'ಮನೆಯಿಂದಲೇ ಕೆಲಸ' ಕೊಡ್ತೀವಿ ಎಂದು ಹೀಗೂ ಮಾಡ್ತಾರೆ ಎಚ್ಚರ!
ಯುವಕರ ನಿರುದ್ಯೋಗ ಸಮಸ್ಯೆಯನ್ನು ಇತ್ತೀಚಿನ ದಿನಗಳಲ್ಲಿ ಕೆಲವರು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಕೆಲಸದ ಆಸೆಗಾಗಿ ಹೇಳಿದ್ದನ್ನೆಲ್ಲ ಮಾಡಿದರೆ ಜೈಲು ಸೇರುವುದು ಗ್ಯಾರಂಟಿ ಎನ್ನುತ್ತಾರೆ ಪೊಲೀಸರು. ಬೆಂಗಳೂರಿನಲ್ಲಿಯೂ ಇಂತಹ ಜಾಲವೊಂದು ಸಕ್ರಿಯವಾಗಿದ್ದು, ಈ ಬಗ್ಗೆ ಎಚ್ಚರವಾಗಿರಿ ಎಂದು ಹೇಳಿದ್ದಾರೆ.
ಹೌದು, ಬೆಂಗಳೂರಿನಲ್ಲಿ ಆನ್‌ಲೈನ್ ಜಾಬ್ ಟಾಸ್ಕ್ ಹಾಗೂ ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿದರೆ ಹೆಚ್ಚು ಲಾಭ ನೀಡುತ್ತೇವೆ ಎಂದು ಮೋಸ ಮಾಡುವವರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಮೊದಲಿಗೆ ಸೋಶಿಯಲ್ ಮೀಡಿಯಾಗಳಲ್ಲಿ ನಿರುದ್ಯೋಗಿಗಳಿಗೆ ಬಲೆ ಬೀಸುತ್ತಾರೆ. ಬಳಿಕ ನಿಮಗೆ ಮನೆಯಿಂದಲೇ ಮಾಡುವ ಕೆಲಸ ಕೊಡುತ್ತೇವೆ ಎಂದು ನಂಬಿಸುತ್ತಾರೆ. ಆನ್‌ಲೈನ್‌ನಲ್ಲಿ ನಾವು ಕೊಡುವ ಟಾಸ್ಕ್ ಮುಗಿಸಿದರೆ, ನಿಮಗೆ ಹಣ ಬರುತ್ತದೆ ಎಂದು ಆಮಿಷ ನೀಡುತ್ತಾರೆ ಎಂದು ಪೊಲೀಸರು ಹೇಳಿದ್ದಾರೆ.
ಬಳಿಕ ಯುವಕರನ್ನು ಟೆಲಿಗ್ರಾಂ ಗ್ರೂಪ್‌ಗೆ ಸೇರಿಸಿಕೊಂಡು ಮೊದಲಿಗೆ ಕೆಲವು ಹೋಟೆಲ್‌ಗಳ ಬಗ್ಗೆ ತಮ್ಮ ಅಭಿಪ್ರಾಯ ನೀಡುವಂತೆ ಕೇಳಿ, ಇದಕ್ಕೆ 200 ರೂಪಾಯಿವರೆಗೆ ಹಣ ನೀಡುತ್ತಾರೆ. ಇದೇ ರೀತಿ ಮತ್ತಷ್ಟು ಮಂದಿಯಿಂದ ಮಾಡಿಸಿದರೆ ಲಾಭ ಹೆಚ್ಚು ಬರುತ್ತದೆ ಎಂದು ಟಾರ್ಗೆಟ್ ಕೂಡ ಕೊಡುತ್ತಾರೆ. ಇದೇ ರೀತಿ 500 ರೂಪಾಯಿವರೆಗೆ ಆನ್‌ಲೈನ್ ಮೂಲಕ ಹಣ ಪಾವತಿಸುತ್ತಾರೆ.

