ಬೆಂಗಳೂರಿನ ಚಾಲಕರು ವರ್ಷಕ್ಕೆ ಎಷ್ಟು ಗಂಟೆ ಟ್ರಾಫಿಕ್‌ನಲ್ಲೇ ಕಳೆಯುತ್ತಾರೆ? ಇಲ್ಲಿದೆ ಅಚ್ಚರಿ ಉತ್ತರ
ಸಿಲಿಕಾನ್ ಸಿಟಿ ಬೆಂಗಳೂರು ಐಟಿ ಹಬ್ ಆಗಿ ಜಾಗತಿಕವಾಗಿ ಗುರುತಿಸಿಕೊಂಡಿರುವ ಜೊತೆಗೆ ಏಷ್ಯಾದಲ್ಲೇ ಅತ್ಯಂತ ಕೆಟ್ಟ ಟ್ರಾಫಿಕ್ ಇರುವ ನಗರಗಳಲ್ಲೂ ಸ್ಥಾನ ಪಡೆದಿದೆ. ಇನ್ನು ಬೆಂಗಳೂರಿನ ಚಾಲಕರು ವಾರ್ಷಿಕವಾಗಿ ಎಷ್ಟು ಗಂಟೆ ಟ್ರಾಫಿಕ್‌ನಲ್ಲೇ ಕಳೆಯುತ್ತಾರೆ ಎನ್ನುವ ಕುತೂಹಲಕಾರಿ ಅಂಶ ಇದೀಗ ಹೊರಬಿದ್ದಿದೆ.
ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್-2023ರ ಪ್ರಕಾರ ಬೆಂಗಳೂರಿನ ಚಾಲಕರು ಕೇವಲ 10 ಕಿಲೋಮೀಟರ್ ಪ್ರಯಾಣಿಸಲು ಸರಾಸರಿ 28 ನಿಮಿಷ, 10 ಸೆಕೆಂಡುಗಳನ್ನು ಕಳೆಯುತ್ತಾರೆ ಎಂದು ವರದಿಯಲ್ಲಿ ತಿಳಿಸಿದೆ. ಅಲ್ಲದೆ ಬೆಂಗಳೂರಿನಲ್ಲಿ ಅದರಲ್ಲೂ ಪೀಕ್ ಅವರ್‌ಗಳಲ್ಲಿ ವಾರ್ಷಿಕವಾಗಿ 132 ಹೆಚ್ಚುವರಿ ಗಂಟೆಗಳನ್ನು ಟ್ರಾಫಿಕ್‌ನಲ್ಲೇ ಕಳೆಯುತ್ತಾರೆ ಎಂಬ ಶಾಕಿಂಗ್ ಅಂಶವನ್ನು ಬಹಿರಂಗಪಡಿಸಿದೆ.

ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್ ಸುಮಾರು 55 ದೇಶಗಳ 387 ನಗರಗಳನ್ನು ಈ ಸಮೀಕ್ಷೆಗೆ ಒಳಪಡಿಸಿತ್ತು. ಜಾಗತಿಕವಾಗಿ ಪ್ರಮುಖ ನಗರಗಳಲ್ಲಿನ ಟ್ರಾಫಿಕ್ ಪರಿಸ್ಥಿತಿಗಳ ವಿಶ್ಲೇಷಣೆಯನ್ನು ಈ ವರದಿಯಲ್ಲಿ ಉಲ್ಲೇಖಿಸಿದೆ. ಪ್ರಯಾಣದ ಸಮಯ ಮಾತ್ರವಲ್ಲದೆ, ಇಂಧನ ವೆಚ್ಚ, ಮತ್ತು ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆ ಮೌಲ್ಯಮಾಪನವನ್ನೂ ಮಾಡಿದೆ. ಇದರಿಂದ ಚಾಲಕರು, ನಗರ ಯೋಜಕರು ಮತ್ತು ಸರ್ಕಾರಗಳಿಗೆ ವಿಶ್ವದಾದ್ಯಂತ ಸಂಚಾರ ದಟ್ಟಣೆಯಿಂದ ಎದುರಾಗುವ ಸವಾಲುಗಳನ್ನು ಪರಿಹರಿಸಲು ಸಹಾಯ ಮಾಡುವ ಗುರಿಯನ್ನು ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್ ಹೊಂದಿದೆ.
ಸದ್ಯ ಬೆಂಗಳೂರು ಅತಿ ವೇಗವಾಗಿ ಅಭಿವೃದ್ಧಿ ಹೊಂದಿರುವ ನಗರವಾಗಿ, ಪ್ರಮುಖ ಟೆಕ್ ಹಬ್ ಆಗಿ ಖ್ಯಾತಿ ಪಡೆದಿದ್ದರೂ ಟ್ರಾಫಿಕ್ ಸಮಸ್ಯೆಗಳಿಂದ ನಿರಂತರವಾಗಿ ಬಳಲುತ್ತಿದೆ. ನಗರದಲ್ಲಿ ಪ್ರತಿದಿನ ಹೆಚ್ಚಾಗುತ್ತಿರುವ ಜನಸಂಖ್ಯೆ ಹಾಗೂ ಇಲ್ಲಿರುವ ಮೂಲಸೌಕರ್ಯಗಳು ಬೆಂಗಳೂರಿನ ಟ್ರಾಫಿಕ್ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಬೆಂಗಳೂರಿನಲ್ಲಿ ಇಡೀ ಏಷ್ಯಾದ ಇತರ ನಗರಗಳಿಗಿಂತ ಪ್ರಯಾಣ ಸಮಯ ನಿಧಾನಗತಿಯಲ್ಲಿದೆ.

