Bengaluru 2nd Airport: ಬೆಂಗಳೂರು ಎರಡನೇ ಏರ್‌ಪೋರ್ಟ್ ನಿರ್ಮಾಣವಾದ್ರೆ ಈ ಭಾಗದ ಭವಿಷ್ಯವೇ ಬದಲು
ಬೆಂಗಳೂರಿಗೆ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಕರ್ನಾಟಕ ಸರ್ಕಾರ ಭರದ ಸಿದ್ಧತೆ ನಡೆಸಿದೆ. ಈಗಾಗಲೇ ಮೂರು ಸ್ಥಳಗಳನ್ನು ಅಂತಿಮಗೊಳಿಸಿ ಕೇಂದ್ರ ಒಪ್ಪಿಗೆಗೂ ಕಳಿಸಿಕೊಟ್ಟಿದೆ. ಈ ಮೂರು ಜಾಗಗಳು ಬೆಂಗಳೂರಿಗೆ ಹೊಂದಿಕೊಂಡಿರುವ ಪ್ರದೇಶಗಳಾಗಿವೆ. ಹಾಗಾಗಿ ಎರಡನೇ ಏರ್‌ಪೋರ್ಟ್ ಎಲ್ಲಿ ನಿರ್ಮಾಣವಾದರೂ ಅದರ ಲಾಭ ಬೆಂಗಳೂರಿಗೆ ಸಲ್ಲಲಿದೆ. ಮೂರರ ಪೈಕಿ ಎರಡು ಸ್ಥಳಗಳು ಬೆಂಗಳೂರು ದಕ್ಷಿಣ ಭಾಗದಲ್ಲೇ ಇರುವುದರಿಂದ ಇಲ್ಲೇ ಎರಡನೇ ಏರ್‌ಪೋರ್ಟ್ ತಲೆ ಎತ್ತುವುದು ಫಿಕ್ಸ್ ಎಂದು ಹೇಳಲಾಗುತ್ತಿದೆ. ಹಾಗಾದ್ರೆ ಇದರಿಂದ ಯಾರಿಗೆಲ್ಲ ಲಾಭ ಎಂಬ ಮಾಹಿತಿ ಇಲ್ಲಿ ತಿಳಿಯಿರಿ.
ಎರಡನೇ ಏರ್‌ಪೋರ್ಟ್ ನಿರ್ಮಾಣಕ್ಕಾಗಿ ಕರ್ನಾಟಕ ಸರ್ಕಾರ ಗುರುತಿಸಿರುವ ಮೂರು ಸ್ಥಳಗಳೆಂದರೆ ಒಂದು ನೆಲಮಂಗಲ-ಕುಣಿಗಲ್ ರಸ್ತೆ ಬಳಿ, ಮತ್ತೆರಡು ಸ್ಥಳಗಳು ಕನಕಪುರ ರಸ್ತೆಯಲ್ಲೇ ಇವೆ. ಮೂಲಗಳ ಪ್ರಕಾರ ಕನಕಪುರ ರಸ್ತೆಯಲ್ಲೇ ಈ ಏರ್‌ಪೋರ್ಟ್ ತಲೆ ಎತ್ತಲಿದೆ ಎಂದು ಹೇಳಲಾಗುತ್ತಿದೆ. ಇದು ಬೆಂಗಳೂರು ದಕ್ಷಿಣ ಭಾಗದಲ್ಲೇ ಬರುವುದರಿಂದ ಅಭಿವೃದ್ಧಿಗೂ ಪೂರಕ ಎಂದು ಹೇಳಲಾಗುತ್ತಿದೆ. ಈಗ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇವನಹಳ್ಳಿ ಭಾಗದಲ್ಲಿ ಆಗಿರುವ ಅಭಿವೃದ್ಧಿಗೂ ಮೀರಿ ಬೆಂಗಳೂರು ದಕ್ಷಿಣ ಭಾಗ ಶರವೇಗದಲ್ಲಿ ಬೆಳವಣಿಗೆ ಹೊಂದಲಿದೆ ಎನ್ನಲಾಗಿದೆ.

ಕನಕಪುರ ರಸ್ತೆಯ ಹಾರೋಹಳ್ಳಿ ಬಳಿಯೂ ಒಂದು ಜಾಗ ಗುರುತಿಸಲಾಗಿದ್ದು, ಇದು ಕೂಡ ಬೆಂಗಳೂರು ದಕ್ಷಿಣಕ್ಕೆ ಹತ್ತಿರದಲ್ಲೇ ಇದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಶುರುವಾಗಿದ್ದು, ಎರಡನೇ ವಿಮಾನ ನಿಲ್ದಾಣದೊಂದಿಗೆ ಹಾರೋಹಳ್ಳಿ ಹಾಗೂ ಬಿಡದಿ ಪ್ರದೇಶಗಳು ಬೆಳವಣಿಗೆಗೆ ಸಿದ್ಧವಾಗಿವೆ. ಮೈಸೂರು ಎಕ್ಸ್‌ಪ್ರೆಸ್‌ವೇ, ಎಸ್‌ಟಿಆರ್‌ಆರ್, ಮೆಟ್ರೋ ಸಂಪರ್ಕ ಸೇರಿದಂತೆ ಭವಿಷ್ಯಕ್ಕಾಗಿ ಈ ಪ್ರದೇಶ ಸಜ್ಜಾಗಿದೆ. ಕಳೆದ ಒಂದು ದಶಕದಿಂದ ನಿರ್ಲಕ್ಷಿಸಲ್ಪಟ್ಟ ಪ್ರದೇಶವಾದ ದಕ್ಷಿಣ ಬೆಂಗಳೂರಿಗೆ ಈ ಎಲ್ಲ ಕೊಡುಗೆಗಳನ್ನು ಕೊಟ್ಟು ಕಾಳಜಿ ತೋರಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದಗಳನ್ನು ಹೇಳಲೇಬೇಕು ಎನ್ನುತ್ತಿದ್ದಾರೆ.
