ರೀಲ್ಸ್ ತಂದಿಟ್ಟ ಫಜೀತಿ: ಮನೆಯಲ್ಲಿ ಗಾಂಜಾ ಬೆಳೆದು ಸಿಕ್ಕಿಬಿದ್ದ ದಂಪತಿ
ಬೆಂಗಳೂರು, ನವೆಂಬರ್ 09: ಮನೆಯ ಹೂವಿನ ಕುಂಡದಲ್ಲಿ ಗಾಂಜಾ ಗಿಡ ಬೆಳೆದಿದ್ದ ದಂಪತಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ನೇಪಾಳ ಮೂಲದ ಊರ್ಮಿಳಾ ಹಾಗೂ ಗುರುಂಗ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಇತ್ತೀಚಿಗೆ ಊರ್ಮಿಳಾ ಅವರು ತನ್ನ ಮನೆಯ ಬಾಲ್ಕನಿಯಲ್ಲಿ ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದರು. ಆ ರೀಲ್ಸ್‌ನಲ್ಲಿ ಗಾಂಜಾ ಗಿಡ ಕಾಣಿಸಿಕೊಂಡಿತ್ತು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಊರ್ಮಿಳಾ ಹಿಂದಿನ ಗಾಂಜಾ ಗಿಡ ಕಂಡು ಅನುಮಾನಗೊಂಡ ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ರೀಲ್ಸ್ ನೋಡಿ ಹಾಗೂ ಮಹಿಳೆ ಪಕ್ಕದಲ್ಲಿದ್ದ ಗಾಂಜಾ ಗಿಡ ನೋಡಿದ ಸದಾಶಿವನಗರ ಪೊಲೀಸರು ನಂತರ ವಿಳಾಸ ಪತ್ತೆ ಹಚ್ಚಿ ನೇರವಾಗಿ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 15 ವಿವಿಧ ಮಾದರಿಯ ಹೂವಿನ ಗಿಡಗಳ ಮಧ್ಯೆ ಇದ್ದ ಗಾಂಜಾ ಗಿಡ ಪತ್ತೆಯಾಗಿದೆ. ಕೂಡಲೇ ಊರ್ಮಿಳಾ ಹಾಗೂ ಗುರುಂಗ್ ದಂಪತಿಯನ್ನು ಬಂಧಿಸಿದ ಪೊಲೀಸರು, 54 ಗ್ರಾಂ ತೂಕದ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಈ ದಂಪತಿ ಮೇಲೆ ಪ್ರಕರಣ ದಾಖಲಿಸಿ ವಿಚಾರಣೆ ಮುಂದುವರಿಸಿದ್ದಾರೆ.
ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು
ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಮೂವರು ಯುವಕರು ಸಾವನ್ನಪ್ಪಿದ್ದ ಘಟನೆ ರಾಮನಗರ ಜಿಲ್ಲೆಯ ಕನಕಪುರ- ಸಂಗಮ ಮಾರ್ಗದ ಹುಲಿಬೆಲೆ ಗ್ರಾಮದ ಬಳಿ ನಡೆದಿದೆ. ಮೃತರು ಬೆಂಗಳೂರಿನ ಬನಶಂಕರಿ ಮೂಲದ ನಿವಾಸಿಗಳು ಎಂದು ತಿಳಿದು ಬಂದಿದೆ.

ಮೃತ ಯುವಕರು ರಾಮನಗರದ ಸಂಗಮದಿಂದ ಬೆಂಗಳೂರು ಕಡೆ ಹೊರಟಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಕನಕಪುರ ಗ್ರಾಮಾಂತರ ಪೋಲಿಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಯುವಕರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.












Click it and Unblock the Notifications