ಬೆಂಗಳೂರಿನ ಈ 2 ಪ್ರದೇಶದಲ್ಲಿ ಭೂಮಿಗೆ ಬಂಗಾರದ ಬೆಲೆ: ಎಲ್ಲಿ ಆಸ್ತಿ ಖರೀದಿ ಮಾಡಿದರೆ ಉತ್ತಮ ?
Bengaluru Real Estate Alert: ಬೆಂಗಳೂರಿನ ವಿವಿಧ ಭಾಗದಲ್ಲಿ ಭೂಮಿ ಹಾಗೂ ಬಾಡಿಗೆ ಮನೆಗಳ ಬೆಲೆಯು ಕಳೆದ ಐದು ವರ್ಷಗಳ ಅವಧಿಯಲ್ಲಿ ಬರೋಬ್ಬರಿ ಶೇ 75% ದಿಂದ 80% ಪ್ರತಿಶತ ಹೆಚ್ಚಳವಾಗಿದೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರಿನ ವೈಟ್‌ಫೀಲ್ಡ್ ಹಾಗೂ ಸರ್ಜಾಪುರ ಭಾಗದಲ್ಲಿ ರಿಯಲ್ ಎಸ್ಟೇಟ್ ಧಮಾಕ ಸೃಷ್ಟಿಯಾಗಿದೆ. ಈ ಎರಡು ಪ್ರದೇಶದಲ್ಲಿ ಯಾವ ಭಾಗದಲ್ಲಿ ಭೂಮಿ ಬೆಲೆ ಹೆಚ್ಚಳವಾಗಿದೆ. ಅಲ್ಲದೇ ಈ ಎರಡು ಪ್ರಮುಖ ಪ್ರದೇಶಗಳಲ್ಲಿ ಎಲ್ಲಿ ಹೂಡಿಕೆ ಮಾಡಿದರೆ ನಿಮಗೆ ಲಾಭವಾಗಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಯೋಜನೆ ಅಭಿವೃದ್ಧಿ ಆಗುತ್ತಿದ್ದಂತೆಯೇ ವಿವಿಧ ಪ್ರದೇಶಗಳಲ್ಲಿ ಭೂಮಿಯ ಬೆಲೆಯಲ್ಲೂ ಹೆಚ್ಚಳವಾಗುತ್ತಲ್ಲೇ ಸಾಗುತ್ತಿದೆ. ಇದರೊಂದಿಗೆ ಬೆಂಗಳೂರಿನ ಐಟಿ ಹಬ್ ಪ್ರದೇಶ ಹಾಗೂ ಮೆಟ್ರೋ ಅಭಿವೃದ್ಧಿಯ ಹಂತದಲ್ಲಿರುವ ಸರ್ಜಾಪುರ ಮತ್ತು ವೈಟ್‌ಫೀಲ್ಡ್‌ನಲ್ಲಿ ಭೂಮಿಯ ಬೆಲೆಯು ಏಕಾಏಕಿ ಹೆಚ್ಚಳವಾಗಿದೆ. ಈ ನಡುವೆ ಬೆಂಗಳೂರಿನ ಯಾವ ಪ್ರದೇಶದಲ್ಲಿ ಹೂಡಿಕೆ ಮಾಡಬೇಕು ಎನ್ನುವ ಗೊಂದಲವು ಜನರಲ್ಲಿ ಸೃಷ್ಟಿಯಾಗಿದೆ. ಅದರ ವಿವರ ಹಾಗೂ ನೈಜ ಪರಿಸ್ಥಿತಿಯ ವಿವರಗಳು ನೋಡೋಣ.

