ನವೆಂಬರ್ 1ರಿಂದ ಬೆಂಗಳೂರಲ್ಲಿ ಹೊಸ ಅಭಿಯಾನ ಪ್ರಾರಂಭ: ಸಚಿವ ಕೃಷ್ಣ ಬೈರೇಗೌಡ ಘೋಷಣೆ

ಬೆಂಗಳೂರು: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನವೆಂಬರ್ 1ರಿಂದ ಹೊಸ ಅಭಿಯಾನ ಪ್ರಾರಂಭಿಸುವುದಕ್ಕೆ ನಿರ್ಧರಿಸಲಾಗಿದೆ. ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ನವೆಂಬರ್ 1ರಿಂದ "ವಾರ್ಡ್ ಒನ್" ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳುವ ಕುರಿತು ಅಕ್ಟೋಬರ್ 28ರ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಳೆಯಿಂದಾಗಿ ನಗರದ ಹಲವು ಪ್ರದೇಶಗಳಲ್ಲಿ ರಸ್ತೆಗಳು ಹದಗೆಟ್ಟಿದ್ದು, ಅವುಗಳನ್ನು ದುರಸ್ತಿಪಡಿಸುವ ಅಗತ್ಯವಿದೆ. ಇದರೊಂದಿಗೆ ವಾರ್ಡ್‌ಗಳಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವುದು, ಸ್ವಚ್ಛತೆ, ದುರಸ್ತಿ ಕಾರ್ಯಗಳು ಹಾಗೂ ಸೌಂದರ್ಯೀಕರಣ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಉದ್ದೇಶದಿಂದ ಜಿಬಿಎ, ಐದು ನಗರ ಪಾಲಿಕೆಗಳು ಹಾಗೂ ಇತರೆ ಸರ್ಕಾರಿ ಸಂಸ್ಥೆಗಳ ಸಹಯೋಗದಲ್ಲಿ ನವೆಂಬರ್ 1ರಿಂದ "ವಾರ್ಡ್ ಒನ್" ಅಭಿಯಾನವನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ.

Bengaluru Campaign New Civic Drive to Begin on November 1 Announces Minister Krishna Byre Gowda

ಆಯಾ ನಗರ ಪಾಲಿಕೆಗಳ ವ್ಯಾಪ್ತಿಯ ಪ್ರತಿ ವಿಭಾಗದಿಂದ ಒಂದು ವಾರ್ಡ್‌ನ್ನು ಆಯ್ಕೆ ಮಾಡಿಕೊಂಡು, ಆ ವಾರ್ಡ್‌ನಲ್ಲಿರುವ ಪ್ರಮುಖ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸುವ ಕಾರ್ಯ ಕೈಗೊಳ್ಳಲಾಗುವುದು. ನವೆಂಬರ್ 1ರಂದು ಪ್ರತಿ ವಿಭಾಗದಿಂದ ಒಂದೊಂದು ವಾರ್ಡ್‌ನ್ನು ಆಯ್ಕೆ ಮಾಡಿ, ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳು ಒಗ್ಗೂಡಿ ಆ ವಾರ್ಡ್‌ನಲ್ಲಿರುವ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಲಾಗಿದೆ ಎಂದರು.

ಆಯ್ಕೆ ಮಾಡಲಾದ ವಾರ್ಡ್‌ಗಳಲ್ಲಿ ಪ್ರಮುಖವಾಗಿ ರಸ್ತೆ ಮತ್ತು ಜಂಕ್ಷನ್‌ಗಳ ದುರಸ್ತಿ, ತೀವ್ರ ಸ್ವಚ್ಛತಾ ಕಾರ್ಯ, ವಾರ್ಡ್‌ನಾದ್ಯಂತ ಸ್ವಚ್ಛತೆ ಕಾಪಾಡುವುದು, ಪಾದಚಾರಿ ಮಾರ್ಗಗಳ ಕರ್ಬ್‌ಸ್ಟೋನ್‌ಗಳು ಹಾಗೂ ಸ್ಲ್ಯಾಬ್‌ಗಳ ದುರಸ್ತಿ, ಒಳಚರಂಡಿ ಚೇಂಬರ್‌ಗಳ ಮೇಲ್ಭಾಗದ ಮುಚ್ಚಳಗಳ ದುರಸ್ತಿ, ಬೀದಿ ದೀಪಗಳ ದುರಸ್ತಿ, ಮರದ ಒಣ ರೆಂಬೆ-ಕೊಂಬೆಗಳನ್ನು ತೆರವುಗೊಳಿಸುವುದು ಹಾಗೂ ಸಣ್ಣಪುಟ್ಟ ತ್ಯಾಜ್ಯ/ಮಣ್ಣು ಗುಡ್ಡೆಗಳು ಮತ್ತು ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು.

