Metro Good News: ಬಿಡದಿ, ಹೊಸಕೋಟೆ ಸೇರಿ 6 ಕಡೆಗೆ 'ನಮ್ಮ ಮೆಟ್ರೋ' ವಿಸ್ತರಣೆಗೆ ಪ್ಲ್ಯಾನ್,
ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ಮೊದಲ ನೇರಳೆ ಮಾರ್ಗ (Purple Line Metro) ವಿಸ್ತರಣೆಗೆ ಇತ್ತೀಚೆಇಗೆ ಬಿಎಂಆರ್ ಸಿಎಲ್ ಗುತ್ತಿಗೆದಾರ ಕಂಪನಿಯನ್ನು ಅಂತಿಮಗೊಳಿಸಿತು. ಆದರೆ ಇದು ಕಿರು ವಿಸ್ತರಣೆ ಆಗಿದ್ದು, ರೈಲು ನಿರ್ವಹಣೆಗೆ ಬಳಕೆ ಆಗಲಿದೆ. ಇದೀಗ ವಿವಿಧ ಒಟ್ಟು 6 ಮೆಟ್ರೋ ಮಾರ್ಗಗಳನ್ನು ವಿಸ್ತರಣೆ ಮಾಡಲು ಪ್ರಸ್ತಾವನೆ ಬಂದಿದೆ.
ನಗರದಲ್ಲಿ ದಿನದಿಂದ ದಿನಕ್ಕೆ, ವಾಹನಗಳು ಮತ್ತು ಜನದಟ್ಟಣೆ ಹೆಚ್ಚಾಗುತ್ತಿದೆ. ಖಾಸಗಿ ವಾಹನಗಳ ರಸ್ತೆ ಸಂಚಾರ ಏರಿಕೆ ಆಗುತ್ತಿದೆ. ಈ ಸಂಬಂಧ ಜನರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಹೊಸ ಮೆಟ್ರೋ ಮಾರ್ಗಗಳ ನಿರ್ಮಾಣ, ಮೆಟ್ರೋ ಕಾಮಗಾರಿಗೆ ವೇಗ ನೀಡಲಾಗುತ್ತಿದೆ. ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಹಾಲಿ ಮೆಟ್ರೋ ಮಾರ್ಗಗಳನ್ನು ವಿಸ್ತರಣೆ ಮಾಡಲು ಪ್ಲ್ಯಾನ್ ಮಾಡಲಾಗಿದೆ. ಯಾವೆಲ್ಲ ಮಾರ್ಗಗಳು ವಿಸ್ತರಣೆ ಆಗುತ್ತವೆ. ಎಷ್ಟು ಕಿಲೋ ಮೀಟರ್ ವಿಸ್ತರಣೆ ಆಗಲಿವೆ, ಅದರ ಪ್ರಯೋಜನ, ಉದ್ದೇಶವೇನು ಎಂಬ ಮಾಹಿತಿ ಇಲ್ಲಿದೆ.

ಪ್ರಸ್ತಾವನೆಯಲ್ಲಿರುವ ವಿಸ್ತರಣೆ ಉದ್ದೇಶಿತ ಮೆಟ್ರೋ ಮಾರ್ಗಗಳು
* ಚಲ್ಲಘಟ್ಟದವರೆಗೆ ಇರುವ ನೇರಳೆ ಮಾರ್ಗವನ್ನು ಅಲ್ಲಿಂದ ಬಿಡದಿವರೆಗೆ ಅಂದರೆ ಸುಮಾರು 15 ಕಿಮೀ ವಿಸ್ತರಣೆಗೆ ಚಿಂತನೆ ನಡೆದಿದೆ.
* ಸಿಲ್ಕ್ ಇನ್‌ಸ್ಟಿಟ್ಯೂಟ್ ವರೆಗೆ ಇರುವ ಹಸಿರು ಮಾರ್ಗವನ್ನು ಅಲ್ಲಿಂದ ಮುಂದಿನ 24 ಕಿಲೋ ಮೀಟರ್ (ಹಾರೋಹಳ್ಳಿವರೆಗೆ) ವಿಸ್ತರಣೆಗೆ ಪ್ಲ್ಯಾನ್ ಮಾಡಲಾಗುತ್ತಿದೆ.
* ಬೊಮ್ಮಸಂದ್ರವರೆಗೆ ಇರುವ 'ಹಳದಿ ಮೆಟ್ರೋ ಮಾರ್ಗ'ವನ್ನು ಅಲ್ಲಿಂದ ಅತ್ತಿಬೆಲೆವರೆಗೆ ಮುಂದೆ 11 ಕಿಲೋ ಮೀಟರ್ ವರೆಗೆ ನಿರ್ಮಿಸಲು ಪ್ರಸ್ತಾವನೆಯಲ್ಲಿ ಸೇರಿಸಲಾಗಿದೆ.
