Traffic Fine : ಟ್ರಾಫಿಕ್ ಫೈನ್ ಕಟ್ಟುವ ಮುನ್ನ ತಪ್ಪದೇ ಈ ವಿಷಯ ಚೆಕ್ ಮಾಡಿ
ಟ್ರಾಫಿಕ್ ಫೈನ್ ಬಂದಿದೆ ಎಂದ ಕೂಡಲೇ ಜನ ಭಯ ಬಿದ್ದು, ಟ್ರಾಫಿಕ್ ಫೈನ್ ಕಟ್ಟುವುದು ಮಾಮೂಲಿ. ಆದರೆ, ಟ್ರಾಫಿಕ್ ಫೈನ್ ಎನ್ನುವ ಮೆಸೇಜ್ ಬಂದ ಕೂಡಲೇ ಕಣ್ಮುಚ್ಚಿಕೊಂಡು ಟ್ರಾಫಿಕ್ ಫೈನ್ ಕಟ್ಟಬೇಡಿ ಎನ್ನುತ್ತಿದ್ದಾರೆ ಟ್ರಾಫಿಕ್ ಪೊಲೀಸರು. ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದರೆ, ಸಂಚಾರ ಪೊಲೀಸರು ದಂಡ ವಿಧಿಸುವುದು ಮಾಮೂಲಿ. ಆದರೆ, ನಾವೇ ಟ್ರಾಫಿಕ್ ಫೈನ್ ಹಾಕಿದ್ದೀವಾ ಅಂತ ನೋಡ್ಕೊಳ್ಳಿ ಅಂತಿದ್ದಾರೆ ಟ್ರಾಫಿಕ್ ಪೊಲೀಸ್.
ಸೈಬರ್ ಕಳ್ಳರು ಪೊಲೀಸರ ಹೆಸರಿನಲ್ಲಿ, ಸಿಬಿಐ ಹೆಸರಿನಲ್ಲಿ ಮೋಸ ಮಾಡುವುದು ವರದಿಯಾಗುತ್ತಲ್ಲೇ ಇದೆ. ಇದೀಗ ಸೈಬರ್ ಕಳ್ಳರ ಕಣ್ಣು ಟ್ರಾಫಿಕ್ ಫೈನ್ ಮೇಲೆ ಬಿದ್ದಿದ್ದು. ಟ್ರಾಫಿಕ್ ಫೈನ್ ಹೆಸರಿನಲ್ಲಿ ವಂಚನೆಗೆ ಮುಂದಾಗಿದ್ದಾರೆ. ಹೀಗಾಗಿ, ಅಲರ್ಟ್ ಆಗಿರಿ ಎಂದು ಸಂಚಾರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಯಾವ ರೀತಿ ವಂಚನೆ ನಡೆಯುತ್ತಿದೆ ?
ಸೈಬರ್ ಕಳ್ಳರು ಇದೀಗ ಟ್ರಾಫಿಕ್ ಪೊಲೀಸರ ಹೆಸರಿನಲ್ಲೂ ವಂಚನೆಗೆ ಇಳಿದಿದ್ದು, ಟ್ರಾಫಿಕ್ ಪೊಲೀಸರು ದಂಡ ಪಾವತಿಗೆ ಮೆಸೇಜ್ ಕಳುಹಿಸುವ ಮಾದರಿಯಲ್ಲೇ ವಾಟ್ಸ್ ಆ್ಯಪ್ ನಲ್ಲಿ ಮೆಸೇಜ್ ಕಳುಹಿಸುತ್ತಿದ್ದಾರೆ. ಈ ರೀತಿ ವಾಟ್ಸ್ ಆ್ಯಪ್‌ಗೆ ಬರುವ ಮೆಸೇಜ್‌ಗಳನ್ನು ಸಂಚಾರ ಪೊಲೀಸರೇ ಕಳುಹಿಸಿದ್ದಾರೆ ಎಂದು ನಂಬುವ ಜನ ಆ ಲಿಂಕ್‌ನ ಮೇಲೆ ಕ್ಲಿಕ್ ಮಾಡುತ್ತಿದ್ದಾರೆ.