ಬೆಂಗಳೂರಿನ ರಿಯಲ್ ಎಸ್ಟೇಟ್ ಹಾಟ್‌ಸ್ಪಾಟ್‌ಗಳಲ್ಲಿ ವೈಟ್‌ಫೀಲ್ಡ್ಾ ಹಾಗೂ ಸರ್ಜಾಪುರ ರಸ್ತೆಗಳು ಸೇರಿವೆ. ವಿವಿಧ ಕಾರಣಗಳಿಗೆ ಈ ಎರಡೂ ಪ್ರದೇಶಗಳಲ್ಲೂ ಹೂಡಿಕೆ ಮಾಡಬಹುದಾಗಿದೆ ಎಂದು Trade Brains ವರದಿ ಮಾಡಿದೆ.
ವೈಟ್‌ಫೀಲ್ಡ್ ಆಸ್ತಿ ಬೆಲೆ ಹೇಗಿದೆ ?
ಇತ್ತೀಚಿನ ದಿನಗಳಲ್ಲಿ ವೈಟ್‌ಫೀಲ್ಡ್ ಅಭಿವೃದ್ಧಿಯ ಮುಂಚೂಣಿಯಲ್ಲಿದೆ. ಈ ಭಾಗದಲ್ಲಿ ಆಸ್ತಿ ಬೆಲೆಗಳು ಪ್ರತಿ ಚದರ ಅಡಿಗೆ ಸರಾಸರಿ ₹10,200 ರಷ್ಟು ತಲುಪಿದ್ದು. ಮೂಲಸೌಕರ್ಯ ಅಭಿವೃದ್ಧಿಯಿಂದ ಬೇಡಿಕೆಯನ್ನು ಹೆಚ್ಚಿಸಿಕೊಂಡಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ವೈಟ್‌ಫೀಲ್ಡ್ ವಾರ್ಷಿಕವಾಗಿ ಶೇ 6 ರಿಂದ 8% ರಷ್ಟು ಸ್ಥಿರ ಆಸ್ತಿ ಮೌಲ್ಯ ಹೆಚ್ಚಳವನ್ನು ಕಂಡಿದೆ. ಇದಕ್ಕೆ ಐಟಿ ಕ್ಷೇತ್ರ ಅಭಿವೃದ್ಧಿಯೂ ಕಾರಣವಾಗಿದೆ.
ವೈಟ್‌ಫೀಲ್ಡ್ ಹೊರ ವರ್ತುಲ ರಸ್ತೆ ಹಾಗೂ ಹಳೆಯ ವಿಮಾನ ನಿಲ್ದಾಣ ರಸ್ತೆ ಎರಡೂ ಮಾರ್ಗವಾಗಿಯೂ ಉತ್ತಮ ಸಂಪರ್ಕವನ್ನು ಹೊಂದಿದೆ. ನಗರ ಕೇಂದ್ರ ಮತ್ತು ಇನ್ನುಳಿದ ಪ್ರಮುಖ ಪ್ರದೇಶಗಳಿಗೆ ಸುಗಮ ಸಂಪರ್ಕವನ್ನು ಕಲ್ಪಿಸುತ್ತದೆ. ನಮ್ಮ ಮೆಟ್ರೋ ನೇರಳೆ ಮಾರ್ಗ ( Namma Metro Purple Line) ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿದೆ. ಉಪನಗರ ರೈಲು ಯೋಜನೆ ಹಾಗೂ ಸ್ಮಾರ್ಟ್ ಸಿಟಿ ಅಭಿವೃದ್ಧಿಯ ಕಾರಣಗಳಿಗೆ ವೈಟ್‌ಫೀಲ್ಡ್‌ನಲ್ಲಿ ಮುಂದಿನ ದಿನಗಳಲ್ಲಿ ಭೂಮಿಯ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ಸರ್ಜಾಪುರ ರಸ್ತೆಯಲ್ಲಿ ಆಸ್ತಿ ಬೆಲೆ ಹೇಗಿದೆ ?