* ಉದ್ಘಾಟನೆಗೆ ಸಜ್ಜಾಗಿರುವ 'ಗುಲಾಬಿ ಮೆಟ್ರೋ ಮಾರ್ಗ' (ಕಾಳೇನ ಅಗ್ರಹಾರ- ತಾವರೆಕೆರೆ) ದ ಪೈಕಿ ಕಾಳೇನ ಅಗ್ರಹಾರದಿಂದ ಕಾಡುಗೋಡಿ ಟ್ರೀ ಪಾರ್ಕ್‌ವರೆಗೆ ಸುಮಾರು 68 ಕಿಲೋ ಮೀಟರ್ ವಿಸ್ತರಣೆಗೆ ಚಿಂತನೆ ನಡೆದಿದೆ.
* ತುಮಕೂರು ರಸ್ತೆಯ ಮಾದಾವರಗೆ ಕೊನೆಗೊಳ್ಳುವ ಹಸಿರು ಮೆಟ್ರೋ ಮಾರ್ಗ'ವನ್ನು ತುಮಕೂರಿನ ವರೆಗೆ 59ಕಿಮೀ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಇದರ ಕಾರ್ಯಸಾಧ್ಯತಾ ವರದಿ ಸಲ್ಲಿಕೆ ಆಗಿದ್ದು, ಡಿಪಿಆರ್ ತಯಾರಿಲಾಗುತ್ತಿದೆ.
* ಈ ಹಿಂದೊಮ್ಮೆ ತಿಳಿಸಿದ್ದ ಕೆ.ಆರ್.ಪುರಂನಿಂದ ಹೊಸಕೋಟೆವರೆಗೆ ನೇರಳೆ ಮಾರ್ಗವನ್ನು ಒಟ್ಟು 16 ಕಿಮೀ ವಿಸ್ತರಿಸುವುದು ಪ್ರಸ್ತಾವನೆಯಲ್ಲಿದೆ.
ಅಂತರನಗರಕ್ಕೆ ಸಂಪರ್ಕ ಕಲ್ಪಿಸುವ ತುಮಕೂರು ವರೆಗಿನ ಮೆಟ್ರೋ ಯೋಜನೆಯು ಡಿಪಿಆರ್ ತಯಾರಿಕೆಯಲ್ಲಿದೆ. ಉಳಿದೆಲ್ಲ ಐದು ಮಾರ್ಗಗಳ ವಿಸ್ತರಣೆ ಪ್ರಸ್ತಾವನೆ ಹಂತದಲ್ಲಿದೆ. ಇದಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದರೆ ಶೀಘ್ರವೇ ಆಯಾ ಮಾರ್ಗಗಳ ಕಾರ್ಯಸಾಧ್ಯತಾ ವರದಿ ತಯಾರಾಗಲಿದೆ. ಬಳಿಕ ಅದರ ವರದಿ ಸಲ್ಲಿಕೆಯಾಗಿ ಅನುಮೋದನೆ ದೊರೆತೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಕೆಗೆ ಸೂಚಿಸುವ ಸಾಧ್ಯತೆ ಇದೆ.
ಪ್ರಸ್ತಾವನೆ ಉದ್ದೇಶ, ಪ್ರಯೋಜನವೇನು?
ಬೆಂಗಳೂರು ಮೊದಲಿನಂತಿಲ್ಲ. ಬದಲಾಗಿ ನಗರದ ಹೊರ ವಲಯಕ್ಕೂ ಬೆಳೆಯುತ್ತಲೇ ಇದೆ. ಜನಸಂಖ್ಯೆ ಹೆಚ್ಚಾಗುತ್ತಿದೆ. ನಿತ್ಯ ಖಾಸಗಿ ವಾಹನಗಳ ಬದಲಾಗಿ ಸಾರ್ವಜನಿಕ ಸಾರಿಗೆ ಬಳಕೆ ಆದರೆ ಟ್ರಾಫಿಕ್ ನಿಯಂತ್ರಣಕ್ಕೆ ಬರುತ್ತದೆ. ಈ ನಿಟ್ಟಿನಲ್ಲಿ ನಗರದಿಂದ ದೂರದ ಕೈಗಾರಿಕಾ ಪ್ರದೇಶಗಳವರೆಗೆ ಮೆಟ್ರೋ ಸೇವೆ ಲಭ್ಯವಾದರೆ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ. ದಟ್ಟಣೆ ಕಡಿಮೆ ಆಗುತ್ತದೆ.
ಜನರಿಗೆ ಪ್ರಯಾಣದ ಸಮಯ ಉಳಿತಾಯವಾಗುತ್ತದೆ. ಉದ್ಯೋಗ ಕಾರಿಡಾರ್, ಕೈಗಾರಿಕೆ ಪ್ರದೇಶ, ಶಿಕ್ಷಣ ಸಂಸ್ಥೆಗಳಿಗೆ ಸಂಪರ್ಕ ಸುಧಾರಣೆ ಸೇರಿ ಹಲವು ಪ್ರಯೋಜನಗಳು ಸಿಗಲಿವೆ. ಈ ನಿಟ್ಟಿನಲ್ಲಿ ಸರ್ಕಾರ ಶೀಘ್ರವೇ ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಬೇಕಿದೆ.


Click it and Unblock the Notifications
