ನಮ್ಮ ಮೆಟ್ರೋ ಪಿಂಕ್ ಲೈನ್ ಆರಂಭಕ್ಕೂ ಮುನ್ನವೇ ಬದಲಾಗುತ್ತಿದೆ ಬನ್ನೇರುಘಟ್ಟ ರಸ್ತೆ ಸೌಂದರ್ಯ!
ಬೆಂಗಳೂರು: ಬೆಂಗಳೂರು ಜಿಬಿಎ ವ್ಯಾಪ್ತಿಯ ವಿವಿಧ ಪಾಲಿಕೆಗಳ ಅಧಿಕಾರಿಗಳಿಂದ ಸ್ವಚ್ಛತಾ ಅಭಿಯಾನ, ಒತ್ತುವರಿ ತೆರವು ನಡೆಯುತ್ತಿದೆ. ಇತ್ತೀಚೆಗೆ ಸಿಲ್ಕ್ ಬೋರ್ಡ್ ಕೆಳಗಿನ ಮೆಟ್ರೋ ಯೆಲ್ಲೋ ಲೈನ್ ಕಂಬಗಳಿಗೆ ಬಣ್ಣ ಬಳಿಯಲಾಗಿತ್ತು. ಮುಂದುವರಿದು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಹಾಗೂ ಜಸ್ಟ್ ಕ್ಲೀನ್ ಬೆಂಗಳೂರು ಅಭಿಯಾನದಡಿ, 'ದಿ ಅಗ್ಲಿ ಇಂಡಿಯನ್ಸ್' ಸಹಯೋಗದಲ್ಲಿ ಬನ್ನೇರುಘಟ್ಟ ಮುಖ್ಯರಸ್ತೆಯ ಬಿಳೇಕಹಳ್ಳಿ ವ್ಯಾಪ್ತಿಯ ಐಐಎಂಬಿ ಮೆಟ್ರೋ ಮಾರ್ಗದಲ್ಲಿದ್ದ ಬ್ಲಾಕ್ ಸ್ಪಾಟ್ ತೆರವುಗೊಳಿಸಿ ಗೋಡೆ ಸೌಂದರ್ಯೀಕರಣ ಕೆಲಸ ನಡೆಸಿದೆ, ಸ್ವತಃ ಆಯುಕ್ತ ಕೆ. ಎನ್. ರಮೇಶ್ ಅವರೇ ಗೋಡೆಗೆ ಬಣ್ಣ ಬಳಿದಿದ್ದಾರೆ.
ಬೆಂಗಳೂರು ನಗರದ ಸ್ವಚ್ಛತೆ, ಅತಿಕ್ರಮ ವಿರುದ್ಧ ಸಮರ ಸಾರಿದ ಬಳಿಕ ಬ್ಲ್ಯಾಕ್ ಸ್ಪಾಟ್ ತೆರವು ಮಾಡಿ ಇದೀಗ ನಗರದ ಸೌಂದರ್ಯ ಹೆಚ್ಚಿಸುವ ಕೆಲಸವಾಗುತ್ತಿದೆ. ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿರುವ 7.5 ಕಿಮೀ, ಗುಲಾಬಿ ಮೆಟ್ರೋ ಮೆಟ್ರೋ ಮಾರ್ಗದ ಹಿನ್ನೆಲೆಯಲ್ಲಿ ನಿಲ್ದಾಣಗಳ ಸಮೀಪ ಸಾರ್ವಜನಿಕರಿಗೆ ಸುಗಮ ಮತ್ತು ಸುರಕ್ಷಿತ ಸಂಚಾರ ಕಲ್ಪಿಸುವ 'ಲಾಸ್ಟ್ ಮೈಲ್ ಕನೆಕ್ಟಿವಿಟಿ' ಸುಧಾರಣೆ ಮಾಡಲಾಗುತ್ತಿದೆ. ಪಿಂಕ್ ಲೈನ್ ಆರಂಭಕ್ಕೂ ಮುನ್ನವೇ ಆ ಭಾಗದ ಸೌಂದರ್ಯೀಕರಣಕ್ಕೆ ಕ್ರಮ ವಹಿಸಲಾಗಿದೆ. ಕಾರಿಡಾರ್ ಕೆಳಗೆ ಸಾರ್ವಜನಿಕರಿಗೆ ಮೂಲಸೌಕರ್ಯ ಕಲ್ಪಿಸಳಾಗುತ್ತಿದೆ ಎಂದು ಆಯುಕ್ತರು ತಿಳಿಸಿದರು.