ಬೆಂಗಳೂರಿನಲ್ಲಿ ಸರ್ಜಾಪುರ ರಸ್ತೆಯಲ್ಲೂ ಭೂಮಿ ಬೆಲೆ ಭಾರೀ ಹೆಚ್ಚಳವಾಗಿದೆ. ಈ ಭಾಗದಲ್ಲಿ ಕಳೆದ ಎರಡು ಮೂರು ವರ್ಷದ ಅವಧಿಯಲ್ಲಿ ಶೇ80 ರಷ್ಟು ಹೆಚ್ಚಳವಾಗಿದೆ. ಸರ್ಜಾಪುರ ರಸ್ತೆಯ ಭಾಗದಲ್ಲಿ ಪ್ರತಿ ಚದರ ಅಡಿಗೆ ₹8,200 ಬೆಲೆ ಇದೆ. ಈ ಭಾಗದಲ್ಲಿ ಕಡಿಮೆ ಹೂಡಿಕೆಯೊಂದಿಗೆ ಹೆಚ್ಚು ರಿಟರ್ನ್ ಹಣ ಅಥವಾ ಲಾಭ ಗಳಿಸುವ ಅವಕಾಶ ಹೆಚ್ಚಾಗಿದೆ.
ಹೊಸ ವಸತಿ ಹಾಗೂ ವಾಣಿಜ್ಯ ಅಭಿವೃದ್ಧಿಗಳಿಂದಾಗಿ ಶೇ 7ರಿಂದ 10% ವಾರ್ಷಿಕ ಬೆಳವಣಿಗೆಯೊಂದಿಗೆ ಸರ್ಜಾಪುರ ಕಳೆದ ಐದು ವರ್ಷಗಳಲ್ಲಿ ವೈಟ್‌ಫೀಲ್ಡ್‌ಗಿಂತ ರಿಯಲ್ ಎಸ್ಟೇಟ್‌ನಲ್ಲಿ ಮುಂದಿದೆ. ಸರ್ಜಾಪುರ ರಸ್ತೆ ಪ್ರಮುಖ ಐಟಿ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಸುಮಾರು 2030ರ ವೇಳೆಗೆ ಈ ಭಾಗದಲ್ಲಿ ಮೆಟ್ರೋ ರೆಡ್ ಲೈನ್ (ಹೆಬ್ಬಾಳ - ಸರ್ಜಾಪುರ), ಪೆರಿಫೆರಲ್ ರಿಂಗ್ ರಸ್ತೆ (PRR), ಮತ್ತು ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ (STRR) ಸೇರಿದಂತೆ ಹಲವು ಪ್ರಮುಖ ಯೋಜನೆಗಳು ಮುಕ್ತಾಯವಾಗುವ ಸಾಧ್ಯತೆ ಇದೆ. ಇದು ಅಭಿವೃದ್ಧಿಯಲ್ಲಿ ಹೊಸ ದಾಖಲೆ ಬರೆಯಲಿದ್ದು ಜನ ಈಗನಿಂದಲೇ ಭೂಮಿ ಹಾಗೂ ಮನೆಗಳ ಖರೀದಿಗೆ ಮುಂದಾಗಿದ್ದಾರೆ.
ಇನ್ನು ಒಟ್ಟಾರೆ 2025ರಲ್ಲಿ ಎರಡೂ ಪ್ರದೇಶಗಳು 8-12% ರಷ್ಟು ಅಂದಾಜು ಆಸ್ತಿ ಮೌಲ್ಯ ಹೆಚ್ಚಳಕ್ಕೆ ಸಾಧ್ಯವಾಗಲಿದೆ. ದೀರ್ಘಾವಧಿಯಲ್ಲಿ ಹೂಡಿಕೆ ಮಾಡುವುದಾದರೆ ಸರ್ಜಾಪುರ ಪ್ರದೇಶ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ವೈಟ್‌ಫೀಲ್ಡ್‌ನಲ್ಲಿ ಈಗಾಗಲೇ ಅಭಿವೃದ್ಧಿ ಆಗಿರುವುದರಿಂದ ಈ ಪ್ರದೇಶವೂ ಅನುಕೂಲಕರವಾಗಿದೆ ಎಂದು ಹೇಳಲಾಗಿದೆ.












Click it and Unblock the Notifications