ಬೆಂಗಳೂರಲ್ಲಿ ಬದುಕಲು ತಿಂಗಳಿಗೆ ₹1.32 ಲಕ್ಷ ಬೇಕಾ?: ದಂಪತಿಯ ತಿಂಗಳ ಖರ್ಚು-ವೆಚ್ಚದ ವಿಡಿಯೋ ವೈರಲ್!
ಬೆಂಗಳೂರು: ಇತರ ನಗರಗಳಿಗಿಂತ ಬೆಂಗಳೂರಿನಲ್ಲಿ ವಾಸಿಸುವುದು ತೀರಾ ದುಬಾರಿ ಎಂಬ ಮಾತಿಗೆ ಸರಿ ಹೊಂದುವಂತೆ ಇಲ್ಲೊಂದು ದಂಪತಿ ತಮ್ಮ ಖರ್ಚು ವೆಚ್ಚಗಳ ಲೆಕ್ಕೆ ನೀಡಿದ್ದಾರೆ. ಈ ಇಬ್ಬರಿಗೇ ತಿಂಗಳಿಗೆ ₹1.32 ಲಕ್ಷ ಖರ್ಚು ಆಗುತ್ತದೆ ಎಂದು ಸ್ವತಃ ಅವರೇ ವಿಡಿಯೋದಲ್ಲಿ ಹೇಳಿಕೊಂಡಿದ್ದು, ಅದು ವೈರಲ್ ಆಗಿದೆ. ಗಮನಿಸಬೇಕಾದ ಅಂಶವೆಂದರೆ ಒಟ್ಟು ಖರ್ಚಿನಲ್ಲಿ ಉಳಿತಾಯದ ಬೃಹತ್ ಮೊತ್ತವು ಇದೆ.
ತಿಂಗಳಿಗೆ ದಂಪತಿಗೆ ₹1.32 ಲಕ್ಷ ಬೇಕು!
ಬೆಂಗಳೂರಿನ 26 ವರ್ಷ ವಯಸ್ಸಿನ ದಂಪತಿಯು ಮಾಸಿಕವಾಗಿ ₹1.32 ಲಕ್ಷ ಖರ್ಚು ಮಾಡುವುದಾಗಿ ತಿಳಿಸಿದ್ದಾರೆ. ಈ ಹಣವೆಲ್ಲ ಮನೆ ಬಾಡಿಗೆ, ದಿನಸಿ ಸಾಮಗ್ರಿಗಳು, ಜಿಮ್ ಸದಸ್ಯತ್ವ, ಹೊರಗಡೆ ಊಟ ಮಾಡಲು ಖರ್ಚಾಗುತ್ತದೆ. ಇದರಲ್ಲಿ ಮಾಸಿಕ ಎಸ್‌ಐಪಿ (SIP) ಹೂಡಿಕೆಗೆ ಬರೋಬ್ಬರಿ 60,000 ರೂ. ಮೀಸಲಿಡುತ್ತೇವೆ ಎಂದು ದಂಪತಿ ತಿಳಿಸಿದ್ದಾರೆ. ಬೆಂಗಳೂರಿನ ಸ್ವತಂತ್ರ ಜೀವನ ಕುರಿತು ಮಾನಸಿ (24hoursofmansi) ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ.

ಮನೆ ಬಾಡಿಗೆಗೆ ಮಾಸಿಕ ₹30,000 ರೂ. ಖರ್ಚಾದರೆ, ಪೀಠೋಪಕರಣಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಬಾಡಿಗೆ ₹4,000, ಇಂಧನ, ದಿನಸಿ, ಫಿಟ್‌ನೆಸ್ ಇನ್ನಿತರ ಸಬ್‌ಸ್ಕ್ರಿಪ್ಷನ್‌ಗೆ ಸೇರಿದಂತೆ ವೆಚ್ಚ ಇನ್ನಷ್ಟು ಹೆಚ್ಚಾಗುತ್ತದೆ. ಹೂಡಿಕೆ ಬಿಟ್ಟರೆ ಇತರ ವೆಚ್ಚ ಒಟ್ಟು ಸುಮಾರು ₹73,000 ರೂಪಾಯಿ. ನಗರದಲ್ಲಿ ವಾಸಿಸಲು ಇಷ್ಟು ಅಗತ್ಯತೆಗಳನ್ನು ಪೂರೈಸಿಕೊಳ್ಳಬೇಕಿದೆ ಎಂದಿದ್ದಾರೆ. ದೈನಂದಿನ ಅಗತ್ಯ ಸೇವೆ, ಆಹಾರ, ಪ್ರಯಾಣ, ಫಿಟ್‌ನೆಸ್, ಶಾಪಿಂಗ್ ಇನ್ನಿತರ ನಿತ್ಯದ ಖರ್ಚುಗಳಿಗಾಗಿ ತಾವು ಎಷ್ಟು ವ್ಯಯಿಸುತ್ತಾರೆ ಎಂಬುದನ್ನು ವಿವರಿಸಿದ್ದಾರೆ.
