ವಾಟ್ಸಾಪ್‌ನಲ್ಲಿ ಬಂತು ಮದುವೆ ಕಾರ್ಡ್: ಎಪಿಕೆ ಫೈಲ್ ಓಪನ್ ಮಾಡಿದ ಬೆಂಗಳೂರು ಉದ್ಯಮಿಗೆ 5 ಲಕ್ಷ ರೂಪಾಯಿ ವಂಚನೆ

ಬೆಂಗಳೂರು: ವಾಟ್ಸಾಪ್‌ನಲ್ಲಿ ಅಪರಿಚಿತ ಸಂಖ್ಯೆಗಳಿಂದ ಬರುವ ಲಿಂಕ್ ಅಥವಾ ಫೈಲ್‌ಗಳನ್ನು ಕ್ಲಿಕ್ ಮಾಡುವ ಮುನ್ನ ಎಚ್ಚರ ಇರಬೇಕು. ಏಕೆಂದರೆ, ನೀವು ಮಾಡುವ ಆ ಸಣ್ಣ ತಪ್ಪು ನಿಮ್ಮ ಬ್ಯಾಂಕ್ ಖಾತೆಯನ್ನು ಕ್ಷಣಾರ್ಧದಲ್ಲಿ ಖಾಲಿ ಮಾಡಬಹುದು. ಇದಕ್ಕೊಂದು ತಾಜಾ ಉದಾಹರಣೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ವಾಟ್ಸಾಪ್‌ನಲ್ಲಿ ಬಂದ ಡಿಜಿಟಲ್ ಮದುವೆ ಆಮಂತ್ರಣ ಪತ್ರಿಕೆಯ ಫೈಲ್ ಓಪನ್ ಮಾಡಿದ 42 ವರ್ಷದ ಉದ್ಯಮಿಯೊಬ್ಬರು ಬರೋಬ್ಬರಿ 5 ಲಕ್ಷ ರೂ. ಕಳೆದುಕೊಂಡಿರುವ ಘಟನೆ ನಡೆದಿದೆ.

ಬೆಂಗಳೂರು ಮೂಲದ ಉದ್ಯಮಿ ನೂರ್ ನಹಿದ್ ಖಾನ್ ಎಂಬುವವರೇ ಈ ಸೈಬರ್ ವಂಚನೆಗೊಳಗಾದವರು. ಖಾನ್ ಅವರ ವಾಟ್ಸಾಪ್‌ಗೆ ಅಪರಿಚಿತ ನಂಬರ್‌ನಿಂದ ಸಂದೇಶವೊಂದು ಬಂದಿತ್ತು. ಆ ಮೆಸೇಜ್‌ನಲ್ಲಿ, "ನಮ್ಮ ಮದುವೆಗೆ ನಿಮ್ಮನ್ನು ಆಹ್ವಾನಿಸಲು ನಮಗೆ ಸಂತೋಷವಾಗಿದೆ. ಸಮಾರಂಭದ ಸಂಪೂರ್ಣ ವಿವರಗಳಿಗಾಗಿ ಕೆಳಗಿರುವ ಈ ಮದುವೆ ಆಮಂತ್ರಣ ಪತ್ರಿಕೆಯನ್ನು ದಯವಿಟ್ಟು ಡೌನ್‌ಲೋಡ್ ಮಾಡಿ. ನಿಮ್ಮ ಉಪಸ್ಥಿತಿ ಮತ್ತು ಆಶೀರ್ವಾದಗಳು ನಮ್ಮ ವಿಶೇಷ ದಿನವನ್ನು ನಿಜಕ್ಕೂ ಸ್ಮರಣೀಯವಾಗಿಸುತ್ತದೆ," ಎಂದು ಬರೆಯಲಾಗಿತ್ತು. ಜೊತೆಗೆ ಹೂಗುಚ್ಛ, ಹಾರ್ಟ್ ಎಮೋಜಿಗಳನ್ನೂ ಹಾಕಲಾಗಿತ್ತು. ಈ ಮೆಸೇಜ್‌ನ ಕೆಳಗಡೆ ಒಂದು ಎಪಿಕೆ (APK) ಫೈಲ್ ಕಳುಹಿಸಲಾಗಿತ್ತು. ಇದು ಮದುವೆ ಕಾರ್ಡ್ ಇರಬಹುದು ಎಂದು ನಂಬಿದ ಖಾನ್, ಆ ಫೈಲ್ ಡೌನ್‌ಲೋಡ್ ಮಾಡಿದ್ದಾರೆ.

Bengaluru

ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಖದೀಮರು

ಖಾನ್ ಅವರು ಎಪಿಕೆ ಫೈಲ್ ಅನ್ನು ಡೌನ್‌ಲೋಡ್ ಮಾಡಿದ ತಕ್ಷಣ, ಅವರ ಅರಿವಿಲ್ಲದೆ ವಂಚಕರಿಗೆ ಮೊಬೈಲ್‌ನ ಆಕ್ಸೆಸ್ (Device access) ಹೋಗಿದೆ. ಏಪ್ರಿಲ್ 16 ರಂದು ಮುಂಜಾನೆ 4:45 ರಿಂದ 4:54 ರ ನಡುವೆ, ಖಾನ್ ಅವರ ಬ್ಯಾಂಕ್ ಖಾತೆಯಿಂದ ಅನೇಕ ಯುಪಿಐ ವಹಿವಾಟುಗಳ ಮೂಲಕ ಬರೋಬ್ಬರಿ 5,00,440 ರೂ. ಹಣವನ್ನು ದೋಚಲಾಗಿದೆ.

