ಬೆಂಗಳೂರಿಗೆ ಮುಂದಿನ 10 ವರ್ಷಕ್ಕೆ ಏನೆಲ್ಲ ಬೇಕು? ಬಿಬಿಎಂಪಿ ಮಾಡಿದೆ ಮಾಸ್ಟರ್ ಪ್ಲ್ಯಾನ್
ಸಿಲಿಕಾನ್ ಸಿಟಿ ಬೆಂಗಳೂರು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರ. ದಿನದಿಂದ ದಿನಕ್ಕೆ ಇಲ್ಲಿನ ಬೆಳವಣಿಗೆಗೆ ಪೂರಕವಾಗಿ ಮೂಲಸೌಕರ್ಯಗಳು ಕೂಡ ಇರಬೇಕಾಗುತ್ತದೆ. ಭವಿಷ್ಯದಲ್ಲಿ ಬೆಂಗಳೂರಿನ ಚಿತ್ರಣವೇ ಬದಲಾಗಲಿರುವ ಕಾರಣ ಬಿಬಿಎಂಪಿ ದೂರದೃಷ್ಟಿಯ ಹೆಜ್ಜೆ ಇಟ್ಟಿದೆ. ಅದರಂತೆ ಬೆಂಗಳೂರಿನಲ್ಲಿ ಮೂಲಸೌಕರ್ಯಗಳನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಭಾರಿ ಮೊತ್ತದ ಸಾಲಕ್ಕೆ ಮುಂದಾಗಿದೆ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲಿ ಮೂಲಸೌಕರ್ಯದ ಕೊರತೆಗಳನ್ನು ಸರಿಪಡಿಸಲು ಅಂದಾಜು 59,000 ಕೋಟಿ ರೂಪಾಯಿ ವೆಚ್ಚದ ಯೋಜನೆಯನ್ನು ಬಿಬಿಎಂಪಿ ಈಗಾಗಲೇ ತಯಾರಿಸಿದೆ. ಈ ಪೈಕಿ 39,000 ಕೋಟಿ ರೂಪಾಯಿ ಸಾಲ ಪಡೆಯಲು ನಗರಾಭಿವೃದ್ಧಿ ಇಲಾಖೆಗೆ ಬಿಬಿಎಂಪಿ ಅನುಮತಿ ಕೋರಿ ಪತ್ರ ಬರೆದಿದೆ.

ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಮುಂದಿನ ಹತ್ತು ವರ್ಷಗಳಿಗೆ ಮೂಲಸೌಕರ್ಯ ಒದಗಿಸಲು ಬರೋಬ್ಬರಿ 1 ಲಕ್ಷ ಕೋಟಿ ರೂಪಾಯಿಯ ಅಗತ್ಯವಿದೆ. ಇದರಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ನಿವಾರಿಸಲು 59,000 ಕೋಟಿ ರೂಪಾಯಿ ಮೊತ್ತದೆ ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬೆಂಗಳೂರಿನಲ್ಲಿ ಸುರಂಗ ರಸ್ತೆಗಳು, ಕಾರಿಡಾರ್‌ಗಳು, ಡಬಲ್ ಡೆಕರ್ ಫ್ಲೈಓವರ್‌ಗಳು, ಸ್ಕೈಡೆಕ್ ಸೇರಿದಂತೆ ಹಲವು ದೊಡ್ಡ ಯೋಜನೆಗಳಿಗಾಗಿ ಹೊರಗಿನಿಂದ 39,000 ಕೋಟಿ ಸಂಗ್ರಹಿಸಲು ನಿರ್ಧರಿಸಿದ್ದೇವೆ. ಇದಕ್ಕಾಗಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲಿದ್ದೇವೆ. ನಮ್ಮ ಮೆಟ್ರೋ ಯೋಜನೆಗಳಿಗೆ ಹೊಂದಿಸಿದ ರೀತಿಯಲ್ಲೇ ಈ ಯೋಜನೆಗಳಿಗೂ ಹಣ ಸಂಗ್ರಹಿಸುವ ಉದ್ದೇಶವಿದೆ ಎಂದು ಹೇಳಿದ್ದಾರೆ.

