E-Khata Campaign: ಇ-ಖಾತಾ ಸೇವೆಯ ಅಭಿಯಾನಕ್ಕೆ ಭರ್ಜರಿ ಸ್ಪಂದನೆ, ಮೊದಲ ದಿನ 1,242 ಅರ್ಜಿ ವಿಲೇವಾರಿ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ 100 ದಿನಗಳ ರಾಜ್ಯ ಸರ್ಕಾರದ 6ನೇ ಗ್ಯಾರಂಟಿ 'ಭೂ ಗ್ಯಾರಂಟಿ' ಯೋಜನೆಯಡಿ ಆರಂಭಿಸಿರುವ 'ನನ್ನ ಇ-ಖಾತಾ ನನ್ನ ಹಕ್ಕು' ಅಭಿಯಾನಕ್ಕೆ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ. ಎ-ಖಾತಾ ಮತ್ತು ಬಿ-ಖಾತಾ ಸೇರಿ ಆಸ್ತಿ ದಾಖಲೆಗಳ ಸೇವೆ ಪ್ರತಿ ಶನಿವಾರ ಬೆಂಗಳೂರು ನಾಗರಿಕರಿಗೆ ಒದಗಿಸಲಾಗುತ್ತಿದೆ.
"ನನ್ನ ಇ-ಖಾತಾ, ನನ್ನ ಹಕ್ಕು" ಅಭಿಯಾನದಿಂದ ಬೆಂಗಳೂರಿನ ಸಾರ್ವಜನಿಕರು ಒಂದೇ ಒಂದು ರೂಪಾಯಿ ಲಂಚ ನೀಡದೆ ತಮ್ಮ ಆಸ್ತಿಗಳನ್ನು 'ಬಿ' ಖಾತೆಯಿಂದ 'ಎ' ಖಾತೆಗೆ ಪರಿವರ್ತನೆ ಹಾಗೂ ಮನೆ ಬಾಗಿಲಲ್ಲೇ ಇ-ಖಾತೆ ಪಡೆಯಬಹುದು. ಏಳು ಲಕ್ಷ ಜನರಿಗೆ ಇದರಿಂದ ಉಪಯೋಗವಾಗಲಿದೆ. ಬೆಂಗಳೂರು ನಿವಾಸಿಗಳು, ಅರ್ಜಿದಾರರು ಈ ಅಭಿಯಾನದಿಂದ ಸಂತೋಷಪಟ್ಟಿದ್ದಾರೆ ಎಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

2,900 ಅರ್ಜಿ ಸ್ವೀಕಾರ, ವಿಲೇವಾರಿ ಆಗಿದ್ದೆಷ್ಟು?
ಮೊದಲ ದಿನವೇ ಜಿಬಿಎ ಅಡಿ ಐದು ಪಾಲಿಕೆಗಳ ವ್ಯಾಪ್ತಿಯ ನಾಗರಿಕರು ಉತ್ತಮವಾಗಿ ಸ್ಪಂದಿಸಿದ್ದಾರೆ. ಆಸ್ತಿ ದಾಖಲೆಗಳಿಗೆ ಸಂಬಂಧಿಸಿದಂತೆ ಒಟ್ಟು 2,939 ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇದರಲ್ಲಿ ಇ-ಖಾತಾ, ಮ್ಯುಟೆಷನ್, ಹೊಸ ಇ-ಖಾತಾ, ಬಿ ಟು ಎ ಖಾತಾ ಹಾಗೂ ದೂರುಗಳ ಅರ್ಜಿಗಳು ಸೇರಿದಂತೆ ಒಟ್ಟಾರೆ 2,939 ಅರ್ಜಿಗಳನ್ನು ಆಯಾ ಪಾಲಿಕೆ ಸಿಬ್ಬಂದಿ ಸ್ವೀಕರಿಸಿದ್ದಾರೆ. ಈ ಪೈಕಿ ಸ್ಥಳದಲ್ಲೇ 1,242 ಅರ್ಜಿಗಳ ವಿಲೇವಾರಿ ಮಾಡಲಾಗಿದೆ.
ಸಲ್ಲಿಕೆ, ವಿಲೇವಾರಿ ವಿವಿಧ ಅರ್ಜಿಗಳ ವಿವರ ಹೀಗಿದೆ
* ಇ-ಖಾತಾ ಅರ್ಜಿಗಳು
ಒಟ್ಟು: 1,080
ವಿಲೇವಾರಿ: 568
ಬಾಕಿ: 512
* ಮ್ಯುಟೆಷನ್ ಅರ್ಜಿಗಳು
ಒಟ್ಟು: 139
ವಿಲೇವಾರಿ: 64
ಬಾಕಿ: 75
* ಹೊಸ ಖಾತಾ ಅರ್ಜಿಗಳು
ಒಟ್ಟು: 236
ವಿಲೇವಾರಿ: 90
ಬಾಕಿ: 146
* ಬಿ-ಖಾತಾದಿಂದ ಎ-ಖಾತಾ ಅರ್ಜಿಗಳು
ಒಟ್ಟು: 425
ವಿಲೇವಾರಿ: 120
ಬಾಕಿ: 305
* ದೂರುಗಳ ಅರ್ಜಿಗಳು
ಒಟ್ಟು: 1,059
ವಿಲೇವಾರಿ: 400
ಬಾಕಿ: 659
ಇನ್ನೂ ಪ್ರತಿ ಶನಿವಾರ ಈ "ನನ್ನ ಇ-ಖಾತಾ, ನನ್ನ ಹಕ್ಕು" ಐದು ಪಾಲಿಕೆಗಳ 52 ಸ್ಥಳಗಳಲ್ಲಿ ನಡೆಯಲಿದೆ. ನಾಗರಿಕರು ಇದರ ಸೇವೆ ಪಡೆಯಬೇಕಿದೆ. ಅಭಿಯಾನ ಪ್ರಯಕ್ತ ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಹೊರಮಾವು ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಶನಿವಾರ ಡಿಕೆ ಶಿವಕುಮಾರ್ ಅವರು ಭೇಟಿ ನೀಡಿ ಪರಿಶೀಲಿಸಿದರು. ನಾಗರಿಕರ ಅಹವಾಲು ಆಲಿಸಿದರು. ಜೊತೆಗೆ ತಪ್ಪದೇ ಇ-ಖಾತಾ ಪಡೆಯಲು, ಖಾತಾ ಬದಲಾವಣೆಗೆ ಹಾಗೂ ಒಟ್ಟಾರೆ ಅಭಿಯಾನದಡಿ ಸೇವೆ ಪಡೆಯುವಂತೆ ಕೋರಿದರು.














Click it and Unblock the Notifications