರೆ ತಡ ಮಾಡದೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.
ಸೊಳ್ಳೆಗಳನ್ನು ನಿಯಂತ್ರಿಸಿ, ಕಾಯಿಲೆ ತಡೆಗಟ್ಟಿ
ಸೊಳ್ಳೆ ಕಚ್ಚುವುದರಿಂದ ಡೆಂಗ್ಯೂ ಕಾಯಿಲೆ ಹರಡುತ್ತದೆ ಎನ್ನುವುದು ಗೊತ್ತಿರುವ ವಿಚಾರ. ಮಳೆಗಾಲದಲ್ಲಿ ನೀರು ನಿಂತು ತೇವಾಂಶ ಹೆಚ್ಚು ಇರುವುದರಿಂದ ಸೊಳ್ಳೆಗಳ ಸಂತತಿ ಕೂಡ ಹೆಚ್ಚಾಗುತ್ತದೆ. ಮನೆಯ ಸುತ್ತ ಮುತ್ತ ನೀರು ನಿಲ್ಲುವುದನ್ನು ತಪ್ಪಿಸಿ, ಸೊಳ್ಳೆಗಳ ಸಂಖ್ಯೆಯನ್ನು ಕಡಿಮೆ ಮಾಡುವುದರಿಂದ ಡೆಂಗ್ಯೂ ಕಾಯಿಲೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು.
ಹಗಲು ವೇಳೆಯಲ್ಲಿ ಈ ಸೊಳ್ಳೆಗಳು ಕಚ್ಚುವ ಪ್ರಮಾಣ ಹೆಚ್ಚು ಇರುವುದಿಂದ ಹಗಲು ಹೊತ್ತು ಸೊಳ್ಳೆ ಕಚ್ಚದಂತೆ ಎಚ್ಚರಿಕೆ ವಹಿಸಬೇಕು. ಮಳೆಗಾಲದಲ್ಲಿ ಬಿಸಿ ನೀರು ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ಹೆಚ್ಚಿನ ದಿನ ಪಾತ್ರೆಗಳಲ್ಲಿ ನೀರು ಸಂಗ್ರಹಿಸಿ ಇಡಬಾರದು. ತೆಂಗಿನ ಚಿಪ್ಪು, ಹಳೆಯ ಟೈರ್ ಮುಂತಾದವುಗಳಲ್ಲಿ ನೀರು ನಿಂತಿದ್ದರೆ ಖಾಲಿ ಮಾಡಿ, ನೀರು ನಿಲ್ಲದಂತೆ ನೋಡಿಕೊಳ್ಳಿ.
ಸೊಳ್ಳೆಗಳು ಮನೆಯ ಒಳಗೆ ಬರದಂತೆ ಮೆಶ್ ಹಾಕಿ. ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ರಾತ್ರಿ ವೇಳೆ ಸೊಳ್ಳೆ ಪರದೆ ಬಳಸುವುದು ಆರೋಗ್ಯಕ್ಕೂ ಒಳ್ಳೆಯದು, ಸೊಳ್ಳೆಯ ಕಾಟವನ್ನೂ ತಪ್ಪಿಸಬಹುದು.












Click it and Unblock the Notifications