ಮುಂಬೈ, ದೆಹಲಿ ಹಿಂದಿಕ್ಕಿದ ಬೆಂಗಳೂರು: 2026ರ ದೇಶದ ನಂಬರ್ 1 ಆರ್ಥಿಕ ಕೇಂದ್ರವಾಗಿ ಸಿಲಿಕಾನ್ ಸಿಟಿ ದರ್ಬಾರ್
ಬೆಂಗಳೂರು: ದೇಶದ ವಾಣಿಜ್ಯ ರಾಜಧಾನಿ ಮುಂಬೈ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯನ್ನ ಹಿಂದಿಕ್ಕಿ ಸಿಲಿಕಾನ್ ಸಿಟಿ ಬೆಂಗಳೂರು ಮತ್ತೊಮ್ಮೆ ತನ್ನ ಆರ್ಥಿಕ ಶಕ್ತಿಯನ್ನ ಸಾಬೀತುಪಡಿಸಿದೆ. ಡನ್ ಆ್ಯಂಡ್ ಬ್ರಾಡ್‌ಸ್ಟ್ರೀಟ್ (Dun & Bradstreet) ಮತ್ತು ಮಾಸ್ಟರ್‌ಕಾರ್ಡ್ ಜಂಟಿಯಾಗಿ ಬಿಡುಗಡೆ ಮಾಡಿರುವ 2026ರ ಮೂರನೇ ತ್ರೈಮಾಸಿಕದ (Q3 2026) 'ಸಿಟಿ ವೈಟಾಲಿಟಿ ಇಂಡೆಕ್ಸ್' ವರದಿಯಲ್ಲಿ ಬೆಂಗಳೂರು ಆರ್ಥಿಕ ಕೇಂದ್ರವಾಗಿ ದೇಶದಲ್ಲೇ ಮೊದಲ ಸ್ಥಾನವನ್ನ ಕಾಯ್ದುಕೊಂಡಿದೆ.
ಸಿಟಿ ವೈಟಾಲಿಟಿ ಇಂಡೆಕ್ಸ್ ಪಟ್ಟಿಯಲ್ಲಿ ಟಾಪ್ 5 ನಗರಗಳು
ಜಾಗತಿಕ ಮಟ್ಟದ ಉದ್ಯಮ ಮತ್ತು ವಹಿವಾಟು ದತ್ತಾಂಶಗಳನ್ನ ಆಧರಿಸಿ ಸಿದ್ಧಪಡಿಸಲಾದ ನೂತನ ಸಿಟಿ ವೈಟಾಲಿಟಿ ಇಂಡೆಕ್ಸ್ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಬೆಂಗಳೂರಿನ ನಂತರದ ಸ್ಥಾನಗಳಲ್ಲಿ ಮುಂಬೈ, ದೆಹಲಿ, ಚೆನ್ನೈ ಹಾಗೂ ಗುರುಗ್ರಾಮ್ ನಗರಗಳು ಕಾಣಿಸಿಕೊಂಡಿವೆ.

ವಿಶೇಷವೆಂದರೆ, ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ಬಾರಿ ಮುಂಬೈನ ಸಿವಿಐ ಅಂಕದಲ್ಲಿ ಬರೋಬ್ಬರಿ 123 ಅಂಕಗಳ ಏರಿಕೆಯಾಗಿದ್ದು, ಆರ್ಥಿಕ ವೇಗದಲ್ಲಿ ಮಹತ್ವದ ಜಿಗಿತ ಕಂಡಿದೆ.
ರಾಜ್ಯಗಳ ಪಟ್ಟಿಯಲ್ಲಿ ತಮಿಳುನಾಡು ನಂ.1: ಸಣ್ಣ ನಗರಗಳಲ್ಲೂ ಭರ್ಜರಿ ಬೆಳವಣಿಗೆ!
ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮಿಂಚಿದ್ದರೆ, ರಾಜ್ಯ ಮಟ್ಟದ ಆರ್ಥಿಕ ವ್ಯವಸ್ಥೆಯ ಬಲವನ್ನ ಅಳೆಯುವ ಪಟ್ಟಿಯಲ್ಲಿ ತಮಿಳುನಾಡು ನಂ.1 ಸ್ಥಾನವನ್ನ ಅಲಂಕರಿಸಿದೆ. ತಮಿಳುನಾಡಿನ ಬಳಿಕ ದೆಹಲಿ ಮತ್ತು ಮಹಾರಾಷ್ಟ್ರ ನಂತರದ ಸ್ಥಾನಗಳನ್ನ ಪಡೆದುಕೊಂಡಿವೆ.
ಇನ್ನೊಂದು ಗಮನಾರ್ಹ ಸಂಗತಿಯೆಂದರೆ, ದೇಶದ ಆರ್ಥಿಕ ಬೆಳವಣಿಗೆ ಕೇವಲ ಬೃಹತ್ ಮೆಟ್ರೋ ನಗರಗಳಿಗೆ ಸೀಮಿತವಾಗಿಲ್ಲ. ಅಲ್ಮೋರಾ, ಮೊಹಾಲಿ (ಸಹಿಬ್ಜಾದ ಅಜಿತ್ ಸಿಂಗ್ ನಗರ), ಶ್ರೀನಗರ, ಜಮ್ಮು ಹಾಗೂ ಮಹಬೂಬಾಬಾದ್‌ನಂತಹ ಸಣ್ಣ ಮತ್ತು ಎರಡನೇ ಹಂತದ ನಗರಗಳೂ ವೇಗದ ಆರ್ಥಿಕ ಪ್ರಗತಿ ದಾಖಲಿಸಿವೆ.