ಪಾದಾಚಾರಗಳಿಗೆ ಅಡ್ಡವಿದ್ದ ಗೋಡೆ ತೆರವು
ಐಐಎಂಬಿ ಮೆಟ್ರೋ ನಿಲ್ದಾಣದ ಸಂಪರ್ಕ ರಸ್ತೆಯಲ್ಲಿರುವ ಸವದತ್ತಿ ಎಲ್ಲಮ್ಮ ದೇವಾಲಯದ ಬಳಿ ಸುಮಾರು 10 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಪಾದಾಚಾರಿ ಮಾರ್ಗಕ್ಕೆ ಅಡ್ಡವಾಗಿದ್ದ ಗೋಡೆಯು ಸಂಪೂರ್ಣ ಫುಟ್‌ಪಾತ್ ಅನ್ನು ಬಂದ್ ಮಾಡಿತ್ತು. ಇದರಿಂದ ಪಾದಚಾರಿಗಳು ರಸ್ತೆಯಲ್ಲೇ ಜೀವಭಯದಿಂದ ನಡೆಯುವಂತಾಗಿತ್ತು. ಅಲ್ಲಿನ ಸ್ಥಳ ಬ್ಲಾಕ್ ಸ್ಪಾಟ್ ಆಗಿ ಮಾರ್ಪಟ್ಟಿತ್ತು. ಸದ್ಯ ಗೋಡೆ ತೆರವು ಮಾಡಲಾಗಿದೆ. ಸ್ವಚ್ಛತೆ ಜೊತೆಗೆ ರಸ್ತೆಯ ಸುಮಾರು 500 ಮೀಟರ್ ಉದ್ದದ ಕಂಪೌಂಡ್ ಗೋಡೆಗೆ ಆಕರ್ಷಕ ಬಣ್ಣ ಬಳಿದು ಜಾಗೃತಿ ಮೂಡಿಸಲಾಯಿತು ಎಂದರು.
ಪಾಲಿಕೆ, ಬೆಸ್ಕಾಂ ಮತ್ತು ಐಐಎಂಬಿ ತ್ರಿವಳಿ ಸಹಯೋಗ
ಸಾರ್ವಜನಿಕ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪಾಲಿಕೆ, ಬೆಸ್ಕಾಂ ಹಾಗೂ ಐಐಎಂಬಿ ಸಂಸ್ಥೆಗಳು ಜಂಟಿಯಾಗಿ ಕೈಜೋಡಿಸಿವೆ. ಫುಟ್‌ಪಾತ್ ಮೇಲೆ ಅಡ್ಡಲಾಗಿದ್ದ ದೊಡ್ಡ ಆರ್‌ಎಂಯು ಟ್ರಾನ್ಸ್‌ಫಾರ್ಮರ್ ಅನ್ನು ಬೆಸ್ಕಾಂ ವತಿಯಿಂದ ಎತ್ತರದ ಪೋಲ್ ಟ್ರಾನ್ಸ್‌ಫಾರ್ಮರ್ ಆಗಿ ಬದಲಾಯಿಸಲಾಗಿದ್ದು, ಪಾದಚಾರಿಗಳಿಗೆ ಹೆಚ್ಚಿನ ಸ್ಥಳಾವಕಾಶ ಲಭಿಸಿದೆ. ಇದೇ ವೇಳೆ ಪಾದಚಾರಿ ಮಾರ್ಗದ ಸೌಂದರ್ಯ ಹೆಚ್ಚಿಸಲು ಐಐಎಂಬಿ ವತಿಯಿಂದ ಆಕರ್ಷಕ ಹೂಕುಂಡಗಳನ್ನು ಇರಿಸಲಾಗಿದೆ. ಮುಂಜಾನೆ ಹಾಗೂ ರಾತ್ರಿ ವೇಳೆ ಮೆಟ್ರೋ ಪ್ರಯಾಣಿಕರ ಸುರಕ್ಷಿತ ಸಂಚಾರಕ್ಕಾಗಿ ಅಗತ್ಯವಿರುವ ಸಮರ್ಪಕ ಬೀದಿ ದೀಪಗಳ ವ್ಯವಸ್ಥೆಯನ್ನು ಕೂಡ ಐಐಎಂಬಿ ಕಲ್ಪಿಸಿಕೊಡಲಿದೆ.
ಐಐಎಂಬಿ ಕ್ಯಾಂಪಸ್, ರಸ್ತೆ ವಿಸ್ತರಣೆ
ಸ್ವಚ್ಛತಾ ಹಾಗೂ ತೆರವು ಕಾರ್ಯದ ಬಳಿಕ ಐಐಎಂಬಿ ಕ್ಯಾಂಪಸ್ ವ್ಯಾಪ್ತಿ ಹಾಗೂ ವಿಜಯ ಬ್ಯಾಂಕ್ ಲೇಔಟ್ ಹಿಂಭಾಗದ ರಸ್ತೆಗಳಲ್ಲಿ ಆಯುಕ್ತರು ಸ್ಥಳ ಪರಿಶೀಲಿಸಿದರು. ಮೆಟ್ರೋ ನಿಲ್ದಾಣದಿಂದ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ನಿರ್ವಹಣೆ, ಮಳೆನೀರು ಚರಂಡಿ, ಒಳಚರಂಡಿ ಲೈನ್ ಮತ್ತು ಸುಗಮ ಪಾದಚಾರಿ ಸಂಚಾರಕ್ಕೆ ಅಗತ್ಯವಿರುವ ರಸ್ತೆ ವಿಸ್ತರಣೆ ಹಾಗೂ ಸುಧಾರಣಾ ಕಾಮಗಾರಿಗಳನ್ನು ತ್ವರಿತ ಕೈಗೆತ್ತಿಕೊಳ್ಳುವಂತೆ ಸೂಚಿಸಿದರು.


Click it and Unblock the Notifications
