Bengaluru: ಬಾಡಿಗೆಗಿದ್ದ ವಿದ್ಯಾರ್ಥಿನಿಗೆ ಮಾಲೀಕನಿಂದ ಲೈಂಗಿಕ ಕಿರುಕುಳ; 60 ವರ್ಷದ ಕಾಮುಕ ಬಂಧನ
ಬೆಂಗಳೂರು: ಸಾವಿರಾರು ಯುವತಿಯರು ಅದೆಷ್ಟೋ ಕನಸುಗಳನ್ನಾ ಹೊತ್ತುಕೊಂಡು ವಿದ್ಯಾಭ್ಯಾಸಕ್ಕಾಗಿ, ಉದ್ಯೋಗಕ್ಕಾಗಿಯೋ ತನ್ನ ಊರನ್ನ ಬಿಟ್ಟು ಬೆಂಗಳೂರಿಗೆ ಬಂದು ಬಾಡಿಗೆ ಮನೆ ಅಥವಾ ಪಿಜಿಗಳಲ್ಲಿ ವಾಸವಿರುತ್ತಾರೆ. ಆದರೆ ಇಂತಹ ಕಡೆ ವಾಸವಿರುವುದು ಒಂಟಿ ಯುವತಿಯರಿಗೆ ಎಷ್ಟು ಸುರಕ್ಷತೆ? ಎಂಬುದರ ಬಗ್ಗೆ ಮತ್ತೊಮ್ಮೆ ಆತಂಕ ಮೂಡಿಸುವಂತಹ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.
ಶಾಂತಿನಗರದ ಬರ್ಲಿ ಸ್ಟ್ರೀಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆಗಿದ್ದ 20 ವರ್ಷದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ 60 ವರ್ಷದ ಮನೆ ಮಾಲೀಕನನ್ನ ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನ ಕಮಲೇಶ್ ಕುಮಾರ್ ಎಂದು ಗುರುತಿಸಲಾಗಿದೆ.

ಘಟನೆಯ ಹಿನ್ನೆಲೆ
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಯುವತಿ ಖಾಸಗಿ ಕಾಲೇಜೊಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ಕಳೆದ ಎರಡೂವರೆ ತಿಂಗಳಿನಿಂದ ಶಾಂತಿನಗರದ ಬರ್ಲಿ ಸ್ಟ್ರೀಟ್‌ನಲ್ಲಿರುವ ಕಮಲೇಶ್ ಕುಮಾರ್ ಮಾಲೀಕತ್ವದ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆಗೆ ವಾಸವಿದ್ದಳು. ಶನಿವಾರ ಸಂಜೆ ಸುಮಾರು 6:25ರ ಹೊತ್ತಿಗೆ ಯುವತಿ ಮನೆಯಲ್ಲಿ ಒಬ್ಬಳೆಯಿದ್ದಳು. ಆ ಸಮಯವನ್ನ ನೋಡಿ ಮನೆ ಮಾಲೀಕ, ಮನೆಯಲ್ಲಿದ್ದ ಸಣ್ಣಪುಟ್ಟ ರಿಪೇರಿ ಕೆಲಸಗಳನ್ನ ಮಾಡುವ ನೆಪದಲ್ಲಿ ಒಳಪ್ರವೇಶಿಸಿದ್ದಾನೆ.
ಆರಂಭದಲ್ಲಿ ಯುವತಿಯ ಕಾಲೇಜು ಮತ್ತು ವಿದ್ಯಾಭ್ಯಾಸದ ಬಗ್ಗೆ ಸಹಜವಾಗಿ ಮಾತುಕತೆ ಆರಂಭಿಸಿದ್ದಾನೆ. ಕೆಲ ಹೊತ್ತಿನ ಬಳಿಕ ಯುವತಿಯ ಕೈಯಲ್ಲಿದ್ದ ಮೆಹಂದಿ ಚೆನ್ನಾಗಿದೆ ಎಂದು ಹೇಳುತ್ತಾ, ಅದನ್ನ ಹತ್ತಿರದಿಂದ ನೋಡುವ ನೆಪದಲ್ಲಿ ಆಕೆಯ ಕೈ ಹಿಡಿದಿದ್ದಾನೆ. ಯುವತಿ ತನ್ನ ಕೈಯನ್ನ ಬಿಡಿಸಿಕೊಳ್ಳಲು ಪ್ರಯತ್ನಿಸಿದರೂ ಬಿಡದ ಆತ, ಬಲವಂತವಾಗಿ ತನ್ನತ್ತ ಎಳೆದುಕೊಂಡು ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ.
