ಮುಂಬೈ ಇಂಡಿಯನ್ಸ್‌ಗೆ ಮತ್ತೆ ರೋಹಿತ್ ಶರ್ಮಾ ನಾಯಕ.. ಹಾರ್ದಿಕ್ ನಿರ್ಗಮನದ ಬೆನ್ನಲ್ಲೇ ಮಹತ್ವದ ಬೆಳವಣಿಗೆ
IPL 2027 Rohit Sharma: ಐಪಿಎಲ್ 2027 ಮಿನಿ ಹರಾಜಿಗೂ ಮುನ್ನ ಪ್ರಮುಖ ಆಟಗಾರರ ಟ್ರೇಡ್ ಪ್ರಕ್ರಿಯೆ ನಡೆದಿದ್ದು, ಈ ವೇಳೆ ಹಾರ್ದಿಕ್ ಪಾಂಡ್ಯ ಅವರು ಎಂಐ ತೊರೆದು ಪಂಜಾಬ್ ಕಿಂಗ್ಸ್‌ಗೆ ಸೇರ್ಪಡೆಯಾದರು. ಇದರ ಬೆನ್ನಲ್ಲೇ ಇದೀಗ ಮುಂಬೈ ಇಂಡಿಯನ್ಸ್‌ಗೆ ಮತ್ತೆ ರೋಹಿತ್ ಶರ್ಮಾ ಅವರನ್ನು ನಾಯಕನಾಗಿ ನೇಮಕ ಮಾಡಲಾಗಿದೆ. ಇಲ್ಲಿದೆ ನೋಡಿ ಈ ಕುರಿತ ಸಂಪೂರ್ಣ ಮಾಹಿತಿ.
ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವಕ್ಕೆ ರೋಹಿತ್ ಶರ್ಮಾ ಮತ್ತೊಮ್ಮೆ ಮರಳಿದ್ದಾರೆ. 2027ರ ಐಪಿಎಲ್ ಆವೃತ್ತಿಗೂ ಮುನ್ನ ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾದ ಬೆನ್ನಲ್ಲೇ, ಮೂರು ವರ್ಷಗಳ ನಂತರ ರೋಹಿತ್ ಶರ್ಮಾ ಅವರನ್ನು ಮತ್ತೆ ತಂಡದ ನಾಯಕನನ್ನಾಗಿ ನೇಮಿಸಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಅಧಿಕೃತ ಘೋಷಣೆ ಹೊರಡಿಸಿದೆ.

ರೋಹಿತ್‌ಗೆ ಮತ್ತೆ ಮುಂಬೈ ಇಂಡಿಯನ್ಸ್ ನಾಯಕತ್ವದ ಜವಾಬ್ದಾರಿ
ಸರಿಯಾಗಿ ಮೂರು ವರ್ಷಗಳ ಹಿಂದೆ, ರೋಹಿತ್ ಶರ್ಮಾ ಎಲ್ಲಾ ಮಾದರಿಗಳಲ್ಲಿ ಭಾರತ ತಂಡದ ನಾಯಕರಾಗಿದ್ದಾಗಲೇ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ಅವರನ್ನು ಕೆಳಗಿಳಿಸಲಾಗಿತ್ತು. ಅದೇ ವೇಳೆ ಗುಜರಾತ್ ಟೈಟಾನ್ಸ್‌ನಿಂದ ಬಂದಿದ್ದ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವದ ಹೊಣೆ ನೀಡಲಾಗಿತ್ತು. ಆದರೆ, ಹಾರ್ದಿಕ್ ನೇತೃತ್ವದಲ್ಲಿ ಮುಂಬೈ ತಂಡದ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ ಮತ್ತು ಕಳೆದ ಮೂರು ಸೀಸನ್‌ಗಳಲ್ಲಿ ತನ್ನ ಹಿಂದಿನ ಯಶಸ್ಸಿನ ಲಯವನ್ನು ಕಂಡುಕೊಳ್ಳಲು ಪರದಾಡಿತು.