ಬೆಂಗಳೂರಿಗೆ ಹೋಲಿಸಿದರೆ, ಪುಣೆ ಕೂಡ ಎರಡನೇ ಸ್ಥಾನದಲ್ಲಿದೆ. ಇಲ್ಲಿಯೂ ಕೇವಲ 10 ಕಿಲೋಮೀಟರ್ ಪ್ರಯಾಣಿಸಲು ಸರಾಸರಿ 27 ನಿಮಿಷಗಳು ಮತ್ತು 50 ಸೆಕೆಂಡುಗಳು ಸಮಯ ಹಿಡಿಯುತ್ತದೆ. ಫಿಲಿಪ್ಪೀನ್ಸ್‌ನ ಮನಿಲಾ ನಗರದಲ್ಲಿ 10 ಕಿಲೋಮೀಟರ್ ಕ್ರಮಿಸಲು 27 ನಿಮಿಷಗಳು 20 ಸೆಕೆಂಡುಗಳು, ತೈವಾನ್‌ನ ತೈಚುಂಗ್ ನಗರದಲ್ಲಿ 10 ಕಿಲೋಮೀಟರ್ ಕ್ರಮಿಸಲು 26 ನಿಮಿಷಗಳು 50 ಸೆಕೆಂಡುಗಳಷ್ಟು ಸಮಯ ಬೇಕು ಎಂದು ಈ ವರದಿ ಹೇಳಿದೆ.
ಆದರೆ ಲಂಡನ್ ಜಾಗತಿಕ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದೆ. ಇಲ್ಲಿ ಪ್ರತಿ 10 ಕಿಲೋಮೀಟರ್‌ಗಳನ್ನು ಕ್ರಮಿಸಲು ಸರಾಸರಿ 37 ನಿಮಿಷಗಳು ಮತ್ತು 20 ಸೆಕೆಂಡುಗಳ ಪ್ರಯಾಣದ ಸಮಯ ವರದಿಯಾಗಿದೆ. ಏಷ್ಯಾದ ಪೈಕಿ ನಮ್ಮ ಬೆಂಗಳೂರು ಮೊದಲ ಸ್ಥಾನದಲ್ಲಿದೆ.
ಇತ್ತ ರಾಜ್ಯ ಸರ್ಕಾರವು ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕಾಗಿ ಬರೋಬ್ಬರಿ 54 ಸಾವಿರ ಕೋಟಿ ರೂಪಾಯಿ ವೆಚ್ಚದ ಪ್ರಮುಖ ಯೋಜನೆಗಳನ್ನು ಸಿದ್ಧಪಡಿಸಿದೆ. ಈ ಹೊಸ ಡಿಪಿಆರ್‌ನಲ್ಲಿ ಬೆಂಗಳೂರಿನ ಹಲವೆಡೆ ಫ್ಲೈಓವರ್‌ಗಳು, ಟನಲ್ ರೋಡ್‌ಗಳು, ಡಬಲ್ ಡೆಕ್ಕರ್ ಸೇರಿದಂತೆ ಇರುವ ರಸ್ತೆಗಳ ಅಭಿವೃದ್ಧಿಗೆ ಕೈಹಾಕುತ್ತಿದೆ. ಮುಂದಿನ ಎರಡು ಮೂರು ದಶಕಗಳನ್ನು ಉದ್ದೇಶದಲ್ಲಿಟ್ಟುಕೊಂಡು ಈ ಯೋಜನೆಗಳನ್ನು ರೂಪಿಸಿರುವುದಾಗಿ ತಿಳಿಸಿದೆ.












Click it and Unblock the Notifications