Viral: ಕಾನ್‌ಸ್ಟೇಬಲ್ ಪರೀಕ್ಷೆ ಬರೆಯಲು ಬಂದ ತಾಯಿ; ಗೇಟಿಗೆ ಜೋಲಿ ಕಟ್ಟಿ ಅಳುವ ಮಗುವನ್ನ ಮಲಗಿಸಿದ ಪೊಲೀಸರು
ಬೆಂಗಳೂರು: ಖಾಕಿ ತೊಟ್ಟ ಪೊಲೀಸರೆಂದರೆ ಸಾಮಾನ್ಯವಾಗಿ ಭಯ, ಕಠಿಣ ಮನಸ್ಸಿನವರು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕಟ್ಟುನಿಟ್ಟಿನ ಅಧಿಕಾರಿಗಳು ಎಂಬ ಭಾವನೆ ಸಾರ್ವಜನಿಕರಲ್ಲಿರುತ್ತದೆ. ಆದರೆ, ಅದೇ ಖಾಕಿಯೊಳಗೆ ಒಂದು ತಾಯಿ ಹೃದಯ ಕೂಡ ಇರುತ್ತದೆ ಎಂಬುದನ್ನ ಬೆಂಗಳೂರಿನ ಮಹಿಳಾ ಪೊಲೀಸ್ ಸಿಬ್ಬಂದಿ ತಮ್ಮ ಮಾನವೀಯ ಕೆಲಸದ ಮೂಲಕ ಸಾಬೀತುಪಡಿಸಿದ್ದಾರೆ.
ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಯ ಲಿಖಿತ ಪರೀಕ್ಷೆ ಬರೆಯಲು ಬಂದಿದ್ದ ಮಹಿಳಾ ಅಭ್ಯರ್ಥಿಯೊಬ್ಬರ 8 ತಿಂಗಳ ಹಸುಗೂಸನ್ನ ಲಾಲಿಸಿ, ಗೇಟಿಗೆ ಜೋಲಿ ಕಟ್ಟಿ ಮಲಗಿಸಿದ ಮಹಿಳಾ ಪೊಲೀಸರ ಕೆಲಸಕ್ಕೆ ಇಡೀ ರಾಜ್ಯಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆ ಬರೆಯಲು ಬಂದಿದ್ದ ಮಹಿಳಾ ಅಭ್ಯರ್ಥಿ
ನಿನ್ನೆ ಅಂದರೆ ಆಗಸ್ಟ್ 02ರ ಭಾನುವಾರದಂದು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆ ನಡೆಯುತ್ತಿತ್ತು. ಶಿವಮೊಗ್ಗ ಮೂಲದ ಅಭ್ಯರ್ಥಿ ಸುನೀತಾ ಅವರು ಪರೀಕ್ಷೆ ಬರೆಯಲು ಬೆಂಗಳೂರಿನ ಕತ್ತರಿಗುಪ್ಪೆಯಲ್ಲಿರುವ ಕೃಷ್ಣ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು. ತಮ್ಮ ಎಂಟು ತಿಂಗಳ ಪುಟ್ಟ ಮಗು ಹಾಗೂ ಪತಿಯೊಂದಿಗೆ ಕೇಂದ್ರದ ಬಳಿ ಬಂದಿದ್ದ ಅವರು, ಪರೀಕ್ಷಾ ನಿಯಮದಂತೆ ಪ್ರವೇಶ ದ್ವಾರದಲ್ಲಿ ತಪಾಸಣೆ ಮುಗಿಸಿ ಮಗುವನ್ನ ಪತಿಯ ಕೈಗೆ ಕೊಟ್ಟು ಪರೀಕ್ಷಾ ಕೊಠಡಿಯೊಳಗೆ ತೆರಳಿದ್ದರು.
ತಾಯಿ ಪರೀಕ್ಷಾ ಕೊಠಡಿಯೊಳಗೆ ಹೋಗುತ್ತಲೇ ಇತ್ತ ತಾಯಿಯನ್ನ ಹುಡುಕುತ್ತಾ ಎಂಟು ತಿಂಗಳ ಕಂದಮ್ಮ ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದೆ. ಮಗುವಿನ ತಂದೆ ಎಷ್ಟೇ ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಮಗು ಅಳು ನಿಲ್ಲಿಸಲಿಲ್ಲ. ಈ ದೃಶ್ಯವನ್ನ ಪರೀಕ್ಷಾ ಕೇಂದ್ರದ ಭದ್ರತಾ ಕರ್ತವ್ಯದಲ್ಲಿದ್ದ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಮಹಿಳಾ ಕಾನ್‌ಸ್ಟೇಬಲ್‌ಗಳಾದ ಲಕ್ಷ್ಮೀ ಕನಕನವಾಡಿ, ಗಿರಿಜಾ ಹಾಗೂ ಗೃಹ ರಕ್ಷಕಿ ವಿಜಯಾ ಅವರು ಗಮನಿಸಿದರು. ತಕ್ಷಣವೇ ಸ್ಪಂದಿಸಿದ ಈ ಮೂವರು ಸಿಬ್ಬಂದಿ, ಮಗುವನ್ನ ತಂದೆಯಿಂದ ತಮ್ಮ ಮಡಿಲಿಗೆ ತೆಗೆದುಕೊಂಡರು.