ಈಗಾಗಲೇ ನಾವು ನಾಲ್ಕು ಯೋಜನೆಗಳನ್ನು ಪ್ರಸ್ತಾಪಿಸಿದ್ದೇವೆ. ಇದರಲ್ಲಿ 45 ಕಿ.ಮೀ. ಉದ್ದದ ಸುರಂಗ ರಸ್ತೆಗಳ ನಿರ್ಮಾಣಕ್ಕೆ 36,000 ಕೋಟಿ ರೂಪಾಯಿ ವೆಚ್ಚ ತಗುಲಲಿದೆ. ಮೊದಲಿಗೆ ಬಿಬಿಎಂಪಿ 16 ಸಾವಿರ ಕೋಟಿ ರೂಪಾಯಿಯನ್ನು ಸಂಗ್ರಹ ಮಾಡಲಿದೆ. ಬಾಕಿ ಹಣವನ್ನು ಬೇರೆ ಕಡೆಯಿಂದ ಸಾಲದ ರೂಪದಲ್ಲಿ ಪಡೆಯಲಾಗುವುದು. ಅಲ್ಲದೆ ವಾಹನಗಳಿಗೆ ಸುಂಕ ವಿಧಿಸುವ ಯೋಜನೆಯೂ ಇದೆ ಎಂದಿದ್ದಾರೆ.
ಮೆಟ್ರೊ ಮಾರ್ಗಗಳಲ್ಲಿ ಡಬಲ್ ಡೆಕರ್ ಮೇಲ್ಸೇತುವೆ ನಿರ್ಮಾಣ, 100 ಕಿ.ಮೀ ಉದ್ದದ 17 ಎತ್ತರಿಸಿದ ಕಾರಿಡಾರ್‌ಗಳನ್ನು ನಿರ್ಮಿಸುವುದು ಸೇರಿದಂತೆ ಹಲವು ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ. ಸ್ಕೈಡೆಕ್ ನಿರ್ಮಾಣ ಇದರಲ್ಲಿ ಪ್ರಮುಖ ಯೋಜನೆಯಾಗಿದೆ, ಇದಕ್ಕಾಗಿ ರಾಜ್ಯ ಸರ್ಕಾರವೇ ಬಿಬಿಎಂಪಿಗೆ ವಾರ್ಷಿಕವಾಗಿ 3,000 ಕೋಟಿ ರೂಪಾಯಿ ನೀಡುತ್ತಿದೆ ಎನ್ನಲಾಗಿದೆ.

ಹಾಗಾಗಿ ಈ ಯೋಜನೆಗಳಿಗೆ ಮುಂದಿನ ನಾಲ್ಕು ವರ್ಷಕ್ಕಾಗಿ ಹೆಚ್ಚುವರಿಯಾಗಿ 2,000 ಕೋಟಿ ರೂಪಾಯಿ ನೀಡುವಂತೆ ಮನವಿ ಮಾಡಲಾಗಿದೆಯಂತೆ. ಮುಂದಿನ ನಾಲ್ಕು ವರ್ಷಗಳಲ್ಲಿ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ 20,000 ಕೋಟಿ ರೂಪಾಯಿಯನ್ನು ಈ ಯೋಜನೆಗಳಿಗೆ ವೆಚ್ಚ ಮಾಡಲಿದ್ದು, ಉಳಿದ ಹಣವನ್ನು ಹೊರಗಿನಿಂದ ಸಾಲದ ರೂಪದಲ್ಲಿ ಹೊಂದಿಸಲಿದೆ ಎಂದು ಹೇಳಲಾಗಿದೆ.
ಇಲ್ಲಿವರೆಗೆ ಬಿಬಿಎಂಪಿ ತನ್ನ ಯೋಜನೆಗಳಿಗೆ ಹಣಕಾಸಿಗಾಗಿ ಸ್ವಂತ ಸಂಪನ್ಮೂಲಗಳು ಹಾಗೂ ರಾಜ್ಯ ಸರ್ಕಾರದ ಮೊರೆ ಹೋಗುತ್ತಿತ್ತು. ಆದರೆ, ಇದೇ ಮೊದಲ ಸಲ ಹೊರಗಿನಿಂದ ಸಾಲ ಪಡೆಯಲು ಮುಂದಾಗಿದೆ. ಈ ಹಿಂದೆ 1999ರಲ್ಲಿ 250 ಕೋಟಿ ರೂಪಾಯಿ ಹಣ ಸಂಗ್ರಹಿಸಿತ್ತು. ಅದನ್ನು ಬಿಟ್ಟರೆ ಹೊರಗಿನಿಂದ ಇಲ್ಲಿವರೆಗೆ ಹಣ ಪಡೆದಿರಲಿಲ್ಲ ಎಂದು ವರದಿಯಾಗಿದೆ.












Click it and Unblock the Notifications