Double Decker: ಒಂದೇ ಮಾರ್ಗದಲ್ಲಿ ಬರಲಿದೆ 2 ಡಬಲ್ ಡೆಕ್ಕರ್ ಫ್ಲೈಓವರ್, ಟ್ರಾಫಿಕ್‌ಗೆ ಗುಡ್‌ಬೈ
ಬೆಂಗಳೂರಿನ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ನಿರ್ಮಾಣವಾಗಿರುವ ದಕ್ಷಿಣ ಭಾರತದ ಮೊದಲ ಡಬಲ್ ಡೆಕ್ಕರ್ ಫ್ಲೈ ಓವರ್‌ನಿಂದಾಗಿ ಸಂಚಾರಕ್ಕೆ ರಿಲೀಫ್ ಸಿಕ್ಕಿರುವ ಬೆನ್ನಲ್ಲೇ ಮತ್ತೆ ಎರಡು ಡಬಲ್ ಡೆಕ್ಕರ್ ಫ್ಲೈ ಓವರ್ ತಲೆ ಎತ್ತಲಿವೆ.
ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಜಾಮ್‌ಗೆ ಕಡಿವಾಣ ಹಾಕಲು ನಾನಾ ಪ್ರಯತ್ನ ಮಾಡಿದರೂ, ಅದಕ್ಕೆ ಕೊನೆಯೇ ಇಲ್ಲವಾಗಿದೆ. ಈ ಹಿನ್ನೆಲೆ ಹೆಚ್ಚು ಟ್ರಾಫಿಕ್ ಕಂಡುಬರುವ ಕಡೆ ಇಂತಹ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಿಸಿದರೆ. ಒಂದೇ ಜಾಗದಲ್ಲಿ ಹಲವು ವಾಹನಗಳು ನಿಶ್ಚಿಂತೆಯಿಂದ ಸಂಚರಿಸಬಹುದು ಹಾಗೂ ದಟ್ಟಣೆ ಕೂಡ ತಗ್ಗಲಿದೆ ಎಂದು ಯೋಜನೆ ರೂಪಿಸಿದೆ ಎನ್ನಲಾಗಿದೆ.

ಮುಖ್ಯವಾಗಿ ಸಿಲಿಕಾನ್ ಸಿಟಿಯಲ್ಲಿರುವ ಕನಕಪುರ ಜಂಕ್ಷನ್ ಹಾಗೂ ಕಾಮಾಕ್ಯ ಜಂಕ್ಷನ್ನಲ್ಲಿ ಮಿತಿಮೀರಿರುವ ಟ್ರಾಫಿಕ್‌ನಿಂದ ಮುಕ್ತಿ ನೀಡಲು ನಮ್ಮ ಮೆಟ್ರೋ ಇದೀಗ ಎರಡೆರಡು ಡಬಲ್ ಡೆಕ್ಕರ್ ಫ್ಲೈಓವರ್ ಮೊರೆ ಹೋಗಿದೆಯಂತೆ.
ಬೆಂಗಳೂರಿನ ಕೇಸರಿ ಮಾರ್ಗದಲ್ಲಿ ಈ ಎರಡು ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಕೂಡ ಒಪ್ಪಿಗೆ ನೀಡಿದೆ. ಹಾಗಾಗಿ ಬರೋಬ್ಬರಿ 507 ಕೋಟಿ ರೂಪಾಯಿ ವೆಚ್ಚದಲ್ಲಿ ಜೆ.ಪಿ.ನಗರದ ಮೆಟ್ರೋ ನಿಲ್ದಾಣದ ಬಳಿ ಇರುವ ಕನಕಪುರ ರೋಡ್ ಜಂಕ್ಷನ್ ಹಾಗೂ ಕಾಮಾಕ್ಯ ಜಂಕ್ಷನ್ನಲ್ಲಿ ಮತ್ತೊಂದು ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣ ಮಾಡಲು ನಮ್ಮ ಮೆಟ್ರೋ (ಬಿಎಂಆರ್ಸಿಎಲ್) ಮುಂದಾಗಿದೆ.

