Bengaluru Property: ಜಿಬಿಎ ಪ್ರಕಾರ ಬೆಂಗಳೂರಿನಲ್ಲಿ ಈ ಆಸ್ತಿಗಳು ಅನಧಿಕೃತ: ತೆರವು ಕಾರ್ಯಾಚರಣೆಗೆ ಸಿದ್ಧತೆ!
Bengaluru Property: ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಬೆಂಗಳೂರಿನಲ್ಲಿರುವ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಮುಂದಾಗಿದೆ. ಬೆಂಗಳೂರಿನಲ್ಲಿರುವ ವಿವಿಧ ಅನಧಿಕೃತ ಕಟ್ಟಡಗಳು ಹಾಗೂ ನಕ್ಷೆ ಮಂಜೂರಾತಿ ಇಲ್ಲದೆ ನಿರ್ಮಾಣವಾಗಿರುವ ಕಟ್ಟಡಗಳನ್ನು ಪಟ್ಟಿ ಮಾಡುವ ಪ್ರಕ್ರಿಯೆ ಶುರುವಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಈ ನಿಟ್ಟಿನಲ್ಲಿ ನೀಡಿರುವ ಮುನ್ನೆಚ್ಚರಿಕೆಗಳ ವಿವರ ನೋಡೋಣ.
ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಬೆಂಗಳೂರಿನ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಭರ್ಜರಿ ಸಿದ್ಧತೆ ನಡೆಸಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಬೆಂಗಳೂರು ಪೂರ್ವ ನಗರ ಪಾಲಿಕೆಯು ಅನುಮೋದಿತ ಯೋಜನೆಯನ್ನು ಉಲ್ಲಂಘಿಸಿ ಕಟ್ಟಡಗಳನ್ನು ನಿರ್ಮಿಸಿರುವ ಹಾಗೂ ಅನಧಿಕೃತ ಮಹಡಿಗಳು ಮತ್ತು ವಸತಿ ಪ್ರದೇಶಗಳಿಗೆ ಸಂಬಂಧಿಸಿದಂತೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವುದಕ್ಕೆ ಮುಂದಾಗಿದೆ.

ಅಕ್ರಮ ಆಸ್ತಿ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮುಂದಾಗಿದೆ. ಬೆಂಗಳೂರಿನಲ್ಲಿ ವಿವಿಧ ಅಕ್ರಮ ಕಟ್ಟಡಗಳ ಪಟ್ಟಿ ಮಾಡಲಾಗಿದೆ. ಮೊದಲ ಹಂತದಲ್ಲಿ 11 ಕಟ್ಟಡಗಳನ್ನು ಪಟ್ಟಿ ಮಾಡಲಾಗಿದೆ. ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಐದು ಕಟ್ಟಡಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ವೈಟ್‌ಫೀಲ್ಡ್ ವಾರ್ಡ್‌ನಲ್ಲಿರುವ ಒಂದು ಕಟ್ಟಡದ ಅಕ್ರಮವಾಗಿ ನಿರ್ಮಿಸಲಾದ ಮೇಲಿನ ಮಹಡಿಯನ್ನು ಕೆಡವಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಅನುಮೋದಿತ ಕಟ್ಟಡ ಯೋಜನೆಗಳನ್ನು ಉಲ್ಲಂಘಿಸಿದ ಅಥವಾ ಅನಧಿಕೃತ ಮಹಡಿಗಳನ್ನು ಸೇರಿಸಿದ ನಿರ್ಮಾಣಗಳ ಕುರಿತು GBA ಮೇಲ್ವಿಚಾರಣೆ ನಡೆಸುತ್ತಿದೆ. ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಂಗೀಕರಿಸಿದ ನಿಯಮ 313, 248 (1), (2) ಮತ್ತು 356 ರ ಆಧಾರದ ಮೇಲೆ, ಮಾಹಿತಿ ಕೋರಿ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ವಿವಿಧ ನಿಯಮಗಳನ್ನು ಉಲ್ಲಂಘನೆ ಮಾಡಿರುವವರು ವಿವರಣೆ ಕೊಡುವಂತೆ ಅಥವಾ ನೋಟಿಸ್‌ಗೆ ಉತ್ತರ ನೀಡುವಂತೆಯೂ ನೋಟಿಸ್‌ನಲ್ಲಿ ಸೂಚನೆ ನೀಡಲಾಗಿದೆ.
ಇನ್ನು ಪಾಲಿಕೆ ವ್ಯಾಪ್ತಿಯಲ್ಲಿ ಎರಡು ಕಟ್ಟಡಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ಶೀಘ್ರದಲ್ಲೇ ಉಳಿದ ಕಟ್ಟಡಗಳು ಸಹ ಇದೇ ಮಾದರಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಪೂರ್ವ ಪಾಲಿಕೆಯ ಆಯುಕ್ತ ಡಿ.ಎಸ್. ರಮೇಶ್ ಅವರು, ಈ ನಿಯಮಗಳನ್ನು ಪಾಲಿಸುವುದಕ್ಕೆ ನಾಲ್ಕು ತಿಂಗಳುಗಳಾಗುತ್ತವೆ. ಆದರೆ ಮನೆಗಳ ಮಾಲೀಕರು ಇದನ್ನೇ ಉಪಯೋಗಿಸಿಕೊಂಡು ನ್ಯಾಯಾಲಯದ ತಡೆಯಾಜ್ಞೆಯನ್ನು ಪಡೆಯುತ್ತಾರೆ. ತಡೆಯಾಜ್ಞೆಯನ್ನು ತೆರವುಗೊಳಿಸಲು ಮತ್ತು ಮುಂದುವರಿಯಲು ಸಮಯ ತೆಗೆದುಕೊಳ್ಳುತ್ತದೆ ಎಂದೂ ಹೇಳಿದ್ದಾರೆ.
ವೈಟ್‌ಫೀಲ್ಡ್, ಹಾಗದೂರು ಮತ್ತು ಪಟ್ಟಂದೂರು ವಾರ್ಡ್‌ಗಳಲ್ಲಿ ಅನಧಿಕೃತ ಆಸ್ತಿಗಳನ್ನು ಗುರುತಿಸಲಾಗಿದೆ. ಅಲ್ಲದೇ ಮೂವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಎಂಜಿನಿಯರ್‌ಗಳು ತಿಳಿಸಿದ್ದಾರೆ.
ಕಾರಣ ಕೇಳಿ ನೋಟಿಸ್: ಇನ್ನು ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಾಣ ಮಾಡಿರುವ ಆಸ್ತಿದಾರರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗುತ್ತಿದೆ ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications