Bengaluru: Zomatoದಲ್ಲಿ ಪಾವ್ ಭಾಜಿ ಆರ್ಡರ್ ಮಾಡಿದ ಟೆಕ್ಕಿಗೆ ಕಾದಿತ್ತು ಶಾಕ್: ಈರುಳ್ಳಿ ಜೊತೆ ಬಂತು ಸೇದಿದ ಬೀಡಿ!
ಬೆಂಗಳೂರಿನಲ್ಲಿ ಆನ್‌ಲೈನ್ ಫುಡ್ ಡೆಲಿವರಿ ಆ್ಯಪ್‌ಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಮಯದ ಅಭಾವದಿಂದಾಗಿ ಬಹುತೇಕ ಜನರು ಹೋಟೆಲ್‌ಗೆ ಹೋಗುವ ಬದಲು ಸ್ವಿಗ್ಗಿ, ಜೊಮಾಟೊ ಮೊರೆ ಹೋಗುತ್ತಾರೆ. ಆದರೆ, ಕೆಲವೊಮ್ಮೆ ನಾವು ಆರ್ಡರ್ ಮಾಡುವ ಆಹಾರದಲ್ಲಿ ಸಿಗುವ ವಸ್ತುಗಳು ನಮ್ಮನ್ನ ಬೆಚ್ಚಿಬೀಳಿಸುತ್ತವೆ.
ಇದೀಗ ಬೆಂಗಳೂರು ಯುವಕನೊಬ್ಬನಿಗೆ ಇಂತಹದ್ದೇ ಒಂದು ಕಹಿ ಅನುಭವ ಆಗಿದೆ. ತಾನು ಇಷ್ಟಪಟ್ಟು ಆರ್ಡರ್ ಮಾಡಿದ್ದ ಪಾವ್ ಭಾಜಿ ಜೊತೆ ನೀಡುವ ಕತ್ತರಿಸಿದ ಈರುಳ್ಳಿಯಲ್ಲಿ ಸೇದಿ ಬಿಸಾಡಿದ ಬೀಡಿಯೊಂದು ಪತ್ತೆಯಾಗಿದ್ದು, ಗ್ರಾಹಕನಿಗೆ ತೀವ್ರ ಆಘಾತ ಉಂಟುಮಾಡಿದೆ. ಈ ಘಟನೆ ಜೊಮಾಟೊ ಆಹಾರ ವಿತರಣೆಯ ನೈರ್ಮಲ್ಯದ ಬಗ್ಗೆ ದೊಡ್ಡ ಪ್ರಶ್ನೆ ಹುಟ್ಟುಹಾಕಿದೆ.

ಈರುಳ್ಳಿ ಜೊತೆ ಬಂತು ಬೀಡಿ!
ಬೆಂಗಳೂರಿನ ಪ್ರಿಯಮ್ ತಹಬಿಲ್ದಾರ್ ಎಂಬುವವರು ತಮ್ಮ ಲಿಂಕ್ಡ್‌ಇನ್ ಖಾತೆಯಲ್ಲಿ ಈ ಘಟನೆಯ ಬಗ್ಗೆ ಎಳೆಎಳೆಯಾಗಿ ಬರೆದುಕೊಂಡಿದ್ದಾರೆ. ಅವರು ಇತ್ತೀಚೆಗೆ ಪ್ರಸಿದ್ಧ ಫುಡ್ ಡೆಲಿವರಿ ಆ್ಯಪ್ ಜೊಮಾಟೊ ಮೂಲಕ ಪಾವ್ ಭಾಜಿಯನ್ನ ಆರ್ಡರ್ ಮಾಡಿದ್ದರು. ಡೆಲಿವರಿ ಬಾಯ್ ತಂದುಕೊಟ್ಟ ಪಾರ್ಸೆಲ್ ತೆಗೆದು ನೋಡಿದಾಗ ಅವರಿಗೆ ಒಂದು ಕ್ಷಣ ಏನು ಮಾಡಬೇಕೆಂದೇ ತೋಚಲಿಲ್ಲ.
ಪಾವ್ ಭಾಜಿ ಜೊತೆಗೆ ನೀಡಲಾಗಿದ್ದ ಕತ್ತರಿಸಿದ ಈರುಳ್ಳಿ ಮತ್ತು ಚಟ್ನಿಯ ಮಧ್ಯದಲ್ಲಿ ಸಂಪೂರ್ಣವಾಗಿ ಸೇದಿ ಮುಗಿಸಿದ್ದ ಬೀಡಿಯ ತುಂಡು ಇತ್ತು. ಈ ಬಗ್ಗೆ ಬರೆದುಕೊಂಡಿರುವ ಪ್ರಿಯಮ್, "ಜೊಮಾಟೊದಿಂದ ಪಾವ್ ಭಾಜಿ ಆರ್ಡರ್ ಮಾಡಿದ್ದೆ, ಉಚಿತವಾಗಿ ಒಂದು ಬೀಡಿ ಸಿಕ್ಕಿದೆ. ಆದರೆ ಅದು ಸಂಪೂರ್ಣವಾಗಿ ಸೇದಿದ ಬೀಡಿಯಾಗಿತ್ತು. ನಿಜವಾಗಿಯೂ ಹೇಳಬೇಕೆಂದರೆ, ಇಂತಹ ಉಚಿತ ಉಡುಗೊರೆಯನ್ನ ನಾನು ಖಂಡಿತಾ ಬಯಸಿರಲಿಲ್ಲ" ಎಂದು ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಆ ಬೀಡಿಯಿರುವ ಫೋಟೋವನ್ನ ಕೂಡ ಹಂಚಿಕೊಂಡಿದ್ದಾರೆ.
ಜೊಮಾಟೊ ಗ್ರಾಹಕ ಸೇವೆಯ ಪ್ರತಿಕ್ರಿಯೆ
ಗ್ರಾಹಕ ಪ್ರಿಯಮ್ ತಹಬಿಲ್ದಾರ್ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಜೊಮಾಟೊ ಸಂಸ್ಥೆ ಎಚ್ಚೆತ್ತುಕೊಂಡಿದೆ. ತಕ್ಷಣವೇ ಪ್ರತಿಕ್ರಿಯೆ ನೀಡಿದ ಜೊಮಾಟೊ ಗ್ರಾಹಕ ಸೇವಾ ತಂಡ, "ಹಾಯ್ ಪ್ರಿಯಮ್, ದಯವಿಟ್ಟು ನಿಮ್ಮ ಆರ್ಡರ್ ಐಡಿಯನ್ನ ನಮಗೆ ಖಾಸಗಿಯಾಗಿ ಸಂದೇಶ ಕಳುಹಿಸಿ. ನಾವು ಈ ಬಗ್ಗೆ ತಕ್ಷಣ ತನಿಖೆ ನಡೆಸುತ್ತೇವೆ" ಎಂದು ಕಮೆಂಟ್ ಮಾಡಿದೆ.
ಆದರೆ, ಈ ತನಿಖೆಯ ನಂತರ ಜೊಮಾಟೊ ನೀಡಿದ ಪರಿಹಾರ ಎಲ್ಲರಿಗೂ ಆಶ್ಚರ್ಯ ತರಿಸಿದೆ. ಪ್ರಿಯಮ್ ಅವರು ಮತ್ತೊಂದು ಅಪ್‌ಡೇಟ್ ಹಂಚಿಕೊಂಡಿದ್ದು, "ಜೊಮಾಟೊ ನನ್ನ ಮುಂದಿನ ಆರ್ಡರ್‌ಗಾಗಿ 100 ರೂಪಾಯಿಯ ಕೂಪನ್ ಆಫರ್ ಮಾಡಿದೆ" ಎಂದು ತಿಳಿಸಿದ್ದಾರೆ. ಇಷ್ಟು ದೊಡ್ಡ ನೈರ್ಮಲ್ಯದ ಲೋಪದೋಷ ನಡೆದಿದ್ದರೂ, ಸಂಸ್ಥೆಯು ಕೇವಲ 100 ರೂಪಾಯಿ ಕೂಪನ್ ನೀಡಿ ಕೈತೊಳೆದುಕೊಂಡಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ಆಹಾರದಲ್ಲಿ ಸಿಕ್ಕ ಈ ಸೇದಿದ ಬೀಡಿ ಗ್ರಾಹಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಹೋಟೆಲ್ ಸಿಬ್ಬಂದಿ ಆಹಾರವನ್ನ ಪ್ಯಾಕ್ ಮಾಡುವಾಗ ಎಷ್ಟರ ಮಟ್ಟಿಗೆ ನಿರ್ಲಕ್ಷ್ಯ ವಹಿಸುತ್ತಾರೆ ಎಂಬುದಕ್ಕೆ ಇದು ಉದಾಹರಣೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹಲವರು, ಇದು ಜೊಮಾಟೊ ತಪ್ಪು ಎನ್ನುವುದಕ್ಕಿಂತ ಆಹಾರ ಸಿದ್ಧಪಡಿಸಿದ ಮತ್ತು ಪ್ಯಾಕ್ ಮಾಡಿದ ಹೋಟೆಲ್‌ನ ತಪ್ಪು ಎಂದು ವಾದಿಸಿದ್ದಾರೆ. ಜೊಮಾಟೊ ಕೇವಲ ಡೆಲಿವರಿ ಪಾರ್ಟ್ನರ್ ಆಗಿದ್ದರೂ, ಆ್ಯಪ್ ಮೂಲಕ ನಡೆಯುವ ಇಂತಹ ಯಡವಟ್ಟುಗಳು ನೇರವಾಗಿ ಪ್ಲಾಟ್‌ಫಾರ್ಮ್‌ನ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತವೆ.