ಅಭಿವೃದ್ಧಿಗೆ ವೇಗ:
ಬಿಡದಿ ಹಾಗೂ ಕನಕಪುರ ಭಾಗದಲ್ಲಿರುವ ಕೈಗಾರಿಕೆಗಳಿಗೂ ಈ ಎರಡನೇ ಏರ್‌ಪೋರ್ಟ್‌ನಿಂದ ಅನುಕೂಲವಾಗಲಿದೆ. ಕನಕಪುರ ರಸ್ತೆ ಆಗಿರುವುದರಿಂದ ಈ ಭಾಗ ಕೂಡ ನಗರೀಕರಣಕ್ಕೆ ಒಳಗಾಗಿ ದಶಕದೊಳಗೆ ಬೆಂಗಳೂರಿಗೆ ಸೇರಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಇನ್ನು ಬೆಂಗಳೂರು ದಕ್ಷಿಣ ಭಾಗವು ಬೇರೆ ಭಾಗಗಳಿಗೆ ಹೋಲಿಸಿದರೆ ಅಭಿವೃದ್ಧಿಯಲ್ಲಿ ಹಿಂದಿತ್ತು. ಈಗ ಎರಡನೇ ಏರ್‌ಪೋರ್ಟ್ ಆದರೆ, ಬೆಂಗಳೂರು ದಕ್ಷಿಣ ಭಾಗಕ್ಕೆ ಬಂಪರ್ ಅಂತಲೇ ಹೇಳಬಹುದು. ಬೆಂಗಳೂರು ಕೇಂದ್ರ ಭಾಗದಿಂದ ಕನಕಪುರ ರಸ್ತೆವರೆಗೆ ಈಗಾಗಲೇ ಮೆಟ್ರೋ ಸಂಪರ್ಕವೂ ಇರುವುದರಿಂದ ಇದಕ್ಕೆ ಹತ್ತಿರದಲ್ಲೇ ಏರ್‌ಪೋರ್ಟ್ ಬರಲಿದೆ. ಇದರಿಂದ ಈ ಭಾಗದ ರಿಯಲ್ ಎಸ್ಟೇಟ್ ಕೂಡ ವೇಗವಾಗಿ ಬೆಳೆಯಲಿದ್ದು, ಭೂಮಿಗೆ ಬಂಗಾರದ ಬೆಲೆಯೂ ಬರುತ್ತದೆ.

ಬೆಂಗಳೂರು ಸಮೀಪ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ನೆಲಮಂಗಲ- ಕುಣಿಗಲ್ ರಸ್ತೆ ಮತ್ತು ಕನಕಪುರ ರಸ್ತೆಯಲ್ಲಿ ಎರಡು ಸ್ಥಳಗಳನ್ನು ಗುರುತಿಸಿ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಕಳುಹಿಸಿದೆ. ನೆಲಮಂಗಲ-ಹಾಸನ ಹೆದ್ದಾರಿ ಜಂಕ್ಷನ್‌ನಿಂದ 10 ಕಿ.ಮೀ ದೂರದಲ್ಲಿ ಒಂದು ಸ್ಥಳ, ಕನಕಪುರ ರಸ್ತೆ-ನೈಸ್ ರಸ್ತೆ ಜಂಕ್ಷನ್‌ನಿಂದ 10 ಕಿ.ಮೀ ದೂರದಲ್ಲಿ ಇನ್ನೊಂದು ಸ್ಥಳ ಗುರುತಿಸಲಾಗಿದೆ. ಈ ಎರಡೂ ರಸ್ತೆಗಳು ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ಸಮೀಪದಲ್ಲೇ ಇವೆ. ಅಲ್ಲದೆ ಈಗಾಗಲೇ ಇರುವ ಮೆಟ್ರೊ ಜಾಲದ ಕೊನೆಯ ನಿಲ್ದಾಣಗಳಗೆ ಕೆಲವೇ ಕಿಲೋಮೀಟರ್ ಅಂತರದಲ್ಲಿದೆ. ಬಹುತೇಕ ಎರಡನೇ ಏರ್‌ಪೋರ್ಟ್‌ನಿಂದಾಗಿ ಬೆಂಗಳೂರು ದಕ್ಷಿಣ ಭಾಗದ ಚಿತ್ರಣವೇ ಬದಲಾಗಲಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications