ಟ್ವಿನ್ ಟ್ಯೂಬ್ ಟನಲ್ ಯೋಜನೆ: 8,000 ಕೋಟಿ ರೂ. ಸಾಲಕ್ಕೆ ಮುಂದಾದ ಬಿಬಿಎಂಪಿ!
ಬೆಂಗಳೂರಿನ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಟ್ವಿನ್ ಟ್ಯೂಬ್ ಟನಲ್ ಯೋಜನೆ ಜಾರಿಗೆ ಬಿಬಿಎಂಪಿಯು ಸಾಲದ ಮೊರೆ ಹೋಗಿದೆ. ಹೌದು ಬೆಂಗಳೂರಿನಲ್ಲಿ ಟ್ರಾಫಿಕ್ ಕಂಟ್ರೋಲ್ ಮಾಡಬೇಕು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಈ ಯೋಜನೆಯು ಸಾರ್ವಜನಿಕ - ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ನಡೆಯಲಿದೆ. ವೆಚ್ಚವನ್ನು ಖಾಸಗಿ ಹಾಗೂ ಬಿಬಿಎಂಪಿ ನಡುವೆ 60:40 ಅನುಪಾತದಲ್ಲಿ ಹಂಚಿಕೆ ಮಾಡಲು ನಿರ್ಧರಿಸಿದೆ.
ಇದೀಗ ಈ ಯೋಜನೆಯನ್ನು ಜಾರಿ ಮಾಡುವುದಕ್ಕೆ ಬಿಬಿಎಂಪಿಯು ಬರೋಬ್ಬರಿ 8,000 (ಎಂಟು ಸಾವಿರ ಕೋಟಿ) ಕೋಟಿ ರೂಪಾಯಿ ಮೊತ್ತದಷ್ಟು ಸಾಲ ಪಡೆಯುವುದಕ್ಕೆ ಮುಂದಾಗಿದೆ ಎಂದು ಬೆಂಗಳೂರು ಮಿರರ್ ವರದಿ ಮಾಡಿದೆ. ಬೆಂಗಳೂರಿನ ದೀರ್ಘಕಾಲದ ಯೋಜನೆಗಳಲ್ಲಿ ಇದು ಸಹ ಒಂದಾಗಿದೆ. ಬೆಂಗಳೂರಿನ ಹಲವು ಪ್ರಮುಖ ಪ್ರದೇಶಗಳನ್ನು ಈ ಯೋಜನೆ ಸಂಪರ್ಕಿಸಲಿದೆ. ಅದರ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಜಾಮ್ ಸಮಸ್ಯೆ ವಿಪರೀತವಾಗುತ್ತಿದೆ. ಮುಂದಿನ ದಿನಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಇನ್ನಷ್ಟು ಹೆಚ್ಚಳವಾಗುವ ಆತಂಕ ಸಹ ಇದೆ. ಈ ರೀತಿ ಇರುವಾಗಲೇ ಟ್ವಿನ್ ಟ್ಯೂಬ್ ಟನಲ್ ಯೋಜನೆ ಎನ್ನುವ ಬೃಹತ್ ಪ್ಲಾನ್ ವೊಂದನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಕಿಕೊಂಡಿದೆ.
ಈ ಯೋಜನೆಯ ವೆಚ್ಚವನ್ನು ಪೂರೈಸುವ ನಿಟ್ಟಿನಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆದುಕೊಳ್ಳುವ ನಿಟ್ಟಿನಲ್ಲಿ ಬಿಬಿಎಂಪಿ ಟೆಂಡರ್ ಆಹ್ವಾನಿಸಿದೆ. ಈ ಯೋಜನೆಗೆ ಹಣ ನೀಡುವುದಕ್ಕೆ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಖಾಸಗಿ ಏಜೆನ್ಸಿಗಳು ಸೇರಿದಂತೆ ಪ್ರಮುಖ ಹಣಕಾಸು ಸಂಸ್ಥೆಗಳು ಮುಂದೆ ಬಂದಿವೆ ಎಂದು ಹೇಳಲಾಗಿದೆ.