ಪ್ಯಾಕ್ ಮಾಡುವಾಗ ಹೋಟೆಲ್ ಸಿಬ್ಬಂದಿ ಬೀಡಿ ಸೇದುತ್ತಿರಬಹುದು, ಆಗ ಆಕಸ್ಮಿಕವಾಗಿ ಬೀಡಿ ಈರುಳ್ಳಿಯ ಜೊತೆ ಬಿದ್ದಿರಬಹುದು ಎಂದು ಕೆಲವರು ಊಹಿಸಿದ್ದಾರೆ. ಏನೇ ಆಗಿದ್ದರೂ, ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ.
ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಪ್ರತಿಕ್ರಿಯೆ
ಈ ವಿಚಿತ್ರ ಘಟನೆಯನ್ನು ಕಂಡು ಸೋಶೀಯಲ್ ಮಿಡಿಯಾ ಬಳಕೆದಾರರು ಪ್ರತಿಕ್ರಿಯೆಗಳನ್ನ ನೀಡುತ್ತಿದ್ದಾರೆ. ಕೆಲವರು ಇದನ್ನೊಂದು ತಮಾಷೆಯಾಗಿ ತೆಗೆದುಕೊಂಡರೆ, ಇನ್ನು ಕೆಲವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು "ಹೋಟೆಲ್‌ನವರಿಗೆ ನಿಮ್ಮ ಹವ್ಯಾಸಗಳ ಬಗ್ಗೆ ಮೊದಲೇ ತಿಳಿದಿತ್ತು ಅನ್ನಿಸುತ್ತೆ" ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು "ಆಹಾರಕ್ಕೆ ಎಕ್ಸ್‌ಟ್ರಾ ಸ್ಮೋಕ್ ಫ್ಲೇವರ್ ಆಡ್ ಮಾಡಿದ್ದಾರೆ ಬಿಡಿ" ಎಂದು ಲೇವಡಿ ಮಾಡಿದ್ದಾರೆ. "ಇದು ಜೊಮಾಟೊದ ಸೀಸನಲ್ ಆಫರ್! ನಿಮಗೆ ಅದೃಷ್ಟ ಒಲಿದಿದೆ" ಎಂದು ಇನ್ನೊಬ್ಬರು ಕಾಲೆಳೆದಿದ್ದಾರೆ.
ಆದರೆ, ಹಲವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, "ಇದೇ ಕಾರಣಕ್ಕೆ ನಾವು ಮನೆಯಲ್ಲೇ ಮಾಡಿಕೊಂಡು ಊಟ ಮಾಡಬೇಕು. ಆಗ ಮಾತ್ರ ನೆಮ್ಮದಿಯಾಗಿರಬಹುದು" ಎಂದು ಸಲಹೆ ನೀಡಿದ್ದಾರೆ. ಮೊದಲು ಇದನ್ನು ಕಸ್ಟಮೈಸ್ಡ್ ನೋಟ್ ಎಂದು ಭಾವಿಸಿದ್ದ ವ್ಯಕ್ತಿಯೊಬ್ಬರು, ನಂತರ ಅದು ಬೀಡಿ ಎಂದು ತಿಳಿದು ದಂಗಾಗಿದ್ದಾರೆ.
ಒಟ್ಟಿನಲ್ಲಿ ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡುವಾಗ ಗ್ರಾಹಕರು, ಹೋಟೆಲ್ ಮಾಲೀಕರು ಮತ್ತು ಡೆಲಿವರಿ ಸಂಸ್ಥೆಗಳು ಎಲ್ಲರೂ ಎಚ್ಚರದಿಂದ ಇರಬೇಕಾದ ಅಗತ್ಯವನ್ನ ಈ ಘಟನೆ ಎತ್ತಿತೋರಿಸಿದೆ.


Click it and Unblock the Notifications
