Aero India 2023 : ಬೆಂಗಳೂರು ಏರೋ ಇಂಡಿಯಾ: 600 ಕಂಪೆನಿಗಳ ನೋಂದಣಿ
ಬೆಂಗಳೂರು, ಜನವರಿ 6: ಫೆಬ್ರವರಿ 13ರಿಂದ 17ರ ನಡುವೆ ಬೆಂಗಳೂರಿನಲ್ಲಿ ನಡೆಯಲಿರುವ ಏರೋ ಇಂಡಿಯಾದ 14ನೇ ಆವೃತ್ತಿಗೆ ಸುಮಾರು 600 ಕಂಪನಿಗಳು ನೋಂದಾಯಿಸಿಕೊಂಡಿವೆ.
ಏರೋ ಇಂಡಿಯಾ ಪ್ರದರ್ಶನದ ಅಧಿಕೃತ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಮಾಹಿತಿಯ ಪ್ರಕಾರ, 557 ಭಾರತೀಯ ಪ್ರದರ್ಶಕರು ಮತ್ತು 41 ವಿದೇಶಿ ಪ್ರದರ್ಶಕರು ತಮ್ಮ ಭಾಗವಹಿಸುವಿಕೆಯನ್ನು ಈಗಾಗಲೇ ಖಚಿತಪಡಿಸಿದ್ದಾರೆ. ಕಾರ್ಯಕ್ರಮವು ಬರೋಬ್ಬರಿ 23 ದೇಶಗಳ ಪ್ರಾತಿನಿಧ್ಯವನ್ನು ಹೊಂದಿರುತ್ತದೆ.
ಏತನ್ಮಧ್ಯೆ, 2023ರ ಪ್ರದರ್ಶನದ 14ನೇ ಆವೃತ್ತಿಯು ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ ಎಂದು ಗುರುವಾರ ಅಧಿಕೃತ ಹೇಳಿಕೆ ತಿಳಿಸಿದೆ. ಕಾರ್ಯಕ್ರಮಕ್ಕಾಗಿ ಆರಂಭದಲ್ಲಿ ನೀಡಲಾದ ಸ್ಥಳವನ್ನು ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡಿಸೆಂಬರ್ 31ರಂದು ತೆರೆಯಲಾದ ಹೆಚ್ಚುವರಿ ಸಭಾಂಗಣವನ್ನು ಸಹ ಕಾಯ್ದಿರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಯಲಹಂಕದ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ನಡೆಯಲಿರುವ ಐದು ದಿನಗಳ ಕಾರ್ಯಕ್ರಮವು ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮಗಳ ಪ್ರಮುಖ ವ್ಯಾಪಾರ ಪ್ರದರ್ಶನವನ್ನು ಭಾರತೀಯ ವಾಯುಪಡೆಯ ವೈಮಾನಿಕ ಪ್ರದರ್ಶನದೊಂದಿಗೆ ಸಂಯೋಜಿಸುತ್ತದೆ. ಏರೋಸ್ಪೇಸ್ ಉದ್ಯಮದಲ್ಲಿ ಜಾಗತಿಕ ನಾಯಕರು ಮತ್ತು ಪ್ರಮುಖ ಹೂಡಿಕೆದಾರರಲ್ಲದೆ, ಪ್ರದರ್ಶನವು ಪ್ರಪಂಚದಾದ್ಯಂತದ ಚಿಂತಕರ ಚಾವಡಿಗಳ ಭಾಗವಹಿಸುವಿಕೆಯನ್ನು ಎದುರು ನೋಡುತ್ತದೆ.
ವೈಮಾನಿಕ ಉದ್ಯಮದಲ್ಲಿನ ನಾಯಕರಲ್ಲಿ ವಿಚಾರ ವಿನಿಮಯಕ್ಕೆ ವೇದಿಕೆಯನ್ನು ಹೊಂದಿಸುವುದರ ಹೊರತಾಗಿ ಪ್ರದರ್ಶನವು 'ಮೇಕ್ ಇನ್ ಇಂಡಿಯಾ' ಉಪಕ್ರಮದ ವ್ಯಾಪ್ತಿಯನ್ನು ವಿಸ್ತರಿಸುತ್ತದೆ ಎಂದು ಹೇಳಿಕೆ ತಿಳಿಸಿದೆ. ಬೆಂಗಳೂರಿನ ಯಲಹಂಕದ ಏರ್ ಫೋರ್ಸ್ ಸ್ಟೇಷನ್ 1996 ರಿಂದ ಏಷ್ಯಾದ ಅತಿದೊಡ್ಡ ಏರ್ ಶೋದ (ವೈಮಾನಿಕ ಪ್ರದರ್ಶನ) ಆತಿಥ್ಯ ವಹಿಸಿದೆ.
ಕೇಂದ್ರ ರಕ್ಷಣಾ ಸಚಿವಾಲಯದ ಭಾಗವಾದ 'ಡಿಫೆನ್ಸ್ ಎಕ್ಸಿಬಿಷನ್ ಆರ್ಗನೈಜೇಷನ್' ವತಿಯಿಂದ ಈ ವೈಮಾನಿಕ ಪ್ರದರ್ಶನ ನಡೆಯಲಿದೆ. ಇದರಲ್ಲಿ ಭಾರತೀಯ ಏರೋಸ್ಪೇಸ್ ಉದ್ಯಮದ ಹಲವಾರು ತಯಾರಕರು ಮತ್ತು ಸೇವಾ ಪೂರೈಕೆದಾರರು ಭವಿಷ್ಯದ ಗ್ರಾಹಕರನ್ನು ಭೇಟಿ ಮಾಡುತ್ತಾರೆ. ಏರೋಸ್ಪೇಸ್ ಉದ್ಯಮ ಬೆಳೆವಣಿಗೆಗೆ ಈ ಏರೋ ಇಂಡಿಯಾ ಪ್ರದರ್ಶನ ಉತ್ತಮ ವೇದಿಕೆಯೂ ಆಗಿದೆ.

ಬೆಂಗಳೂರು ಏರ್ ಶೋನಲ್ಲಿ ಹೆಲಿಕಾಪ್ಟರ್, ಸುಖೋಯ್, ಮಿಗ್ 29, ಮಿರಾಜ್, ಹೆಚ್‌ಎಎಲ್ ನಿರ್ಮಿತ ದೇಶಿಯ ತೇಜಸ್ ಲಘು ಯುದ್ಧ ವಿಮಾನಗಳು ಸಾಹಸಮಯ ಪ್ರದರ್ಶನವನ್ನು ನೀಡಲಿವೆ. 2021ರಲ್ಲಿ ನಡೆದ ಏರ್ ಶೋ ವೇಳೆ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗಿತ್ತು. ಏರ್ ಶೋ ವೀಕ್ಷಣೆ ಮಾಡಲು ಆನ್‌ಲೈನ್ ಮೂಲಕ ಸಹ ಅವಕಾಶವನ್ನು ಕಲ್ಪಿಸಲಾಗಿತ್ತು. ಪ್ರತಿಯೊಂದು ಹಂತದಲ್ಲಿಯೂ ತಪಾಸಣೆ ಮಾಡಲಾಗುತ್ತಿತ್ತು. ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿತ್ತು.












Click it and Unblock the Notifications