B Khata: ದುಪ್ಪಟ್ಟು ತೆರಿಗೆ & ಶುಲ್ಕ ಪಾವತಿ ಮಾಡಿದರೂ ಬಿ - ಖಾತಾ ಆಸ್ತಿದಾರರಿಗೆ ಹೊಸ ಸಂಕಷ್ಟ!
B Khata: ಬಿ - ಖಾತಾದಾರರಿಗೆ ಎಲ್ಲಾ ಕಡೆಗಳಿಂದಲೂ ಸಂಕಷ್ಟ ಮುಂದುವರಿದಿದೆ. ಬಿ ಖಾತಾ ಮಾಡಿಸಿಕೊಂಡರೆ ಸರ್ಕಾರದ ಕನಿಷ್ಠ ಸೌಲಭ್ಯಗಳು ಸಿಗಲಿವೆ ಎಂದೇ ರಾಜ್ಯ ಸರ್ಕಾರ ಹೇಳಿತ್ತು. ಇದರ ಭಾಗವಾಗಿ ಈಗಾಗಲೇ ಎರಡು ಅವಧಿಗೆ ಬಿ ಖಾತಾ ನೀಡುವ ಅವಧಿಯನ್ನು ವಿಸ್ತರಿಸಲಾಗಿದೆ. ಆದರೆ ಬಿ ಖಾತಾ ಇರುವವರಿಗೆ ಒಂದಿಲ್ಲೊಂದು ಸಂಕಷ್ಟ ಮುಂದುವರಿಯುತ್ತಲ್ಲೇ ಇದೆ. ಇದೀಗ ಬಿ ಖಾತಾ ಇರುವುದರಿಂದ ಆಸ್ತಿದಾರಿರಿಗೆ ಕಟ್ಟಡ ನಕ್ಷೆ ಮಂಜೂರಾತಿ ಸಿಗುತ್ತಿಲ್ಲ. ಆದರೆ, ಕಟ್ಟಡ ನಕ್ಷೆ ಮಂಜೂರಾತಿ ನೀಡದೆ ಮನೆ ನಿರ್ಮಾಣ ಸಾಧ್ಯವಿಲ್ಲ. ಬಿ ಖಾತಾ ಹೊಂದಿರುವವರು ಖಾತಾಗಾಗಿ ಶುಲ್ಕ ಪಾವತಿ ಮಾಡಿದ್ದಾರೆ. ಆಸ್ತಿ ತೆರಿಗೆ ಪಾವತಿಯನ್ನೂ ಮಾಡಿದ್ದಾರೆ. ಆದರೆ ಎಲ್ಲಾ ತೆರಿಗೆ ಪಾವತಿಗಳನ್ನು ಮಾಡಿದ ನಂತರವೂ ಆಸ್ತಿದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಟ್ಟಡ ನಕ್ಷೆ ಮಂಜೂರು ಹಾಗೂ ಸ್ವಾಧೀನ ಪ್ರಮಾಣಪತ್ರ ಇಲ್ಲದೆ ಇರುವಂತಹ ಕಟ್ಟಡಗಳಿಗೆ ನೀರು ಹಾಗೂ ವಿದ್ಯುತ್ ಸಂಪರ್ಕವನ್ನು ಕಲ್ಪಿಸಬಾರದು ಎಂದು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಹೀಗಾಗಿ, ಈ ಎರಡು ಅನುಮತಿ ಪಡೆದುಕೊಳ್ಳದೆ ಇರುವವರು ಯಾವುದೇ ಕಾರಣಕ್ಕೂ ಮನೆ ನಿರ್ಮಾಣ ಮಾಡಬೇಡಿ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಸಹ ಹೇಳಿದ್ದಾರೆ. ಆದರೆ, ಈ ವಿಚಾರವು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಅಲ್ಲದೇ ಬಿ ಖಾತಾ ಮಾಡಿಸಿಕೊಂಡು ಮನೆ ನಿರ್ಮಾಣ ಮಾಡಿಕೊಳ್ಳಬಹುದು ಎಂದು ಕನಸು ಕಾಣುತ್ತಿದ್ದವರಿಗೆ ಈ ವಿಷಯ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ರಾಜ್ಯದಲ್ಲಿ ಬಿ ಖಾತಾ ಹೊಂದಿರುವ ಆಸ್ತಿದಾರರು ಅಂದಾಜು 30ರಿಂದ 40 ಲಕ್ಷಕ್ಕೂ ಹೆಚ್ಚಾಗಿ ಇದ್ದಾರೆ ಎಂದು ಹೇಳಲಾಗಿದೆ. ಮೊದಲ ಹಂತದಲ್ಲಿ ಬಿ ಖಾತಾ ಮಾಡಿಸಿಕೊಳ್ಳುವುದಕ್ಕೆ ಒಂದು ಬಾರಿ ರಾಜ್ಯ ಸರ್ಕಾರ ಅನುಮತಿ ನೀಡಿದಾಗಲೇ ಲಕ್ಷಾಂತರ ಜನ ಬಿ ಖಾತಾ ಮಾಡಿಸಿಕೊಂಡಿದ್ದಾರೆ. ಆದರೆ ಬಿ ಖಾತಾ ಮಾಡಿಸಿಕೊಂಡಿರುವವರಿಗೆ ಲಾಭವಿಲ್ಲದಂತೆ ಆಗುತ್ತಿದೆ. ಬಿ ಖಾತಾ ಮಾಡಿಸಿಕೊಂಡಿದ್ದರೂ, ಮನೆ ನಿರ್ಮಾಣ ಅಥವಾ ಮನೆ ಮಾರಾಟ ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಹೇಗೆ ಎನ್ನುವ ಗೊಂದಲ ಬಿ ಖಾತಾ ಹೊಂದಿರುವ ಆಸ್ತಿದಾರರಲ್ಲಿ ಎದುರಾಗಿದೆ.
2.50 ಲಕ್ಷಕ್ಕೂ ಹೆಚ್ಚು ಸಂಪರ್ಕ: ಕರ್ನಾಟಕದ ಹಳ್ಳಿ ಹಾಗೂ ನಗರ ಪ್ರದೇಶಗಳಲ್ಲಿ ಬರೋಬ್ಬರಿ 2.50 ಲಕ್ಷಕ್ಕೂ ಹೆಚ್ಚು ಆಸ್ತಿದಾರರು ಕಟ್ಟಡ ನಕ್ಷೆ ಅನುಮತಿಯನ್ನೇ ಪಡೆದುಕೊಳ್ಳದೆ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಇದೀಗ ವಿದ್ಯುತ್ ಹಾಗೂ ನೀರಿನ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಸರ್ಕಾರವೇ ಹೇಳಿದೆ. ಆದರೆ ಇದೀಗ ಸುಪ್ರೀಂ ಕೋರ್ಟ್‌ನ ತೀರ್ಮಾನದಿಂದಾಗಿ ಯಾರಿಗೂ ಸೌಲಭ್ಯ ಸಿಗುವುದಿಲ್ಲ ಎಂದೇ ಹೇಳಲಾಗುತ್ತಿದೆ.
ರಾಜ್ಯ ಸರ್ಕಾರವು ಈ ವಿಚಾರವಾಗಿ ಕಾನೂನು ಸಲಹೆಗೆ ಮುಂದಾಗಿದೆ. ಇನ್ನು ರಾಜ್ಯ ಸರ್ಕಾರವು ಬಿ ಖಾತಾಗೆ ಅನುಮತಿ ಕೊಡುವ ಸಂದರ್ಭದಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂದೇ ಅಂದಾಜಿಸಲಾಗಿತ್ತು. ಆದರೆ ಆ ಲೆಕ್ಕಾಚಾರಗಳು ತಲೆಕೆಳಗಾಗಿವೆ.












Click it and Unblock the Notifications