Bengaluru Rain: ಬಿಸಿಲಿನಿಂದ ಬೆಂದಿದ್ದ ಬೆಂಗಳೂರಿಗೆ ತಂಪೆರೆದ ಮಳೆ: ಗುಡುಗು ಸಿಡಿಲಿನೊಂದಿಗೆ ಅಬ್ಬರಿಸಿದ ವರುಣ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಕೆಂಡದಂತಾಗಿದ್ದ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಸಂಜೆ ದಿಢೀರ್ ಮಳೆಯಾಗಿದ್ದು, ನಗರದ ವಾತಾವರಣ ಸಂಪೂರ್ಣ ತಣ್ಣಗಾಗಿದೆ. ಬಿರುಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಈ ಮಳೆಯು ತಂಪಾದ ಅನುಭವ ನೀಡಿದೆ.

ನಗರದ ಪ್ರಮುಖ ಭಾಗಗಳಾದ ಕೋರಮಂಗಲ, ವೈಟ್‌ಫೀಲ್ಡ್‌, ಆಡುಗೋಡಿ, ಎಂ.ಜಿ. ರಸ್ತೆ, ಶಾಂತಿನಗರ ಹಾಗೂ ಮೆಜೆಸ್ಟಿಕ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಮಳೆ ಸುರಿದಿದೆ. ಸಂಜೆ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವಾಹನ ಸವಾರರು ದಿಢೀರ್ ಮಳೆಯಿಂದಾಗಿ ರಸ್ತೆಬದಿಯ ಆಶ್ರಯ ಪಡೆಯಬೇಕಾಯಿತು.

Bengaluru Rain

ಬಿಸಿಲಿನ ಬೇಗೆಯಿಂದ ಹೈರಾಣಾಗಿದ್ದ ಜನರು "ಅಬ್ಬಾ.. ಮಳೆ ಬಂತಲ್ಲ" ಎಂದು ಸಂಭ್ರಮಿಸುತ್ತಿದ್ದರೆ, ಇತ್ತ ಆಫೀಸ್ ಮುಗಿಸಿ ಮನೆಗೆ ಹೊರಟಿದ್ದ ವಾಹನ ಸವಾರರು ಮಾತ್ರ ಮಳೆಯಿಂದಾಗಿ ಪರದಾಡಿದರು. ನಗರದ ಕೆಲವು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಕಂಡುಬಂದರೂ, ಮಳೆಯಿಂದಾದ ತಂಪಾದ ಗಾಳಿ ಎಲ್ಲರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಬೇಸಿಗೆಯ ತೀವ್ರತೆಯಿಂದಾಗಿ ಬೆಂಗಳೂರಿನ ತಾಪಮಾನವು ದಾಖಲೆ ಮಟ್ಟಕ್ಕೆ ಏರಿಕೆಯಾಗಿತ್ತು. ಬಿಸಿಲಿನ ತಾಪ ತಾಳಲಾರದೆ ಜನರು ಹೈರಾಣಾಗಿದ್ದರು. ಆದರೆ, ಇಂದಿನ ಮಳೆಯು ನಗರದ ಉಷ್ಣಾಂಶವನ್ನು ಗಣನೀಯವಾಗಿ ತಗ್ಗಿಸಿದ್ದು, ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ. ಮಳೆಯಿಂದಾಗಿ ನಗರದ ಹಲವು ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನಗಳು ನಿಧಾನಗತಿಯಲ್ಲಿ ಚಲಿಸುತ್ತಿವೆ. ಮುಂದಿನ ಕೆಲವು ದಿನಗಳ ಕಾಲ ನಗರದಲ್ಲಿ ಮೋಡಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮೇ 5ರವರೆಗೆ ಮಳೆ ಎಚ್ಚರಿಕೆ

ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮೇ 5ರವರೆಗೆ ಭಾರೀ ಮಳೆಯ ಮುನ್ಸೂಚನೆ ಇದೆ. ಮುಂದಿನ ಎರಡು ದಿನಗಳ ಕಾಲ ನಗರದಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 48 ಗಂಟೆಗಳಲ್ಲಿ ನಗರದ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಇದರೊಂದಿಗೆ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ಇದೇ ವೇಳೆ ಕೆಲವೆಡೆ ಆಲಿಕಲ್ಲು ಮಳೆ ಬೀಳುವ ಮುನ್ಸೂಚನೆಯನ್ನು ನೀಡಲಾಗಿದೆ. ನಗರದ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ ಹೆಚ್ಚಿರಲಿದೆ ಎಂದು ಅಂದಾಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+