ಬತ್ತುತ್ತಿರುವ ಬೆಂಗಳೂರಿನ ಬೋರ್ವೆಲ್, ಏರುತ್ತಿರುವ ವಾಟರ್ ಟ್ಯಾಂಕರ್ ಬೆಲೆ
ಬೆಂಗಳೂರು, ಮಾರ್ಚ್ 11 : ವಿಫಲವಾಗಿದ್ದ ಮಳೆ, ಬಿರು ಬೇಸಿಗೆಯಿಂದಾಗಿ ಬೆಳ್ಳಂದೂರು ಸುತ್ತಮುತ್ತಲಿರುವ ಬೋರ್‌ವೆಲ್‌ಗಳು ಬತ್ತುತ್ತಿದ್ದು, ಟ್ಯಾಂಕರ್ ನೀರಿಗೆ ಹೆಚ್ಚು ಬೆಲೆ ತೆರಬೇಕಾಗಿದೆ.
ಬೇಡಿಕೆ ಹೆಚ್ಚಾದಂತೆ ನೀರಿನ ಬೆಲೆಯೂ ಹೆಚ್ಚಳವಾಗುತ್ತಿದೆ. ಈ ಮೊದಲು 6000 ಲೀಟರ್ ನೀರಿರುವ ಟ್ಯಾಂಕರ್ 500 ರೂ ಗೆ ದೊರೆಯುತ್ತಿತ್ತು. ಆದರೆ ಇದೀಗ ಅದೇ ನೀರಿಗೆ 1,500 ರೂ ನೀಡಬೇಕಿದೆ. ಮುಖ ತೊಳೆಯುವುದಿರಲಿ ಬೇರೆ ಕೆಲಸಕ್ಕೂ ಜನ ನೀರಿಗಾಗಿ ಪರದಾಡುವಂತಾಗಿದೆ.
ಬೆಳ್ಳಂದೂರು ಸುತ್ತಲಿರುವ ಕಸವನಹಳ್ಳಿ, ವರ್ತೂರು ಪ್ರದೇಶಗಳಿಗೆ ಕಾವೇರಿ ಸರಬರಾಜು ಕೂಡ ಇಲ್ಲ. ಈ ಪ್ರದೇಶದ ಜನರು ಬಿಬಿಎಂಪಿಯ ಬೋರ್‌ವೆಲ್ ಅಥವಾ ತಮ್ಮ ಮನೆಯ ಸ್ವಂತ ಬೋರ್‌ವೆಲ್‌ಗಳನ್ನೇ ನಂಬಿಕೊಂಡಿದ್ದಾರೆ.

ದಿನದಿಂದ ದಿನಕ್ಕೆ ಜನಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಹಾಗಾಗಿ ಇರುವ ಬೋರ್‌ವೆಲ್‌ಗಳೆಲ್ಲವೂ ಒಣಗಿ ಹೋಗಿವೆ. ವಾಟರ್ ಟ್ಯಾಂಕರ್ ಓನರ್ ಗಳಲ್ಲಿಯೂ ಕೂಡ ಸ್ಪರ್ಧೆ ಏರ್ಪಟ್ಟಿದೆ. ಪ್ರತಿ ದಿನವೂ ಟ್ಯಾಂಕರ್ ನೀರಿನ ಬೆಲೆ ಹೆಚ್ಚಳವಾಗುತ್ತಿದೆ.
ಆ ಪ್ರದೇಶದ ಜನರಿಗೆ ನೀರಿನ ಪರ್ಯಾಯ ವ್ಯವಸ್ಥೆ ಮಾಡಲು ಶ್ರಮಿಸುತ್ತಿದ್ದೇವೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಬೇಡಿಕೆ ಹೆಚ್ಚಾಗಿದೆ ಆದರೆ ಪೂರೈಕೆ ಕಡಿಮೆಯಾಗಿದೆ. ಮೊದಲು 100 ಟ್ಯಾಂಕರ್ ನೀರು ಪೂರೈಕೆಯಾಗುತ್ತಿತ್ತು ಆದರೆ ಬೇಡಿಕೆ 150ಕ್ಕೆ ಹೆಚ್ಚಳವಾಗಿದೆ.












Click it and Unblock the Notifications