ಆಫೀಸ್‌ಗೆ ಹೋಗಲು ದಿನಕ್ಕೆ 350 ರೂ. ಖರ್ಚು: ಬೆಂಗಳೂರು ಟ್ರಾಫಿಕ್ ಹಾಗೂ ದುಬಾರಿ ಜೀವನ ವೆಚ್ಚದ ಬಗ್ಗೆ CEO ಆತಂಕ
ಬೆಂಗಳೂರು ಕೇವಲ ಐಟಿ ಹಬ್ ಮಾತ್ರವಲ್ಲ, ಲಕ್ಷಾಂತರ ಯುವಕರ ಪಾಲಿನ ಕನಸಿನ ನಗರಿ ಕೂಡ ಹೌದು. ಪ್ರತಿ ವರ್ಷ ಸಾವಿರಾರು ಯುವಜನರು ಅದೆಷ್ಟೋ ಕನಸು, ಆಸೆ ಹೊತ್ತುಕೊಂಡು ಉದ್ಯೋಗ ಅರಸಿ ಇಲ್ಲಿಗೆ ಬರುತ್ತಾರೆ. ಆದರೆ, ಇಲ್ಲಿನ ದುಬಾರಿ ಜೀವನ ವೆಚ್ಚ ಮತ್ತು ಟ್ರಾಫಿಕ್ ಸಮಸ್ಯೆಗಳು ಈ ಯುವಕರ ಕನಸುಗಳಿಗೆ ತಣ್ಣೀರೆರಚುತ್ತಿವೆಯೇ? ಇಂತಹದೊಂದು ಗಂಭೀರ ಪ್ರಶ್ನೆಯನ್ನು ಬೆಂಗಳೂರಿನ ಸ್ಟಾರ್ಟ್ಅಪ್ ಕಂಪನಿಯೊಂದರ ಸಿಇಒ ಎತ್ತಿದ್ದಾರೆ ನೋಡಿ.
ತಮ್ಮ ಕಂಪನಿಗೆ ಹೊಸದಾಗಿ ಸೇರ್ಪಡೆಯಾಗಿದ್ದ ಉದ್ಯೋಗಿಯೊಬ್ಬ ಆಫೀಸ್‌ಗೆ ಹೋಗಿ ಬರಲು ಪ್ರತಿದಿನ 350 ರೂಪಾಯಿ ಖರ್ಚಾಗುತ್ತಿದೆ ಎಂದು ಹೇಳಿದ ಮಾತು, ಆ ಸಿಇಒ ಅವರಲ್ಲಿ ಆತಂಕ ಮೂಡಿಸಿದೆ. ಕ್ರಿಯೇಟಿವ್ ಕೋಡ್ ಸಂಸ್ಥೆಯ ಸ್ಥಾಪಕ ಹಾಗೂ ಸಿಇಒ ಸಂಕೇತ್ ಶೇತ್ ಅವರು ಲಿಂಕ್ಡ್‌ಇನ್‌ನಲ್ಲಿ ಈ ಕುರಿತು ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದು, ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ದಿನನಿತ್ಯದ ಪ್ರಯಾಣಕ್ಕೆ ಪ್ರತಿದಿನ 350 ರೂಪಾಯಿ ಖರ್ಚು
ಸಂಕೇತ್ ಶೇತ್ ಅವರ ಕಂಪನಿಯ ಆಫೀಸ್ ಎಚ್‌ಎಸ್‌ಆರ್ ಲೇಔಟ್‌ನಲ್ಲಿದ್ದು, ಆ ಹೊಸ ಉದ್ಯೋಗಿ ವಾಸವಿರುವುದು ಲಾಲ್‌ಬಾಗ್ ಬಳಿ. ಆತ ಪ್ರತಿದಿನ ಆಫೀಸ್‌ಗೆ ಬರಲು 350 ರೂಪಾಯಿ ಖರ್ಚು ಮಾಡುತ್ತಿರುವುದಾಗಿ ಸಿಇಒ ಬಳಿ ಅಳಲು ತೋಡಿಕೊಂಡಿದ್ದಾನೆ.