ಇನ್ನು ಒಂದೇ ಮೆಟ್ರೋ ಮಾರ್ಗದಲ್ಲಿ ಈ ಎರಡೂ ಡಬಲ್ ಡೆಕ್ಕರ್ ಫ್ಲೈಓವರ್‌ಗಳು ಬರಲಿದ್ದು, ಈ ಹೆಗ್ಗಳಿಕೆಗೂ ಬೆಂಗಳೂರು ಪಾತ್ರವಾಗಲಿದೆ. ಹಾಗಾಗಿ ದಕ್ಷಿಣ ಭಾರತದಲ್ಲೇ ಒಂದೇ ಮೆಟ್ರೋ ಮಾರ್ಗಕ್ಕೆ ಎರಡು ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣವಾಗುವ ಖ್ಯಾತಿ ಕೂಡ ಬೆಂಗಳೂರಿಗೆ ಸಿಗಲಿದೆ. ಸಾಮಾನ್ಯ ರಸ್ತೆ ಹಾಗೂ ಮೇಲ್ಭಾಗದಲ್ಲಿ ವಾಹನಗಳು ಸಂಚರಿಸಿದರೆ, ಅದರ ಮೇಲೆ ಮೆಟ್ರೋ ರೈಲುಗಳು ಸಂಚರಿಸಲಿವೆ. ಒಂದೇ ಮಾರ್ಗದಲ್ಲಿ ಮೂರು ಮಾರ್ಗಗಳು ಸಂಚಾರವನ್ನು ಸುಲಭಗೊಳಿಸಲಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಹಳದಿ ಮಾರ್ಗದಲ್ಲಿ ನಿರ್ಮಾಣವಾಗಿರುವ ಡಬಲ್ ಡೆಕ್ಕರ್ ಫ್ಲೈ ಓವರ್‌ನಿಂದಾಗಿ ಸಿಲ್ಕ್ ಬೋರ್ಡ್‌ನಲ್ಲಿದ್ದ ಟ್ರಾಫಿಕ್ ತಲೆನೋವಿಗೆ ಪರಿಹಾರ ನೀಡಿದೆ. ಇನ್ನು ಈ ಹೊಸದಾಗಿ ನಿರ್ಮಾಣವಾಗುವ ಎರಡು ಡಬಲ್ ಡೆಕ್ಕರ್‌ಗಳು ಕನಕಪುರ ರೋಡ್ ಜಂಕ್ಷನ್ ಮತ್ತು ಕಾಮಾಕ್ಯ ಜಂಕ್ಷನ್‌ನ ಟ್ರಾಫಿಕ್ ಗುಡ್‌ಬೈ ಹೇಳಲಿವೆ. ಆದಷ್ಟು ಬೇಗನೇ ಈ ಕಾಮಗಾರಿ ಪೂರ್ಣಗೊಂಡರೆ, ಈ ಭಾಗದ ಸವಾರರು ನೆಮ್ಮದಿಯಾಗಿ ಪ್ರಯಾಣಿಸಲಿದ್ದಾರೆ.

ಬೆಂಗಳೂರಿನ ರಾಗಿಗುಡ್ಡ-ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ನಿರ್ಮಾಣವಾಗಿರುವ ದಕ್ಷಿಣ ಭಾರತದ ಮೊದಲ ಡಬಲ್ ಡೆಕ್ಕರ್ ಫ್ಲೈ ಓವರ್‌ನ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಿದ್ದರು ಡಿ.ಕೆ.ಶಿವಕುಮಾರ್. ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಹೊಸ ಮಾದರಿಯಲ್ಲಿ ನಗರದ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು 450 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಡಬಲ್ ಡೆಕ್ಕರ್ ಪ್ಲೈಓವರ್ ಅನ್ನು ನಿರ್ಮಿಸಲಾಗಿದೆ ಎಂದಿದ್ದರು.
ನಾನು ಮಹಾರಾಷ್ಟ್ರದ ನಾಗ್ಪುರಕ್ಕೆ ಹೋಗಿದ್ದಾಗ ಅಲ್ಲಿ ಇದನ್ನು ಗಮನಿಸಿದ್ದು, ಸಂಚಾರ ದಟ್ಟಣೆ ನಿಯಂತ್ರಿಸುವಲ್ಲಿ ಇವು ಸಹಕಾರಿಯಾಗಿವೆ. ವಿಶ್ವದರ್ಜೆಯ ಈ ಪ್ಲೈಓವರ್‌ನಿಂದ ಟ್ರಾಫಿಕ್ ಕಡಿಮೆಯಾಗಲಿದ್ದು, ವಾಹನ ಸವಾರರಿಗೆ ಅನುಕೂಲವಾಗಲಿದೆ. ಅಲ್ಲದೆ ಸಿಗ್ನಲ್-ಮುಕ್ತ ಕಾರಿಡಾರ್ ಆಗಿ ಪರಿವರ್ತಿಸುವಲ್ಲಿ ಇದು ಮಹತ್ವದ ಪಾತ್ರವಹಿಸಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ರಾಗಿಗುಡ್ಡದಿಂದ ಸಿಗ್ನಲ್ ಇಲ್ಲದೆ ಸಿಲ್ಕ್ ಬೋರ್ಡ್ ಜಂಕ್ಷನ್ಗೆ ಪ್ರಯಾಣಿಸಲು ಅವಕಾಶ ಸಿಗಲಿದೆ. ಬೆಂಗಳೂರಿನಲ್ಲಿ ಹೊಸದಾಗಿ ನಿರ್ಮಾಣವಾಗಲಿರುವ ಮೆಟ್ರೋ ನಿಲ್ದಾಣಗಳಲ್ಲಿಯೂ ಈ ರೀತಿಯ ಡಬಲ್ ಡೆಕ್ಕರ್ ಪ್ಲೈಓವರ್ ನಿರ್ಮಾಣ ಮಾಡಲಿದ್ದು, ಈ ಕುರಿತು ಚರ್ಚಿಸಿ ಕಾರ್ಯರೂಪಕ್ಕೆ ತರಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದರು.












Click it and Unblock the Notifications