ತಾವು 'ಸೆಮಿ-ಫರ್ನಿಶ್ಡ್' ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದೇವೆ. ಬೆಂಗಳೂರಿನಲ್ಲಿ ಖರ್ಚುಗಳು ಹೆಚ್ಚಿದ್ದು, ವಿದ್ಯುತ್ ಬಿಲ್ ಸುಮಾರು ₹2,500 ಪಾವತಿಸುತ್ತೇವೆ. ಇಂಟರ್‍ನೆಟ್, ಇತರ ಚಂದಾದಾರಿಕೆಗಳಿಗೆ ₹4,750 ರೂ. ಮಾಸಿಕ ಜಿಮ್ ಗಾಗಿ ₹4,000 ಖರ್ಚು ಮಾಡುತ್ತೇವೆ. ಟ್ರಾವೆಲ್‌ಗಾಗಿ ಸುಮಾರು ₹5,500 ಖರ್ಚಾದರೆ ವೆಹಿಕಲ್ ಇಂಧನಕ್ಕಾಗಿ ₹3,500, ಇತರ ಹಣ ಆಟೋ, ಕ್ಯಾಬ್, ದಿನಸಿ, ಹೊರಗಿನ ಊಟಕ್ಕಾಗಿ ಬಳಸುವುದು ಸೇರಿದೆ.
ದಂಪತಿಯಿಂದ ದೊಡ್ಡ ಮೊತ್ತದ ಉಳಿತಾಯ
ಈ ದಂಪತಿಯ ಮಾಸಿಕ ಬಜೆಟ್‌ನಲ್ಲಿ ಅತಿ ದೊಡ್ಡ ಮೊತ್ತವು ಹೂಡಿಕೆಗಳಿಗೆ ಮೀಸಲಿಡಲಾಗಿದೆ. ಹಣದ ಖರ್ಚಿನ ಜೊತೆಗೆ ಉಳಿತಾಯದಲ್ಲೂ ನಾವು ಶಿಸ್ತುಬದ್ಧವಾಗಿದ್ದೇವೆ. ವ್ಯವಸ್ಥಿತ ಹೂಡಿಕೆ ಯೋಜನೆ (SIP) ತಿಂಗಳಿಗೆ ₹60,000 ಹಣ ಮೀಸಲಿಡುತ್ತೇವೆ ಎಂದು ದಂಪತಿ ಹೇಳಿಕೊಂಡಿದ್ದಾರೆ.
ಶಾಪಿಂಗ್ ಮತ್ತು ಇತರ ಖರ್ಚುಗಳಿಗಾಗಿ ತಿಂಗಳಿಗೆ ಗರಿಷ್ಠ ₹12,000 ವರೆಗೆ ವೆಚ್ಚವಾಗುತ್ತದೆ. ಒಟ್ಟಾರೆಯಾಗಿ ತಿಂಗಳಿಗೆ ನಾವು1,32,250 ರೂಪಾಯಿ ಖರ್ಚು ಮಾಡುತ್ತೇವೆ. ಬೆಂಗಳೂರಿನ ಜೀವ ಕಡಿಮೆ ಖರ್ಚಿನದ್ದಲ್ಲ ಎಂದು ಅವರು ಅಭಿಪ್ರಾಯಪಟ್ಟರು.ಅಲ್ಲದೇ ಇಲ್ಲಿ ಬದುಕಲು ಆರ್ಥಿಕ ಶಿಸ್ತು ಇರಬೇಕು. ಸದ್ಯ ಈ ದಂಪತಿ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ.
ವಿಶೇಷವೆಂದರೆ ಈ ದಂಪತಿ ಮಾಸಿಕ ಯಾವುದೇ ಸಾಲ ಮಾಡಿಲ್ಲ, ಮಾಸಿಕ EMI ಸಹ ಇಲ್ಲ. ಇದು ಸಹ ಅವರ ಆರ್ಥಿಕ ಶಿಸ್ತಿಗೆ ಪ್ರಮುಖ ಸಾಕ್ಷಿಯಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಭವಿಷ್ಯದಲ್ಲಿ ದಂಪತಿಯು ಎರಡು ಬೆಡ್‌ರೂಮ್‌ಗಳ ಫ್ಲಾಟ್ ಖರೀದಿಸುವ ಬಗ್ಗೆ ಯೋಚಿಸಿದ್ದಾರೆ ಅನ್ನಿಸುತ್ತದೆ ಎಂದು ಉಳಿತಾಯ ಹಣದಿಂದ ಮನೆ ಖರೀದಿಸುಂತೆ ಸಲಹೆ ನೀಡಿದ್ದಾರೆ. ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರು ಬದುಕು ದುಬಾರಿ ಎಂದು ಮತ್ತೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.




Click it and Unblock the Notifications