ಪೊಲೀಸರ ಪ್ರಕಾರ, ಈ ಎಪಿಕೆ ಫೈಲ್ ಮೂಲಕ ಗೂಗಲ್ ಪ್ಲೇ ಸ್ಟೋರ್ (Google Play Store) ಹೊರತಾದ ನಕಲಿ ಮೊಬೈಲ್ ಅಪ್ಲಿಕೇಶನ್ ಅನ್ನು ರಹಸ್ಯವಾಗಿ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಲಾಗಿದೆ. ಇದರ ಮೂಲಕ ಕ್ಯಾಮೆರಾ, ಗೂಗಲ್ ಪೇ (Google Pay), ಬ್ಯಾಂಕಿಂಗ್ ಆ್ಯಪ್‌ಗಳು ಹಾಗೂ ಮೊಬೈಲ್‌ನಲ್ಲಿರುವ ಗೌಪ್ಯ ಮಾಹಿತಿಯನ್ನು ವಂಚಕರು ಕದ್ದಿದ್ದಾರೆ. ಖಾನ್ ಅವರ ದೂರಿನ ಆಧಾರದ ಮೇಲೆ, ಪೊಲೀಸರು ಐಟಿ ಕಾಯ್ದೆ 2000ರ ಸೆಕ್ಷನ್ 66 (ಸಿ) ಮತ್ತು 66 (ಡಿ) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) 2023ರ ಅಡಿಯಲ್ಲಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಜಾಲ ನಗರದಾದ್ಯಂತ ಮತ್ತಷ್ಟು ಜನರಿಗೆ ಇದೇ ರೀತಿ ವಂಚಿಸಿರುವ ಶಂಕೆ ಇದ್ದು, ತನಿಖೆ ಮುಂದುವರಿದಿದೆ.

ಎಪಿಕೆ ಫೈಲ್‌ಗಳ ಬಗ್ಗೆ ಎಚ್ಚರಿಕೆ ಇರಲಿ

ಆಂಡ್ರಾಯ್ಡ್ ಮೊಬೈಲ್‌ಗಳಲ್ಲಿ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಲು APK (Android Package Kit) ಫೈಲ್‌ಗಳನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಮದುವೆ ಆಮಂತ್ರಣ ಪತ್ರಿಕೆಗಳನ್ನು ಕೇವಲ ಚಿತ್ರಗಳ ರೂಪದಲ್ಲಿ (JPEG ಅಥವಾ PNG), ವೀಡಿಯೊಗಳ (MP4) ಅಥವಾ ಡಾಕ್ಯುಮೆಂಟ್‌ಗಳ (PDF) ರೂಪದಲ್ಲಿ ಮಾತ್ರ ಹಂಚಿಕೊಳ್ಳಲಾಗುತ್ತದೆ. ಯಾವುದೇ ಕಾರಣಕ್ಕೂ ಮದುವೆ ಕಾರ್ಡ್‌ಗಳು ಎಪಿಕೆ ಫೈಲ್ ರೂಪದಲ್ಲಿ ಇರುವುದಿಲ್ಲ ಎನ್ನುವುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕಿದೆ.

ಈ ಕುರಿತು ಕಾಯಿನ್‌ಡಿಸಿಎಕ್ಸ್ (CoinDCX) ಸಂಸ್ಥಾಪಕ ಸುಮಿತ್ ಗುಪ್ತಾ ಅವರು ಎಕ್ಸ್ ಖಾತೆಯಲ್ಲಿ ಎಚ್ಚರಿಕೆ ನೀಡಿದ್ದು, "ಜನರು JPEG ಮತ್ತು APK ಫೈಲ್‌ಗಳ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕು. ಅಪರಿಚಿತ ಸಂಖ್ಯೆಗಳಿಂದ ವಾಟ್ಸಾಪ್ ಮೂಲಕ ಕಳುಹಿಸಲಾದ ಯಾವುದೇ .apk ಫೈಲ್‌ಗಳನ್ನು ಅದು ಮದುವೆ ಕಾರ್ಡ್‌ನಂತೆ ಕಂಡರೂ ಡೌನ್‌ಲೋಡ್ ಮಾಡಬೇಡಿ. ಇದು ಡಿಜಿಟಲ್ ಸಾಕ್ಷರತೆಯ ಕೊರತೆಯಾಗಿದ್ದು, ವಂಚಕರು ಇದರ ಲಾಭ ಪಡೆಯುತ್ತಿದ್ದಾರೆ. ಈ ಬಗ್ಗೆ ನಿಮ್ಮವರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ," ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+