ವೃದ್ಧನ ಈ ಅನಿರೀಕ್ಷಿತ ವರ್ತನೆಯಿಂದ ಗಾಬರಿಗೊಂಡ ಯುವತಿ, ಆತನಿಂದ ಬಿಡಿಸಿಕೊಳ್ಳಲು ಒದ್ದಾಡಿದ್ದಾಳೆ. ಆದರೂ ಆಕೆಯ ವಿರೋಧವನ್ನ ಲೆಕ್ಕಿಸದ ಕಮಲೇಶ್ ಕುಮಾರ್, ಲೈಂಗಿಕ ದೌರ್ಜನ್ಯ ಮುಂದುವರಿಸಿದ್ದಾನೆ. ಅಲ್ಲದೆ, "ನೀನು ಯಾವುದಕ್ಕೂ ಭಯಪಡುವ ಅಗತ್ಯವಿಲ್ಲ, ನಾನಿದ್ದೇನೆ" ಎಂದು ಹೇಳುತ್ತಾ, ಮುಂದೆಯೂ ಇದೇ ರೀತಿ ಭೇಟಿಯಾಗುವಂತೆ ಒತ್ತಾಯಿಸಿ ಅಸಭ್ಯವಾಗಿ ಮಾತನಾಡಿದ್ದಾನೆ ಎಂದು ವಿದ್ಯಾರ್ಥಿನಿ ತನ್ನ ದೂರಿನಲ್ಲಿ ವಿವರಿಸಿದ್ದಾಳೆ. ಈ ಘಟನೆಯಿಂದ ಯುವತಿಯು ತೀವ್ರವಾಗಿ ಆಘಾತಕ್ಕೊಳಗಾಗಿದ್ದಳು.
ವೃದ್ಧನ ಬಂಧಿಸಿದ ಅಶೋಕನಗರ ಪೊಲೀಸರು
ಘಟನೆಯ ಬಳಿಕ ಹೇಗೋ ಆತನಿಂದ ತಪ್ಪಿಸಿಕೊಂಡ ಯುವತಿ, ತಕ್ಷಣವೇ ಅಶೋಕನಗರ ಪೊಲೀಸ್ ಠಾಣೆಗೆ ತೆರಳಿ ನಡೆದ ಘಟನೆಯ ಬಗ್ಗೆ ಲಿಖಿತ ದೂರು ದಾಖಲಿಸಿದ್ದಾಳೆ. ಯುವತಿ ನೀಡಿದ ದೂರಿನ ಆದಾರದ ಮೇಲೆ ಪೊಲೀಸರು ತ್ವರಿತವಾಗಿ ಕಾರ್ಯಪ್ರವೃತ್ತರಾಗಿದ್ದಾರೆ.
ಹೊಸದಾಗಿ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆ (BNS 2023) ಕಾಯ್ದೆಯನ್ವಯ ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಮಹಿಳೆಯ ಮೇಲಿನ ದೌರ್ಜನ್ಯ ಮತ್ತು ಆಕೆಯ ಘನತೆಗೆ ಚ್ಯುತಿ ತರುವ ಉದ್ದೇಶದಿಂದ ಹಲ್ಲೆ ನಡೆಸಿದ ಆರೋಪದಡಿ ಸೆಕ್ಷನ್ 74 ಹಾಗೂ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಸೆಕ್ಷನ್ 75(2) ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ಆರೋಪಿ ಕಮಲೇಶ್ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ವಿದ್ಯಾಭ್ಯಾಸ ಹಾಗೂ ಉದ್ಯೋಗ ಅರಸಿ ಬೆಂಗಳೂರಿಗೆ ಬರುವ ಯುವತಿಯರು ಪಿಜಿ ಹಾಗೂ ಬಾಡಿಗೆ ಮನೆಗಳಲ್ಲಿ ವಾಸಿಸುವುದು ಸಾಮಾನ್ಯ. ಆದರೆ, ರಕ್ಷಣೆ ನೀಡಬೇಕಾದ ಮನೆ ಮಾಲೀಕರೇ ಇಂತಹ ವಿಕೃತಿ ಮೆರೆಯುತ್ತಿರುವುದು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಒಂಟಿ ಮಹಿಳೆಯರು ವಾಸಿಸುವ ಕಟ್ಟಡಗಳಲ್ಲಿ ಸಿಸಿಟಿವಿ ಅಳವಡಿಕೆ ಹಾಗೂ ಮಾಲೀಕರ ಹಿನ್ನೆಲೆ ಪರಿಶೀಲನೆಯಂತಹ ಭದ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯತೆಯನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.


Click it and Unblock the Notifications