ಬೆಂಗಳೂರಿನ ಟ್ರಾಫಿಕ್ ಮತ್ತು ರಸ್ತೆಗಳ ಗುಂಡಿಗಳ ಕಾರಣದಿಂದ ಆತನ ಪೋಷಕರು ಸ್ಕೂಟರ್‌ನಲ್ಲಿ ಓಡಾಡಲು ಅವಕಾಶ ನೀಡುತ್ತಿಲ್ಲ. ಇನ್ನು ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಅಥವಾ ಬಿಎಂಟಿಸಿ ಬಸ್‌ನಲ್ಲಿ ಬರಬೇಕೆಂದರೆ ಕನಿಷ್ಠ ಎರಡು ಗಂಟೆಗಳ ಕಾಲ ಪ್ರಯಾಣ ಮಾಡಬೇಕು. ಜೊತೆಗೆ ಕೊನೆಯ ಹಂತದ ಪ್ರಯಾಣಕ್ಕಾಗಿ ಆಟೋ ಅಥವಾ ಕ್ಯಾಬ್ ಅವಲಂಬಿಸಲೇಬೇಕು. ಹೀಗಾಗಿ ಸಾರ್ವಜನಿಕ ಸಾರಿಗೆ ಹಾಗೂ ಆಟೋ ಪ್ರಯಾಣ ಎರಡೂ ಸೇರಿ ದಿನಕ್ಕೆ 350 ರೂಪಾಯಿ ಖರ್ಚಾಗುತ್ತಿದೆ ಎಂದು ಆ ಯುವಕ ವಿವರಿಸಿದ್ದಾನೆ.
ಫ್ರೆಶರ್ ಉದ್ಯೋಗಿಗಳಿಗೆ ಸಂಕಷ್ಟ
ಸಿಇಒ ಸಂಕೇತ್ ಶೇತ್ ಅವರು ಲೆಕ್ಕ ಹಾಕಿರುವಂತೆ, ಒಬ್ಬ ಉದ್ಯೋಗಿ ಕೇವಲ ಆಫೀಸ್‌ಗೆ ಪ್ರಯಾಣಿಸಲು ದಿನಕ್ಕೆ 350 ರೂಪಾಯಿ ಖರ್ಚು ಮಾಡಿದರೆ, ತಿಂಗಳಿಗೆ ಬರೋಬ್ಬರಿ 7,000 ದಿಂದ 8,000 ರೂಪಾಯಿ ಕೇವಲ ಪ್ರಯಾಣಕ್ಕೇ ಖರ್ಚಾಗುತ್ತದೆ. ತಮ್ಮ ವೃತ್ತಿಜೀವನ ಆರಂಭಿಸುವ 22 ವರ್ಷದ ಯುವಕನೊಬ್ಬನ ತಿಂಗಳ ಸಂಬಳ 20,000 ದಿಂದ 25,000 ರೂಪಾಯಿ ಇದ್ದರೆ, ಅದರಲ್ಲಿ ಇಷ್ಟು ದೊಡ್ಡ ಮೊತ್ತ ಕೇವಲ ಓಡಾಟಕ್ಕೆ ಹೋದರೆ ಆತ ಬದುಕುವುದು ಹೇಗೆ? ಮೊದಲನೇ ಸಂಬಳ ಯುವಕರಿಗೆ ಆರ್ಥಿಕ ಸ್ವಾತಂತ್ರ್ಯ ನೀಡಬೇಕೇ ವಿನಃ, ಅದು ಆತಂಕಕ್ಕೆ ಕಾರಣವಾಗಬಾರದು ಎಂದು ಸಿಇಒ ಬೇಸರ ವ್ಯಕ್ತಪಡಿಸಿದ್ದಾರೆ.
