ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮತ್ತೊಂದು ಅಂತರರಾಷ್ಟ್ರೀಯ ಗೌರವ
Recommended Video

ಬೆಂಗಳೂರು, ಜುಲೈ 22: ಇದು ಬೆಂಗಳೂರು ಪಾಲಿಗೆ ಮತ್ತೊಂದು ಗರಿ. ವಿಮಾನ ನಿಲ್ದಾಣದ ಸೇವೆಯ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಏರ್ ಪೋರ್ಟ್ ಕೌನ್ಸಿಲ್ ನ ಮೊಟ್ಟಮೊದಲ ಅಂತರರಾಷ್ಟ್ರೀಯ ಸಮೀಕ್ಷೆಯಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮೊದಲ ಸ್ಥಾನದಲ್ಲಿದೆ.
ಬೇರೆ ಊರು- ದೇಶಗಳಿಂದ ಇಲ್ಲಿಗೆ ಬಂದಿಳಿಯುವ (ಅರೈವಲ್) ಪ್ರಯಾಣಿಕರ ಪಾಲಿಗೆ ಈ ವಿಮಾನ ನಿಲ್ದಾಣ ಅತ್ಯುತ್ತಮ ಎಂಬುದು ಸಮೀಕ್ಷೆ ಫಲಿತಾಂಶ. ಏಪ್ರಿಲ್ ಹಾಗೂ ಜೂನ್ 2018ರ ಮಧ್ಯೆ ಈ ಸಮೀಕ್ಷೆ ನಡೆದಿದೆ. ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಈ ವಿಚಾರದಲ್ಲಿ 5ಕ್ಕೆ 4.67 ಅಂಕ ಬಂದಿದೆ.
ಈ ಸಮೀಕ್ಷೆಯಲ್ಲಿ ಭಾಗವಹಿಸಿದ ಭಾರತದ ಏಕೈಕ ವಿಮಾನ ನಿಲ್ದಾಣವಿದು. ಮತ್ತು ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಎರಡನೇ ಸ್ಥಾನದಲ್ಲಿ ಅಬುಧಾಬಿ ವಿಮಾನ ನಿಲ್ದಾಣ, ಮೂರನೇ ಸ್ಥಾನದಲ್ಲಿ ಟೊರೆಂಟೊದ ಪಿಯರ್ ಸನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರಿದೆ. ವಿಮಾನ ನಿಲ್ದಾಣದ ಮೂಲ ಸೌಕರ್ಯ, ಕಸ್ಟಮ್ಸ್ ಹೀಗೆ ಐದು ಅಂಶಗಳನ್ನು ಮಾಡಿ, ಗ್ರಾಹಕರಿಗೆ ಈ ಬಗ್ಗೆ ಇರುವ ಅಭಿಪ್ರಾಯವನ್ನು ಸರ್ವೇಗಾಗಿ ಗಣನೆಗೆ ತೆಗೆದುಕೊಳ್ಳಲಾಗಿದೆ.

ಅಂದಹಾಗೆ, ಸದ್ಯಕ್ಕೆ ದಕ್ಷಿಣ ಭಾರತದಲ್ಲೇ ವಿಪರೀತ ಬ್ಯುಸಿ ಇರುವ ವಿಮಾನ ನಿಲ್ದಾಣ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ಮತ್ತು ಭಾರತದಲ್ಲೇ ಮೂರನೇ ಅತಿ ದೊಡ್ಡ ನಿಲ್ದಾಣ. ಕಳೆದ ಮಾರ್ಚ್ ನಲ್ಲಿ ಇದೇ ವಿಮಾನ ನಿಲ್ದಾಣಕ್ಕೆ ಭಾರತದಲ್ಲೇ ಹಾಗೂ ಕೇಂದ್ರ ಏಷ್ಯಾದಲ್ಲೇ ಅತ್ಯುತ್ತಮ ನಿಲ್ದಾಣ ಎಂಬ ಗೌರವ ಸಂದಿತ್ತು.












Click it and Unblock the Notifications