ಗೇಟಿಗೆ ಜೋಳಿ ಕಟ್ಟಿ ಮಗುವನ್ನು ಲಾಲಿಸಿದ ಖಾಕಿ ಪಡೆ
ಮಗುವನ್ನು ಎತ್ತಿಕೊಂಡು ಮುದ್ದಿಸಿ, ಆಟವಾಡಿಸಿ ಅಳು ನಿಲ್ಲಿಸಲು ಪೊಲೀಸರು ಸಾಕಷ್ಟು ಪ್ರಯತ್ನ ಪಟ್ಟರು. ಆದರೂ ತಾಯಿಗಾಗಿ ಹಂಬಲಿಸುತ್ತಿದ್ದ ಮಗು ರಚ್ಚೆ ಹಿಡಿದು ಅಳುತ್ತಲೇ ಇತ್ತು. ಕೊನೆಗೆ ಮಹಿಳಾ ಸಿಬ್ಬಂದಿ ಪರೀಕ್ಷಾ ಕೇಂದ್ರದ ಕಬ್ಬಿಣದ ಗೇಟಿಗೆ ಸೀರೆಯಿಂದ ತಾತ್ಕಾಲಿಕ ಜೋಲಿ ಅಥವಾ ಜೋಳಿಗೆ (ತೊಟ್ಟಿಲು) ಕಟ್ಟಿದರು. ಅಳುತ್ತಿದ್ದ ಮಗುವನ್ನು ಆ ಜೋಲಿಯಲ್ಲಿ ಮಲಗಿಸಿ, ತೂಗುತ್ತಾ ನಿದ್ದೆ ಮಾಡುವಂತೆ ಸಾಂತ್ವನ ಹೇಳಿದರು. ಪೊಲೀಸರ ಈ ವಾತ್ಸಲ್ಯಕ್ಕೆ ಮಗು ಹಾಯಾಗಿ ನಿದ್ದೆ ಜಾರಿತು. ಇದರಿಂದ ಪರೀಕ್ಷಾ ಕೊಠಡಿಯಲ್ಲಿದ್ದ ತಾಯಿ ಸುನೀತಾ ಕೂಡ ಯಾವುದೇ ಆತಂಕವಿಲ್ಲದೆ ನಿರಾಳವಾಗಿ ಪರೀಕ್ಷೆ ಬರೆದರು.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ವಿಡಿಯೋ ಹಾಗೂ ಭಾರಿ ಪ್ರಶಂಸೆ
ಮಹಿಳಾ ಪೊಲೀಸರು ಗೇಟಿಗೆ ಜೋಲಿ ಕಟ್ಟಿ ಮಗುವನ್ನ ತೂಗುತ್ತಿರುವ ಹೃದಯಸ್ಪರ್ಶಿ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲೇ ವೈರಲ್ ಆದವು. ವಿಡಿಯೋ ಅಪ್‌ಲೋಡ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ನೆಟ್ಟಿಗರು ಇದನ್ನ ವೀಕ್ಷಿಸಿ, ಪೊಲೀಸರ ಈ ಕಾರ್ಯವನ್ನ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
"ಪೊಲೀಸರ ಕರ್ತವ್ಯ ಕೇವಲ ಭದ್ರತೆ ಒದಗಿಸುವುದಷ್ಟೇ ಅಲ್ಲ, ಸಂಕಷ್ಟದ ಸಮಯದಲ್ಲಿ ಜನಸಾಮಾನ್ಯರ ಜೊತೆ ನಿಲ್ಲುವುದು ಕೂಡ ಹೌದು ಎಂಬುದನ್ನು ಈ ಸಿಬ್ಬಂದಿ ತೋರಿಸಿಕೊಟ್ಟಿದ್ದಾರೆ. ಖಾಕಿ ತೊಟ್ಟ ತಾಯಂದಿರ ಈ ಕೆಲಸ ನಿಜಕ್ಕೂ ಸ್ಫೂರ್ತಿದಾಯಕ," ಎಂದು ಸಾರ್ವಜನಿಕರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾಯಿಯೊಬ್ಬಳ ಭವಿಷ್ಯದ ಕನಸಿಗೆ ನೆರವಾದ ಬೆಂಗಳೂರು ಪೊಲೀಸರ ಈ ಮಾನವೀಯ ನಡೆಗೆ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಗೌರವ ಹಾಗೂ ಕೃತಜ್ಞತೆಗಳು ಸಲ್ಲಿಕೆಯಾಗುತ್ತಿವೆ.


Click it and Unblock the Notifications