ಇದರೊಂದಿಗೆ ಬೆಸ್ಕಾಂನ ವಿದ್ಯುತ್ ಕಂಬಗಳು ಹಾಗೂ ಆರ್‌ಎಂಯು ಘಟಕಗಳ ಸ್ಥಳಾಂತರ ಅಥವಾ ದುರಸ್ತಿ, ಜಲಮಂಡಳಿಯ ನೀರಿನ ಸೋರಿಕೆ ತಡೆಗಟ್ಟುವುದು ಮತ್ತು ಅಗತ್ಯವಿರುವಲ್ಲಿ ಪೈಪ್‌ಗಳ ದುರಸ್ತಿ ಅಥವಾ ತೆರವು ಸೇರಿದಂತೆ ವಾರ್ಡ್‌ಗಳ ಸ್ವಚ್ಛತೆ ಹಾಗೂ ಸೌಂದರ್ಯೀಕರಣಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಕೈಗೊಳ್ಳಲಾಗುವುದು. ನವೆಂಬರ್ ತಿಂಗಳ ಅಂತ್ಯದೊಳಗೆ ಸಾಧ್ಯವಾದಷ್ಟು ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ರಸ್ತೆಗಳು ಹಾಗೂ ಜಂಕ್ಷನ್‌ಗಳ ದುರಸ್ತಿ ಮತ್ತು ಅಭಿವೃದ್ಧಿಯಿಂದ ಸಂಚಾರ ದಟ್ಟಣೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಜಂಕ್ಷನ್‌ಗಳ ದುರಸ್ತಿ ಹಾಗೂ ಸುಧಾರಣಾ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ವಿಭಾಗವಾರು ಸಮಿತಿಗಳ ರಚನೆ

ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ವಿಭಾಗವಾರು ಅಧಿಕಾರಿಗಳ ಸಮಿತಿಗಳನ್ನು ರಚಿಸಿ, ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ಅಭಿಯಾನವನ್ನು ಪರಿಣಾಮಕಾರಿಯಾಗಿ ನಡೆಸಲಾಗುವುದು. ಅಭಿಯಾನ ಆರಂಭವಾದ ಬಳಿಕ ಆಯ್ಕೆ ಮಾಡಲಾದ ವಾರ್ಡ್‌ನಲ್ಲಿನ ಸ್ವಚ್ಛತಾ ಕಾರ್ಯಗಳು ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲು ಬೇಕಾಗುವ ಸಮಯವನ್ನು ಪರಿಶೀಲಿಸಿ, ಅದರ ಆಧಾರದ ಮೇಲೆ ನಿಖರವಾದ ಕಾರ್ಯಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುವುದು ಎಂದಿದ್ದಾರೆ.

ಸಮೀಕ್ಷೆ ನಡೆಸಿ ಸಮಸ್ಯೆಗಳ ಪಟ್ಟಿ ಸಿದ್ಧಪಡಿಸಲು ಸೂಚನೆ

ಪ್ರತಿ ವಾರ್ಡ್‌ನಲ್ಲಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳುವ ಸಂಬಂಧ ವಾರ್ಡ್ ಅಧಿಕಾರಿಗಳಿಗೆ ಪರಿಶೀಲನಾ ಪಟ್ಟಿಯನ್ನು (ಚೆಕ್‌ಲಿಸ್ಟ್) ನೀಡಲಾಗುವುದು. ವಾರ್ಡ್ ಸಹಾಯಕ ಅಭಿಯಂತರರು, ಕಿರಿಯ ಆರೋಗ್ಯ ಪರಿವೀಕ್ಷಕರು ಹಾಗೂ ಮಾರ್ಷಲ್‌ಗಳು ಈ ಪಟ್ಟಿಯ ಆಧಾರದ ಮೇಲೆ ವಾರ್ಡ್‌ನ ರಸ್ತೆಗಳನ್ನು ಪರಿಶೀಲಿಸಿ, ಅಲ್ಲಿರುವ ಸಮಸ್ಯೆಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಇಲಾಖೆಗಳ ವಿವರಗಳನ್ನು ಗುರುತಿಸಿ ಪಟ್ಟಿ ಸಿದ್ಧಪಡಿಸಬೇಕು. ನಂತರ ಸಿದ್ಧಪಡಿಸಿದ ಪಟ್ಟಿಯ ಆಧಾರದ ಮೇಲೆ, ಸಂಬಂಧಪಟ್ಟ ಇಲಾಖೆಗಳ ಸಹಯೋಗದೊಂದಿಗೆ ಯೋಜನಾಬದ್ಧವಾಗಿ ಅಭಿಯಾನವನ್ನು ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+