Kiranraj ಕನ್ನಡತಿ ಖ್ಯಾತಿಯ ನಟ ಕಿರಣ್‌ರಾಜ್ ಅಪಘಾತದಿಂದ ಪಾರು: ಫಸ್ಟ್ ರಿಯಾಕ್ಷನ್ ಇಲ್ಲಿದೆ
ಕನ್ನಡತಿ ಧಾರವಾಹಿ ಖ್ಯಾತಿಯ ನಟ ಕಿರಣ್ ರಾಜ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಕಿರಣ್‌ರಾಜ್ ಅವರ ಎದೆಯ ಭಾಗಕ್ಕೆ ಪೆಟ್ಟಾಗಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಕಿರಣ್‌ರಾಜ್ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಉದಯೋನ್ಮಕ ನಟ ಕಾರ್ ಅಪಘಾತಕ್ಕೆ ಗುರಿಯಾಗಿದ್ದರ ಬಗ್ಗೆ ಕನ್ನಡ ಚಿತ್ರರಂಗ ಹಾಗೂ ಅವರ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಇದೀಗ ಕಿರಣ್ ರಾಜ್ ಅವರೇ ವಿಡಿಯೋದ ಮೂಲಕ ಸಂದೇಶ ಹಂಚಿಕೊಂಡಿದ್ದಾರೆ.
ಅಪಘಾತ ಹಾಗೂ ಆರೋಗ್ಯದ ಬಗ್ಗೆ ಮಾತನಾಡಿರುವ ನಟ ಕಿರಣ್ ರಾಜ್ ಅವರು, "ಎಲ್ಲರಿಗೂ ನಮಸ್ಕಾರ ಏನಾಗಿದೆ ಎಂದು ಈಗಾಗಲೇ ನಿಮಗೆ ತಿಳಿದಿರುತ್ತದೆ. ಅಂದರೆ ವಿಷಯ ಮುಟ್ಟಿರುತ್ತದೆ. ಯಾರ್ ಯಾರು ಪ್ಯಾನಿಕ್ (ಭಯಭೀತರಾಗಿ) ಮೆಸೇಜ್ ಮಾಡಿದ್ದೀರಿ, ಭಯ ಬೀಳುವಂತಹದ್ದು ಏನು ಇಲ್ಲ. ದಯವಿಟ್ಟು ಯಾರು ಭಯಬೀಳಬೇಡಿ. ನಾನು ಆರೋಗ್ಯವಾಗಿ ಇದ್ದೇನೆ. ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಎದೆಯ ಭಾಗಕ್ಕೆ ಸ್ವಲ್ಪ ಪೆಟ್ಟಾಗಿತ್ತು. ಈಗ ಸುಧಾರಿಸಿಕೊಳ್ಳುತ್ತಿದ್ದೇನೆ. ಕಾಳಜಿ ವಹಿಸಿದ ಎಲ್ಲರಿಗೂ ಧನ್ಯವಾದಗಳು. ಸುದ್ದಿ ಮಾಧ್ಯದವರಿಗೂ ಧನ್ಯವಾದ" ಎಂದಿದ್ದಾರೆ.

ಅಪಘಾತ ಹೇಗೆ ಸಂಭವಿಸಿತ್ತು ?
ಮಂಗಳವಾರ ರಾತ್ರಿ ಕಿರಣ್‌ರಾಜ್ ಅವರ ಕಾರು ಅಪಘಾತ ಸಂಭವಿಸಿತ್ತು. ಕೆಂಗೇರಿಯ ಗುಟ್ಟಯ್ಯನ ಪಾಳ್ಯದ ಸಿದ್ದೇಶ್ವರ ಎನ್ನುವ ನಿರಾಶ್ರಿತರ ಕೇಂದ್ರಕ್ಕೆ ನಟ ಕಿರಣ್‌ರಾಜ್ ಅವರು ತೆರಳಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಿರಣ್ ರಾಜ್ ಅವರ ಕಾರು ಸಂಪೂರ್ಣವಾಗಿ ಜಖಂ ಆಗಿದೆ.
ಇವರೊಂದಿಗೆ ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದ ರಾನಿ ಸಿನಿಮಾದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಗಿರೀಶ್ ಅವರು ಸಹ ಇದ್ದರು. ಆದರೆ, ಸೀಟ್ ಬೆಲ್ಟ್ ಧರಿಸಿದ್ದರಿಂದ ಅವರಿಗೆ ಯಾವುದೇ ಅಪಾಯ ಆಗಿಲ್ಲ. ಆದರೆ, ಈ ಅಪಘಾತದಲ್ಲಿ ಕಿರಣ್ ರಾಜ್ ಅವರ ಎದೆಯ ಭಾಗಕ್ಕೆ ಪೆಟ್ಟಾಗಿತ್ತು. ಕಿರಣ್‌ರಾಜ್ ಅವರು ಈ ನಿರಾಶ್ರಿತ ಕೇಂದ್ರಕ್ಕೆ ಪ್ರತಿವಾರ ಭೇಟಿ ನೀಡಿ ಊಟ ನೀಡುತ್ತಿದ್ದಾರೆ ಎನ್ನಲಾಗಿದೆ.

ಕನ್ನಡತಿ ಧಾರವಾಹಿಯ ಮೂಲಕ ಫೇಮಸ್
ನಟ ಕಿರಣ್‌ರಾಜ್ ಅವರು ಕನ್ನಡತಿ ಧಾರವಾಹಿಯ ಮೂಲಕ ಖ್ಯಾತಿ ಗಳಿಸಿದ್ದಾರೆ. ಕನ್ನಡತಿ ಧಾರವಾಹಿಯಲ್ಲಿ ನಟ ಕಿರಣ್ ರಾಜ್ ಅವರ ಅಭಿನಯ ಹಾಗೂ ಸಂಭಾಷಣೆಗಳು ಜನರ ಮನಸ್ಸನ್ನು ಗೆದ್ದಿತ್ತು. ಈ ಧಾರವಾಹಿಯ ಮೂಲಕವೇ ಕಿರಣ್ ರಾಜ್ ಅವರು ಮನೆ ಮಗನಂತೆ ಕನ್ನಡಿಗರಿಗೆ ಪರಿಚಯವಾಗಿದ್ದರು.
ಇದೀಗ ಅವರು ಸಣ್ಣ ಪರದೆಯಿಂದ (ಕಿರುತೆರೆ) ದೊಡ್ಡ ಪರದೆ (ಚಿತ್ರರಂಗ)ಕ್ಕೆ ಪ್ರವೇಶಿಸಿದ್ದು. ಕಿರಣ್ ರಾಜ್ ಅವರು ಅಭಿನಯಿಸಿರುವ ಚಿತ್ರ ರಾನಿ ಚಿತ್ರವು ಸೆಪ್ಟೆಂಬರ್ 12ರಂದು ಅಂದರೆ ನಾಳೆ ಬಿಡುಗಡೆಯಾಗಲಿದೆ. ಈ ಚಿತ್ರದ ಬಿಡುಗಡೆಗೆ ಸಿದ್ಧತೆಗಳು ಪೂರ್ಣಗೊಂಡಿದೆ. ನಾಳೆ ಚಿತ್ರ ಬಿಡುಗಡೆ ಇದೆ. ಇಂದು ಅವರಿಗೆ ಅಪಘಾತ ಸಂಭವಿಸಿದೆ ಎಂದು ಹಲವು ಅಭಿಮಾನಿಗಳು ವಿಷಾದ ವ್ಯಕ್ತಪಡಿಸಿದ್ದರು.












Click it and Unblock the Notifications