ದುಬಾರಿ ಕಾಸ್ಟ್ ಆಫ್ ಲಿವಿಂಗ್
ಬೆಂಗಳೂರಿನ ಈ ಮಟ್ಟಿನ ಯಶಸ್ಸಿಗೆ ಕಾರಣವೇ ಬೇರೆ ಬೇರೆ ಊರುಗಳಿಂದ ಇಲ್ಲಿಗೆ ಬಂದು ತಮ್ಮ ಕರಿಯರ್ ಕಟ್ಟಿಕೊಳ್ಳುವ ಯುವಕರು. ಆದರೆ, ಇಷ್ಟೊಂದು ದುಬಾರಿ ಜೀವನ ವೆಚ್ಚವನ್ನು ಭರಿಸಲಾಗದೆ ಯುವ ಪ್ರತಿಭೆಗಳು ಬೆಂಗಳೂರಿನಿಂದ ದೂರ ಸರಿಯುವ ಅಪಾಯವಿದೆ.
ಇದು ಹೀಗೆಯೇ ಮುಂದುವರಿದರೆ, ಮುಂದೊಂದು ದಿನ ಯುವಕರು ಆಫೀಸ್‌ಗೆ ಬಂದು ಕೆಲಸ ಮಾಡುವ ಬದಲು ವರ್ಕ್ ಫ್ರಮ್ ಹೋಮ್ ಆಯ್ಕೆ ಮಾಡಿಕೊಳ್ಳಬಹುದು ಅಥವಾ ಬೆಂಗಳೂರು ಬಿಟ್ಟು ಬೇರೆ ನಗರಗಳತ್ತ ಮುಖ ಮಾಡಬಹುದು. "ನೀವು ಯುವಕರನ್ನು ಆರ್ಥಿಕವಾಗಿ ಹತ್ತಿಕ್ಕಿದರೆ, ಭವಿಷ್ಯದಲ್ಲಿ ನಗರದ ಅಭಿವೃದ್ಧಿಯನ್ನೇ ಕಳೆದುಕೊಂಡಂತೆ" ಎಂದು ಸಂಕೇತ್ ಶೇತ್ ಎಚ್ಚರಿಸಿದ್ದಾರೆ.
ಲಿಂಕ್ಡ್‌ಇನ್‌ನಲ್ಲಿ ನೆಟ್ಟಿಗರ ಬೆಂಬಲ
ಸಂಕೇತ್ ಶೇತ್ ಅವರ ಈ ಪೋಸ್ಟ್ ಲಿಂಕ್ಡ್‌ಇನ್‌ನಲ್ಲಿ ವೈರಲ್ ಆಗಿದ್ದು, ಅನೇಕರು ತಮಗೂ ಇದೇ ರೀತಿಯ ಅನುಭವವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಮನೆ ಬಾಡಿಗೆ, ದಿನಸಿ, ಸಾರಿಗೆ ಸೇರಿದಂತೆ ಬೆಂಗಳೂರಿನಲ್ಲಿ ಎಲ್ಲವೂ ದುಬಾರಿಯಾಗುತ್ತಿದ್ದು, ಸಾಧಾರಣ ಸಂಬಳ ಪಡೆಯುವ ಯುವಕರು ಇಲ್ಲಿ ಬದುಕು ಕಟ್ಟಿಕೊಳ್ಳುವುದು ಕಷ್ಟಸಾಧ್ಯವಾಗುತ್ತಿದೆ. ಉತ್ತಮ ಸಾರ್ವಜನಿಕ ಸಾರಿಗೆ ಮತ್ತು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸದೆ ಕೇವಲ ಕಂಪನಿಗಳಿಂದ ಮಾತ್ರ ಈ ಸಮಸ್ಯೆಯನ್ನ ಬಗೆಹರಿಸಲು ಸಾಧ್ಯವಿಲ್ಲ. ಬೆಂಗಳೂರು ಅವಕಾಶಗಳ ನಗರವಾಗಿ ಉಳಿಯಬೇಕಾದರೆ, ಆ ಅವಕಾಶಗಳನ್ನ ಪಡೆಯಲು ತಗಲುವ ವೆಚ್ಚ ಕೂಡ ಕೈಗೆಟಕುವಂತಿರಬೇಕು ಎಂಬುದು ಹಲವರ ಅಭಿಪ್ರಾಯವಾಗಿದೆ.


Click it and Unblock the Notifications