ಟ್ವಿನ್ ಟ್ಯೂಬ್ ಟನಲ್ ಯೋಜನೆಯ ವೆಚ್ಚವೆಷ್ಟು: ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಜಾರಿಯಾಗಿರುವ ಪ್ರಮುಖ ಯೋಜನೆಗಳಲ್ಲಿ ಇದೂ ಒಂದಾಗಿದೆ. ಈ ಯೋಜನೆಗಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಈ ಯೋಜನೆಯ ಒಟ್ಟಾರೆ ವೆಚ್ಚವು 14,981.39 ಕೋಟಿ ರೂಪಾಯಿ ಇದೆ ಹೇಳಲಾಗಿದೆ. ಈ ಮೊತ್ತದಲ್ಲಿ ಬಿಬಿಎಂಪಿಯು 8,000 ಕೋಟಿ ರೂಪಾಯಿ ಮೀಸಲಿಡಬೇಕಿದೆ. ಇನ್ನುಳಿದ ಮೊತ್ತವು ಖಾಸಗಿಯಿಂದ ಬರಲಿದೆ.
ಟೋಲ್ ಪಾವತಿ: ಇನ್ನು ಈ ಯೋಜನೆ ಜಾರಿ ಆಗುವುದಕ್ಕೆ ಕನಿಷ್ಠ 3 ವರ್ಷದ ಮೇಲೆ ಆಗುವ ಸಾಧ್ಯತೆ ಇದೆ. ಉದ್ದೇಶಿತ ಯೋಜನೆಯ ಮಾರ್ಗದಲ್ಲಿ ಟೋಲ್ ಸಂಗ್ರಹ ಸಹ ಇರಲಿದೆ. ಆಯ್ಕೆಯಾಗುವ ಗುತ್ತಿಗೆದಾದದರು (ಯೋಜನೆಗೆ ಹಣ ಹೂಡಿಕೆ ಮಾಡುವ ಖಾಸಗಿ ಸಂಸ್ಥೆಯು) 20 ವರ್ಷಗಳ ಅವಧಿಗೆ ಟೋಲ್ ಶುಲ್ಕವನ್ನು ಸಂಗ್ರಹಿಸಲಿದೆ. ಟೋಲ್ ಶುಲ್ಕವು ಪ್ರತಿ ಕಿಲೋಮೀಟರ್‌ಗೆ 18 ರಿಂದ 24 ರೂಪಾಯಿಗಳ ವರೆಗೆ ಇರಲಿದೆ.
ಭೂಸ್ವಾಧೀನ ಪ್ರಕ್ರಿಯೆ ಹಾಗೂ ಕಾಮಗಾರಿಯ ನಿರ್ದಿಷ್ಟ ಅಭಿವೃದ್ಧಿಗಾಗಿ 800 ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಮೊದಲು ಈ ಯೋಜನೆಗೆ ಪ್ರತಿ ಕಿ.ಮೀಗೆ 500 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಡಿಪಿಆರ್ ಬಂದ ಮೇಲೆ ಇದರ ವೆಚ್ಚ ಇನ್ನಷ್ಟು ಹೆಚ್ಚಳವಾಗಿದೆ. ಈ ಯೋಜನೆಗೆ ಪ್ರತಿ ಕಿ.ಮೀ.ಗೆ 898 ಕೋಟಿ ರೂಪಾಯಿ ಆಗಲಿದೆ ಎಂದು ಅಂದಾಜಿಸಲಾಗಿದ್ದು. ಕಾಮಗಾರಿ ವಿಳಂಬವಾದರೆ ಯೋಜನೆಯ ಮೊತ್ತ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯೂ ಇದೆ.












Click it and Unblock the Notifications