Bengaluru Rent: ನಗರದಲ್ಲಿ 2BHK ಮನೆ ಬಾಡಿಗೆ ₹70,000...ಬೆಲೆ ಕೇಳಿದ್ರೆ ತಲೆ ತಿರುಗುತ್ತೆ! Viral News
ಬೆಂಗಳೂರು, ಸೆಪ್ಟಂಬರ್ 02: ರಾಜಧಾನಿ ಬೆಂಗಳೂರು ಐಟಿ ಕೇಂದ್ರವಾಗಿ, ಸಿಲಿಕಾನ್ ವ್ಯಾಲಿ, ಉದ್ಯಾನ ನಗರ, ಮಹಾನಗರ ಹೀಗೆ ಅನೇಕ ಹೆಸರುಗಳಿಂದ ಕರೆಸಿಕೊಳ್ಳುತ್ತದೆ. ಇಲ್ಲಿ ಸ್ವಂತ ಮನೆ, ಆಸ್ತಿ ಹೊಂದುವುದು ಬಹುತೇಕರಿಗೆ ಕನಸಿನ ಮಾತು ಎಂದರೆ ತಪ್ಪಾಗಲಾರದು. ಇಲ್ಲಿ ದೈನಂದಿನ ಬದುಕಿಗೆ ಹೆಚ್ಚು ಹಣ ಖರ್ಚಾಗುತ್ತದೆ. ಅದರಲ್ಲೂ ಮನೆ ಬಾಡಿಗೆಯ ಬೆಲೆ ಕೇಳಿದರೆನೇ ತಲೆ ತಿರುಗುತ್ತದೆ. ಅಷ್ಟರ ಮಟ್ಟಿಗೆ ಮನೆ ಬಾಡಿಗೆ ದುಬಾರಿಯಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆನ್‌ಲೈನ್‌ನಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ.
ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಮನೆ ಬಾಡಿಗೆಗೆ ಸಿಗುವುದು ಅದೃಷ್ಟ. ಕೆಲವೊಮ್ಮೆ ಮನೆಗೆ ಬಾಡಿಗೆ ವಿಚಾರಕ್ಕೆ ಸಾಕಷ್ಟು ತಗಾದೆಗಳು, ಆಕ್ರೋಶಗಳು ವ್ಯಕ್ತವಾಗುತ್ತಲೇ ಇರುತ್ತವೆ. ಸದ್ಯ ಈ ವೈರಲ್ ಆದ ಪೋಸ್ಟ್‌ನಲ್ಲಿ 'ಮನೆ ಬಾಡಿಗೆ ಮಾಸಿಕ 70,000 ರೂಪಾಯಿ, ಮುಂಗಡ ಠೇವಣಿ 05 ಲಕ್ಷ ರೂಪಾಯಿ ಹಣ ನೀಡಬೇಕು' ಎಂಬ ವಿಚಾರ ಹಂಚಿಕೊಳ್ಳಲಾಗಿದೆ. ಮನೆ ಬಾಡಿಗೆ ಇಷ್ಟೊಂದು ದುಬಾರಿಯೇ? ಎಂದು ಅನೇಕರು ಪೋಸ್ಟ್ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇಂತಹ ದುಬಾರಿ ಮನೆ ಬಾಡಿಗೆಗೆ ಇರುವುದು ಬೆಂಗಳೂರಿನ ಪಣತ್ತೂರು ಪ್ರದೇಶದಲ್ಲಿ. ಹೌದು, ಇಲ್ಲಿ 2BHK ಮನೆಯೊಂದಿಗೆ ಈ ಪಾಟಿ ದುಬಾರಿ ಬಾಡಿಗೆ ಹೇಳಿದ್ದನ್ನು ಕೇಳಿ ತಬ್ಬಿಬ್ಬುಗೊಂಡವರು ರೆಡ್ಡಿಟ್‌ನಲ್ಲಿ r/Indianrealestate ಖಾತೆಯಿಂದ ಪೋಸ್ಟ್ ಹಂಚಿಕೊಂಡಿದ್ದಾರೆ. 'ಸದ್ಯ ಈ ಮನೆಗೆ ಕೇಳಿರುವ 70 ಸಾವಿರ ರೂಪಾಯಿ ಅನೇಕ ಯುರೋಪಿಯನ್ ಅಪಾರ್ಟ್‌ಮೆಂಟ್‌ಗಳಿಗಿಂತ ಅಧಿಕವಾಗಿದೆ' ಎಂದು ಬರೆದುಕೊಂಡಿದ್ದಾರೆ.