ಈ ರೀತಿ ಜನ ಲಿಂಕ್‌ನ ಮೇಲೆ ಕ್ಲಿಕ್ ಮಾಡುತ್ತಿದ್ದಂತೆಯೇ ಸೈಬರ್ ಕಳ್ಳರು ತಮ್ಮ ಕರಾಮತ್ತು ಪ್ರದರ್ಶಿಸುತ್ತಿದ್ದಾರೆ. ಲಿಂಕ್ ಮೇಲೆ ಕ್ಲಿಕ್ ಮಾಡುತ್ತಿದ್ದಂತೆಯೇ ಲಿಂಕ್ ಮೇಲೆ ಕ್ಲಿಕ್ ಮಾಡಿದವರ ಸಂಪೂರ್ಣ ಮಾಹಿತಿ ಸೈಬರ್ ಕಳ್ಳರಿಗೆ ಸಿಗಲಿದ್ದು, ಸೈಬರ್ ಕಳ್ಳರು ಬ್ಯಾಂಕ್ ಖಾತೆಯ ಹಣವನ್ನು ಲಪಟಾಯಿಸುತ್ತಿದ್ದಾರೆ. ಹೀಗಾಗಿ, ಸಂಚಾರ ಪೊಲೀಸರು ಎಚ್ಚರಿಸಿದ್ದಾರೆ. ಸಂಚಾರ ಪೊಲೀಸರ ಅಧಿಕೃತ ವೆಬ್‌ಸೈಟ್ ಮತ್ತು ಹೊರತಾಗಿ ಬೇರೆ ಯಾವುದೇ ಆ್ಯಪ್ ಅಥವಾ ವೆಬ್‌ಸೈಟ್‌ನ ಮೂಲಕ ದಂಡ ಪಾವತಿ ಮಾಡಬೇಡಿ ಎಂದು ಹೇಳಿದ್ದಾರೆ.

ಟ್ರಾಫಿಕ್ ಪೊಲೀಸರಿಂದ ಜಾಗೃತಿ
ಸೈಬರ್ ಕಳ್ಳರು ಟ್ರಾಫಿಕ್ ಫೈನ್ ವಿಚಾರದಲ್ಲೂ ಮೋಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಸಾರ್ಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. "ದಂಡ ವಿಧಿಸಿರುವ ಬಗ್ಗೆ ಮೆಸೇಜ್ ಬಂದಿದೆಯೇ ? ಅದನ್ನು ಪಾವತಿಸುವ ಮುನ್ನ ಅದರ ಸತ್ಯಾಸತ್ಯತೆ ಪರಿಶೀಲಿಸಿ, ಪ್ರತಿ ಬಾರಿಯೂ ದಂಡ ಪಾವತಿಸುವ ಮುನ್ನ ಕೆ.ಎಸ್.ಪಿ ಆ್ಯಪ್‌ನಲ್ಲಿ ಇದನ್ನು ಖಾತರಿಪಡಿಸಿಕೊಳ್ಳಿ. ಸುರಕ್ಷಿತವಾಗಿರಿ. ರಸ್ತೆ ಮೇಲೆ ಮತ್ತು ಅದರ ಹೊರತಾಗಿಯೂ ಜಾಗೃತರಾಗಿರಿ ಎಂದು ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.
ಕೆಎಸ್‌ಪಿ ಆ್ಯಪ್ ನಲ್ಲಿ ಪರಿಶೀಲಿಸುವುದು ಹೇಗೆ ?
ಟ್ರಾಫಿಕ್ ಫೈನ್ ಕಟ್ಟುವ ಮೊದಲು ಸಂಚಾರ ಪೊಲೀಸರ ಅಧಿಕೃತ ವೆಬ್‌ಸೈಟ್ ಕೆಎಸ್‌ಪಿ ಆ್ಯಪ್ ಪರಿಶೀಲಿಸಿ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ. ಗೂಗಲ್ ಪ್ಲೇಸ್ಟೋರ್‌ನ ಮೂಲಕ ಕೆಎಸ್‌ಪಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ, ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ನಂತರ ಟ್ರಾಫಿಕ್ ಫೈನ್‌ನ ಮೇಲೆ ಕ್ಲಿಕ್ ಮಾಡಿ, ಇದಾದ ನಂತರ ನಿಮ್ಮ ವಾಹನದ ಸಂಖ್ಯೆಯನ್ನು ನಮೂದಿಸಿ ಸರ್ಚ್ ಎಂದು ಕೊಡಿ. ದಂಡ ತೋರಿಸಿದರೆ ಮಾತ್ರ ದಂಡ ಪಾವತಿ ಮಾಡಿ. ಯಾವುದೇ ಅಪರಿಚಿತ ಸಂಖ್ಯೆಗಳಿಂದ ಬರುವ ಲಿಂಕ್‌ನ ಮೇಲೆ ಕ್ಲಿಕ್ ಮಾಡಬೇಡಿ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ.












Click it and Unblock the Notifications