ಆದರೂ, ಮೆಟ್ರೋ ಮತ್ತು ಮೆಟ್ರೋಯೇತರ ಪ್ರದೇಶಗಳ ನಡುವೆ ಇನ್ನೂ 260 ಅಂಕಗಳಷ್ಟು ಆರ್ಥಿಕ ಅಂತರವಿರುವುದು ಈ ಸೂಚ್ಯಂಕದಲ್ಲಿ ಸ್ಪಷ್ಟವಾಗಿದೆ.
ಪಿನ್‌ಕೋಡ್ ಮಟ್ಟದ ಆರ್ಥಿಕತೆ ಅಳತೆ: ಉದ್ಯಮಗಳಿಗೆ ಇದರಿಂದಾಗುವ ಲಾಭವೇನು?
ಈ ಬಾರಿ ಡನ್ ಆ್ಯಂಡ್ ಬ್ರಾಡ್‌ಸ್ಟ್ರೀಟ್ ಮತ್ತು ಮಾಸ್ಟರ್‌ಕಾರ್ಡ್ ಸಂಸ್ಥೆಗಳು ತಮ್ಮ ಸೂಚ್ಯಂಕವನ್ನ ಮತ್ತಷ್ಟು ಆಧುನೀಕರಿಸಿದ್ದು, ದೇಶದ 750ಕ್ಕೂ ಹೆಚ್ಚು ಜಿಲ್ಲೆಗಳು ಮತ್ತು 18,000ಕ್ಕೂ ಅಧಿಕ ಪಿನ್‌ಕೋಡ್‌ಗಳಲ್ಲಿನ ಪಿನ್‌ಕೋಡ್ ಮಟ್ಟದ ಆರ್ಥಿಕತೆಯನ್ನ ಅಳೆದಿವೆ.
ಗ್ರಾಹಕರ ಖಾಸಗಿ ಗುರುತನ್ನ ಬಹಿರಂಗಪಡಿಸದೆ ಸಂಗ್ರಹಿಸಲಾದ ವಹಿವಾಟು ಮಾಹಿತಿ ಹಾಗೂ ಉದ್ಯಮದ ದತ್ತಾಂಶಗಳನ್ನ ಬಳಸಿ ಸ್ಥಳೀಯ ಮಟ್ಟದ ಬೇಡಿಕೆ, ಜನರ ಖರ್ಚಿನ ಶೈಲಿ ಮತ್ತು ವ್ಯಾಪಾರದ ಅಪಾಯಗಳನ್ನ ವಿಶ್ಲೇಷಿಸಲಾಗಿದೆ.
ಈ ಕುರಿತು ಮಾತನಾಡಿದ ಡನ್ ಆ್ಯಂಡ್ ಬ್ರಾಡ್‌ಸ್ಟ್ರೀಟ್ ಇಂಡಿಯಾದ ಮುಖ್ಯ ಆರ್ಥಿಕ ತಜ್ಞ ಅರುಣ್ ಸಿಂಗ್, "ಭಾರತದ ಆರ್ಥಿಕತೆ ಬೆಳೆಯುತ್ತಿದೆಯೇ ಎಂಬುದಕ್ಕಿಂತ, ಯಾವ ಪ್ರದೇಶದಲ್ಲಿ ಮತ್ತು ಯಾವ ವಲಯದಲ್ಲಿ ವೇಗವಾಗಿ ಬೆಳವಣಿಗೆಯಾಗುತ್ತಿದೆ ಎಂಬುದನ್ನ ಮೊದಲೇ ಗುರುತಿಸುವುದು ಇಂದು ಮುಖ್ಯ. ಪಿನ್‌ಕೋಡ್ ಮಟ್ಟದಲ್ಲಿ ಈ ಬದಲಾವಣೆಗಳನ್ನ ಅರಿಯಲು ಸಿವಿಐ ನೆರವಾಗುತ್ತದೆ" ಎಂದಿದ್ದಾರೆ.
ಮಾಸ್ಟರ್‌ಕಾರ್ಡ್‌ನ ದಕ್ಷಿಣ ಏಷ್ಯಾ ಸಲಹಾ ಸೇವೆಗಳ ಹಿರಿಯ ಉಪಾಧ್ಯಕ್ಷೆ ರಶ್ಮಿ ಘೋಷ್ ಅವರು, "ಮಾರುಕಟ್ಟೆಯ ಟ್ರೆಂಡ್‌ಗಳ ಸ್ಪಷ್ಟ ಚಿತ್ರಣ ಸಿಗುವುದರಿಂದ ಕಂಪನಿಗಳು ಹೂಡಿಕೆ, ಮಾರುಕಟ್ಟೆ ವಿಸ್ತರಣೆ ಮತ್ತು ಸಾಲ ನೀಡಿಕೆಯಂತಹ ದೀರ್ಘಕಾಲದ ನಿರ್ಧಾರಗಳನ್ನ ನಿಖರವಾಗಿ ಕೈಗೊಳ್ಳಲು ಸಾಧ್ಯವಾಗುತ್ತದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.




Click it and Unblock the Notifications