ಮಾತ್ರವಲ್ಲದೇ 'ಇಷ್ಟು ದುಬಾರಿ ಬಾಡಿಗೆಗಳನ್ನು ಪಾವತಿಸುವ ಜನರು ಯಾರು? ಎಂದು ಪ್ರಶ್ನಿಸಿದ್ದಾರೆ. ಇಷ್ಟೊಂದು ಹಣವನ್ನು ಮನೆ ಬಾಡಿಗೆ ಕೊಡುವ ಬದಲು 80 ಲಕ್ಷ ಸಾಲ ತೆಗೆದುಕೊಂಡು ಮಾಸಿಕ 70 ಸಾವಿರ ರೂಪಾಯಿ EMI ಪಾವತಿಸಿದರೆ ಸ್ವಂತಕ್ಕೆ ಮನೆ, ಇಲ್ಲವೆ ಆಸ್ತಿ ಸಿಗುತ್ತದೆ. ಈ ಪ್ರದೇಶದಲ್ಲಿ ಮನೆ ಬಾಡಿಗೆ ಇಷ್ಟೊಂದಾ? ಕೇಳಿ ನಾನು ದಿಗ್ಭ್ರಮೆಗೊಂಡಿದ್ದೇನೆ' ಎಂದು ಅವರು ತಿಳಿಸಿದ್ದಾರೆ.
ವೈರಲ್ ಪೋಸ್ಟ್‌ಗೆ ನೆಟ್ಟಿಗರು ಹೇಳಿದ್ದೇನು?
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅನೇಕರು ತಮಗೆ ಆದ ಅನುಭವ ಹಂಚಿಕೊಂಡಿದ್ದಾರೆ. ಅಲ್ಲದೇ ಮಳೆ ಬಂದರೆ ಪಣತ್ತೂರು ಪ್ರದೇಶದಲ್ಲಿ ಪ್ರವಾಹ ಉಂಟಾಗುತ್ತದೆ. ಅಂತಹ ಪ್ರದೇಶದಲ್ಲಿ ಮನೆಗೆ ಬಾಡಿಗೆಗೆ ಇಷ್ಟು ಹಣ ನೀಡಬೇಕಾ? ಎಂದು ಲೇವಡಿ ಮಾಡಿದ್ದಾರೆ. ಮತ್ತೊಬ್ಬರು ಮಾಸಿಕ 70 ಸಾವಿರ ಕೊಟ್ಟೂ ಸಹ ವಾಸಿಸುವ ಜನರು ಬೆಂಗಳೂರಿನಲ್ಲಿದ್ದಾರೆ ಎಂದು ವಾಸ್ತವ ಬಗ್ಗೆ ಮಾತನಾಡಿದ್ದಾರೆ. ಮತ್ತೊಂದು ಈ ಪ್ರದೇಶದಲ್ಲಿ ಸುಮಾರು 45 ಸಾವಿರ ರೂಪಾಯಿ ಮನೆ ಬಾಡಿಗೆ ಎಂದು ತಿಳಿಸಿದ್ದಾರೆ. ಸದ್ಯ ದುಬಾರಿ ಮನೆ ಬಾಡಿಗೆ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.












Click it and Unblock the Notifications