ಈ ರೀತಿ ಹಲವರಿಂದ ಅಭಿಪ್ರಾಯ ಸಂಗ್ರಹಿಸಿ ಅದಕ್ಕೆ ಹಣ ನೀಡುತ್ತಾ ನಂಬಿಕೆ ಗಳಿಸಿಕೊಳ್ಳುತ್ತಾರೆ. ಬಳಿಕ ಕ್ರಿಪ್ಟೋ ಕರೆನ್ಸಿ ಬಗ್ಗೆ ಪ್ರಸ್ತಾಪಿಸಿ, ಇದರಲ್ಲಿ ಹಣ ಇನ್ವೆಸ್ಟ್ ಮಾಡಿದರೆ ದೊಡ್ಡ ಲಾಭ ಬರುತ್ತದೆ ಎಂದು ಆಸೆ ಹುಟ್ಟಿಸುತ್ತಾರೆ. ಇದನ್ನು ನಂಬಿ ಲಕ್ಷಾಂತರ ರೂಪಾಯಿ ಹಣ ಹೂಡಿಕೆ ಮಾಡಿದರೆ, ಹಣದೊಂದಿಗೆ ನಾಪತ್ತೆಯಾಗಿ, ಫೋನ್ ಸಂಪರ್ಕಕ್ಕೂ ಅವರು ಸಿಗುವುದಿಲ್ಲ ಎಂದು ಪೊಲೀಸರು ವಿವರಿಸಿದ್ದಾರೆ.
ಇದೇ ರೀತಿ ಆನ್‌ಲೈನ್ ವಂಚನೆ ಮಾಡುತ್ತಿದ್ದ 10 ಆರೋಪಿಗಳನ್ನು ಬೆಂಗಳೂರು ಉತ್ತರ ವಿಭಾಗದ ಸಿಇಎನ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸೈಯದ್ ಯಾಹ್ಯಾ, ಮೊಹಮ್ಮದ್ ಮಹೀನ್, ಮೊಹಮ್ಮದ್ ಮುಜಾಮಿಲ್, ತೇಜಸ್, ಚೇತನ್, ವಾಸೀಂ ಅಕ್ರಮ್, ಉಮರ್ ಫಾರೂಕ್, ಸೈಯದ್ ಝೈದ್, ಸಾಹಿ ಅಬ್ಧುಲ್ ಅನನ್, ಓಂ ಪ್ರಕಾಶ್ ಬಂಧಿತರು. ಇವರೆಲ್ಲರೂ ಆರ್.ಟಿ.ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಸವಿದ್ದರು ಎನ್ನಲಾಗಿದೆ.
ಆರೋಪಿಗಳಿಂದ 72 ಮೊಬೈಲ್, 127 ಬ್ಯಾಂಕ್ ಪಾಸ್‌ಬುಕ್, 1.74 ಲಕ್ಷ ರೂಪಾಯಿ, 182 ಡೆಬಿಟ್ ಕಾರ್ಡ್, ಲ್ಯಾಪ್‌ಟಾಪ್, 133 ಸಿಮ್ ಕಾರ್ಡ್ ಜಪ್ತಿ ಮಾಡಿರುವುದಾಗಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ. ಆರೋಪಿಗಳು ಇದೇ ರೀತಿ ಒಬ್ಬರಿಗೆ 25.37 ಲಕ್ಷ ರೂಪಾಯಿ ವಂಚಿಸಿದ್ದರು. ಈ ಸಂಬಂಧ ಕೇಸ್ ದಾಖಲಾಗಿತ್ತು. ಬಳಿಕ ಪೊಲೀಸರು ಬೆನ್ನತ್ತಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಇವರಿಗೆಲ್ಲ ಚೀನಾದ ಕೆಲವರು ಸೂಚನೆ ನೀಡುತ್ತಿದ್ದರು. ಅದರಂತೆಯೇ ಇವರೆಲ್ಲ ವಂಚನೆ ಮಾಡುತ್ತಿದ್ದರು. ಬರೋಬ್ಬರಿ 6 ಕೋಟಿ ರೂಪಾಯಿಗೂ ಹೆಚ್ಚಿನ ಹಣ ಇದೇ ರೀತಿ ವಂಚಿಸಿದ್ದಾರೆ ಎಂಬುದು ತಿಳಿದುಬಂದಿದೆ. ಆರೋಪಿಗಳೆಲ್ಲ ಒಳ್ಳೆಯ ಶಿಕ್ಷಣ ಪಡೆದಿದ್ದಾರೆ. ದೊಡ್ಡ ಕಂಪನಿಗಳಲ್ಲಿ ಕೆಲಸ ಕೂಡ ಮಾಡಿಕೊಂಡಿದ್ದಾರೆ. ಆದರೆ ಇವರ ಕಿಂಗ್‌ಪಿನ್‌ಗಳು ಚೀನಾದಲ್ಲಿದ್ದಾರೆ. ಇದೇ ರೀತಿ ದೇಶದಲ್ಲಿ 122 ಕೇಸ್‌ಗಳು ದಾಖಲಾಗಿರುವುದಾಗಿ ವರದಿಯಾಗಿದೆ.












Click it and Unblock the Notifications