ಇನ್ನೂ ಐಪಿಎಲ್ 2027 ಆರಂಭಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಟ್ರೇಡ್ ಮೂಲಕ ಪಂಜಾಬ್ ಕಿಂಗ್ಸ್ ಸೇರಿದರು. ಈ ಹಿನ್ನೆಲೆಯಲ್ಲಿ (ಹಾಗೂ ಅರ್ಷದೀಪ್ ಸಿಂಗ್ ಮುಂಬೈ ತಂಡಕ್ಕೆ ಬಂದಿರುವ ಬೆನ್ನಲ್ಲೇ), 39 ವರ್ಷದ ರೋಹಿತ್ ಶರ್ಮಾ ಅವರಿಗೆ ಮತ್ತೆ ತಂಡದ ನಾಯಕತ್ವದ ಹೊಣೆಯನ್ನು ನೀಡಲಾಗಿದೆ.
ರೋಹಿತ್ ಶರ್ಮಾ ಹೇಳಿದ್ದೇನು?
ಮತ್ತೆ ನಾಯಕತ್ವಕ್ಕೆ ಮರಳಿದ ಕುರಿತು ಪ್ರತಿಕ್ರಿಯಿಸಿರುವ ರೋಹಿತ್ ಶರ್ಮಾ ಅವರು, 'ಮುಂಬೈ ಇಂಡಿಯನ್ಸ್ ನನ್ನ ಜೀವನದ ಒಂದು ದೊಡ್ಡ ಭಾಗವಾಗಿದೆ. ಈ ತಂಡವನ್ನು ಮುನ್ನಡೆಸುವುದು ನನಗೆ ಸದಾ ಹೆಮ್ಮೆಯ ವಿಷಯವಾಗಿದೆ,' ಎಂದು ಸಂತಸ ವ್ಯಕ್ತಪಡಿಸಿದ್ದಾರೆ. 2013ರ ಐಪಿಎಲ್ ಆವೃತ್ತಿಯ ಮಧ್ಯದಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದ ರೋಹಿತ್, ಅದೇ ವರ್ಷ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
ಐದು ಬಾರಿ ಚಾಂಪಿಯನ್ ಆದ ಮುಂಬೈ ಇಂಡಿಯನ್ಸ್
ನಂತರ 2013ರಿಂದ 2023ರವರೆಗೆ ತಂಡವನ್ನು ಮುನ್ನಡೆಸಿ, ಒಟ್ಟು ಐದು ಐಪಿಎಲ್ ಟ್ರೋಫಿಗಳನ್ನು (2013, 2015, 2017, 2019 ಮತ್ತು 2020) ಗೆದ್ದುಕೊಟ್ಟಿದ್ದಾರೆ. 2020ರ ನಂತರ ಮುಂಬೈ ಇಂಡಿಯನ್ಸ್ ತಂಡವು ಮತ್ತೊಂದು ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಮುಂಬೈ ಇಂಡಿಯನ್ಸ್ ಮುಂದಿರುವ ಸವಾಲು..
2027ರ ಐಪಿಎಲ್ ಆವೃತ್ತಿಯು 2028ರ ಮೆಗಾ ಹರಾಜಿಗೂ ಮುನ್ನ ನಡೆಯುತ್ತಿರುವ ಕೊನೆಯ ಆವೃತ್ತಿಯಾಗಿದ್ದು, ಮುಂಬರುವ ಡಿಸೆಂಬರ್ 16ರಂದು ಗೋವಾದಲ್ಲಿ ಮಿನಿ ಹರಾಜು ನಡೆಯಲಿದೆ. 2025ರ ಮಾರ್ಚ್‌ನಲ್ಲಿ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತದ ಗೆಲುವಿನ ಬಳಿಕ ರೋಹಿತ್ ಯಾವುದೇ ಮಾದರಿಯಲ್ಲಿ ನಾಯಕತ್ವ ವಹಿಸಿರಲಿಲ್ಲ. ಇದೀಗ ಅನುಭವಿ ನಾಯಕನ ಪುನರಾಗಮನದೊಂದಿಗೆ, ತಂಡದ ಹಳೆಯ ವೈಭವವನ್ನು ಮರಳಿ ತರುವ ಮತ್ತು 2027ರ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಹೋರಾಡುವ ಗುರಿಯನ್ನು ಮುಂಬೈ ಇಂಡಿಯನ್ಸ್ ಹಾಕಿಕೊಂಡಿದೆ.


Click it and Unblock the Notifications
