ಬೆಂಗಳೂರು ನಗರದ ಕಾಮಗಾರಿಗಳ ಬಗ್ಗೆ ಹೊಸ ಅಪ್ಡೇಟ್ಸ್ ಕೊಟ್ಟ ಜಿಬಿಎ ಕಮಿಷನರ್ ಮಹೇಶ್ವರ್ ರಾವ್
ಬೆಂಗಳೂರು: ಬೆಂಗಳೂರು ನಗರದ ಕಾಮಗಾರಿಗಳ ಬಗ್ಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು, ಹೊಸ ಅಪ್ಡೇಟ್ಸ್ ಕೊಟ್ಟಿದ್ದಾರೆ. ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಕಾಲಮಿತಿಯೊಳಗಾಗಿ ಪೂರ್ಣಗೊಳಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಪ್ರಗತಿಯಲ್ಲಿರುವ ಕಾಮಗಾರಿಗಳಲ್ಲಿ ವಿಳಂಬವಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ನಿರ್ದೇಶನ ನೀಡಿದ್ದಾರೆ.

ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಸ್ವಾಧೀನಪಡಿಸಿಕೊಂಡಿರುವ ಜಾಗದಲ್ಲಿ ಕಾಮಗಾರಿಗೆ ಪ್ರಾರಂಭಿಸುವಂತೆ ಸೂಚಿಸಿದರು. ಜೊತೆಗೆ ಅಗತ್ಯವಿರುವ ಕಡೆ ಟಿಡಿಆರ್ ಹಾಗೂ ನಗದು ಪರಿಹಾರದ ಆಯ್ಕೆಗಳ ಮೂಲಕ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಲು ತಿಳಿಸಿದ್ದಾರೆ.
ಎಚ್‌ಎಂಟಿ ಪೈಪ್‌ಲೈನ್ ಕೆಳಸೇತುವೆ: ಎಚ್‌ಎಂಟಿ ಪೈಪ್‌ಲೈನ್ ರಸ್ತೆಯಲ್ಲಿ ಕೆಳಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಶೇ. 50 ರಷ್ಟು ಕೆಲಸ ಪೂರ್ಣಗೊಂಡಿದೆ. ಸುಮಾರು 20 ಗುಂಟೆ ಜಾಗದ ಅವಶ್ಯಕತೆಯಿದ್ದು, ಭೂಸ್ವಾಧಿನ ಪ್ರಕ್ರಿಯೆನ್ನು ಪೂರ್ಣಗೊಳಿಸಿಕೊಂಡು ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ನಿರ್ದೇಶನ ನೀಡಿದರು.
ಗೊರಗುಂಟೆಪಾಳ್ಯ ORR ಜಂಕ್ಷನ್: ಗೊರಗುಂಟೆಪಾಳ್ಯ ORR ಜಂಕ್ಷನ್ ಗೋದ್ರೇಜ್ ಆಸ್ತಿಯ ಸಮೀಪದ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಿ, ಅಗತ್ಯ ಕ್ರಮಗಳನ್ನು ಕೈಗೊಂಡು ಕಾಮಗಾರಿಯನ್ನು ವೇಗಗೊಳಿಸುವಂತೆ ಸೂಚಿಸಿದ್ದಾರೆ.
ಪೈಪ್‌ಲೈನ್ ರಸ್ತೆ ಮೇಲ್ಸೇತುವೆ ಕಾಮಗಾರಿ: ಪೈಪ್‌ಲೈನ್ ರಸ್ತೆಯಲ್ಲಿ 584 ಮೀ. ಉದ್ದದ ಮೇಲ್ಸೇತುವೆ ಕೈಗೆತ್ತಿಕೊಂಡಿದ್ದು, 11 ಪಿಲ್ಲರ್ ಗಳ ಪೈಕಿ 7 ಪಿಲ್ಲರ್ ಗಳ ಕೆಲಸವನ್ನು ಪೂರ್ಣಗೊಳಿಸಿ, ಶೇ. 40 ರಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಸಮನ್ವಯದೊಂದಿಗೆ ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅನ್ನಪೂರ್ಣೇಶ್ವರಿ ನಗರ ಅಂಡರ್‌ಪಾಸ್: ಬಿ.ಡಿ.ಎ. ಕಾಂಪ್ಲೆಕ್ಸ್, ಅನ್ನಪೂರ್ಣೇಶ್ವರಿ ನಗರ ಕೆಳಸೇತುವೆ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿ, ಕಾಮಗಾರಿಯ ವೇಗವನ್ನು ಹೆಚ್ಚಿಸಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು.
ನಗರ ಪಾಲಿಕೆಯ ಆಯುಕ್ತೆಯಾದ ಶಿಲ್ಪಾ ನಾಗ್ ಅವರು ಮಾತನಾಡಿ, ಉಲ್ಲಾಳ ಜಂಕ್ಷನ್ ಸರ್ವೀಸ್ ರಸ್ತೆ ಹಾಗೂ ಒಂದು ಭಾಗದ ಕೆಳಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮತ್ತೊಂದು ಭಾಗದ ಕೆಳಸೇತುವೆ ಕಾರ್ಯವನ್ನು ಕೂಡಲೆ ಪ್ರಾರಂಭಿಸಿ ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.
ಈ ವೇಳೆ ನಗರ ಪಾಲಿಕೆಯ ಮುಖ್ಯ ಎಂಜಿನಿಯರ್ ಸ್ವಯಂ ಪ್ರಭಾ, ಕಾರ್ಯಪಾಲಕ ಎಂಜಿನಿಯರರು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.


Click it and Unblock the Notifications
