ತನ್ನ ಬಟ್ಟೆಗಳನ್ನು ತಾನೇ ಹರಿದುಕೊಂಡು ಪೊಲೀಸ್ ಠಾಣೆಗೆ ಬಂದ ಮಾಜಿ ಬಿಗ್ ಬಾಸ್ ಸ್ಪರ್ಧಿ: ಮುಂದೇನಾಯ್ತು..?
ಬೆಂಗಳೂರು, ಫೆಬ್ರವರಿ17: ಬಿಗ್ ಬಾಸ್ ಕನ್ನಡ ಮಾಜಿ ಸ್ಪರ್ಧಿ ಆದಂ ಪಾಷಾ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ತನ್ನ ಬಟ್ಟೆಗಳನ್ನು ತಾನೇ ಹರಿದುಕೊಂಡು ಬಂದು ದೂರು ಕೊಟ್ಟಿರುವುದಲ್ಲದೇ, ದೂರಿನಲ್ಲಿ ತಪ್ಪು ನಂಬರ್ ಕೊಟ್ಟು ಪೊಲೀಸರನ್ನು ದಾರಿ ತಪ್ಪಿಸುವ ಕೆಲಸ ಮಾಡಿರುವ ಆರೋಪ ಆದಂ ಪಾಷಾ ವಿರುದ್ಧ ಕೇಳಿಬಂದಿದೆ.
ತನ್ನ ಮೇಲೆ ಲಾರಿ ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಆದಂ ಪಾಷಾ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಆದಂ ಪಾಷಾ ಸುಳ್ಳು ಹೇಳಿರುವುದು ಬೆಳಕಿಗೆ ಬಂದಿದೆ.

ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯಲ್ಲಿ ವ್ಯಾಲಂಕೇಣಿ ಬ್ರಿಡ್ಜ್ ಬಳಿ ವಾಟರ್ ಟ್ಯಾಂಕ್ ಲಾರಿ ಅತಿ ವೇಗವಾಗಿ ಬರುತ್ತಿದ್ದದ್ದನ್ನು ಪ್ರಶ್ನಿಸಿದಕ್ಕೆ ಚಾಲಕ ತನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾಗಿ ಆದಂ ಪಾಷಾ ದೂರು ದಾಖಲಿಸಿದ್ದರು. ದೂರಿನ ಮೇರೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಎಫ್ಐಆರ್ ದಾಖಲಿಸುವ ವೇಳೆ ಆದಂ ಪಾಷಾ ತಪ್ಪು ನಂಬರ್ ಕೊಟ್ಟಿದ್ದಾರೆ. ತನಿಖೆ ವೇಳೆ ಆದಂ ಪಾಷಾ ಸುಳ್ಳು ದೂರು ಕೊಟ್ಟಿರುವ ಶಂಕೆ ವ್ಯಕ್ತವಾಗಿದೆ.
ಹೀಗಾಗಿ ಪೊಲೀಸರು ಆದಂ ಪಾಷಾ ಮೇಲೆ ಅನುಮಾನಗೊಂಡು ತನಿಖೆ ಚುರುಕುಗೊಳಿಸಿದ್ದಾರೆ. ಈ ವೇಳೆ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆದಂ ಪಾಷಾ ಕಳ್ಳಾಟ ಬಯಲಾಗಿದೆ. ತನ್ನ ಬಟ್ಟೆಗಳನ್ನು ತಾನೇ ಹರಿದುಕೊಂಡು ಬಂದು ದೂರು ಕೊಟ್ಟಿರುವುದು ತಿಳಿದುಬಂದಿದೆ. ಸುಳ್ಳು ದೂರು ಕೊಟ್ಟ ಹಿನ್ನಲೆ ಆದಂ ಪಾಷಾ ವಿರುದ್ಧ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.












Click it and Unblock the Notifications