25 ನಿಮಿಷ ಜಾಹೀರಾತು: ಪಿವಿಆರ್‌ಗೆ ಬಿತ್ತು ಲಕ್ಷ ರೂ. ದಂಡ!
ಸಿನಿಮಾ ನೋಡಲು ಹೋದವರಿಗೆ ಸಿನಿಮಾ ಪ್ರಾರಂಭವಾಗುವುದಕ್ಕೂ ಮುಂಚೆ ಚಿತ್ರಮಂದಿರದಲ್ಲಿ ಹಾಕುವ ಜಾಹೀರಾತುಗಳು ಇನ್ನಿಲ್ಲದ ಕಿರಿಕಿರಿ ಕೊಡುತ್ತವೆ. ಇದೇ ರೀತಿ ಸಿನಿಮಾ ನೋಡಲು ಹೋದ ಸಿನಿಮಾ ಪ್ರಿಯರೊಬ್ಬರಿಗೆ ಜಾಹೀರಾತುಗಳಿಂದ ಕಿರಿಕಿರಿಯಾಗಿದ್ದು. ಪಿವಿಆರ್‌ಗೆ ಲಕ್ಷ ಲಕ್ಷ ದಂಡ ಪಾವತಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಸಿನಿಮಾ ಪ್ರದರ್ಶನ ಮಾಡುವುದಕ್ಕಿಂತ ಮುಂಚೆ ಬರೋಬ್ಬರಿ 25 ನಿಮಿಷ ಜಾಹೀರಾತು ಪ್ರದರ್ಶನ ಮಾಡುವುದಕ್ಕೆ ಗರಂ ಆಗಿರುವ ಬೆಂಗಳೂರು ವ್ಯಕ್ತಿ ಕೋರ್ಟ್‌ನಲ್ಲಿ ಕೇಸ್ ಹಾಕಿ ಗೆದ್ದಿದ್ದಾರೆ. ಅದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಸಿನಿಮಾ ಥಿಯೇಟರ್‌ಗಳಲ್ಲಿ ಸಿನಿಮಾ ಪ್ರಾರಂಭವಾಗುವುದಕ್ಕೆ ಮುಂಚೆ ಬರೋಬ್ಬರಿ ಅರ್ಧಗಂಟೆ ಬರೀ ಜಾಹೀರಾತುಗಳೇ ಇರುತ್ತವೆ. ಇನ್ನೇನು ಸಿನಿಮಾ ಶುರುವಾಗಿ ಬಿಡುತ್ತದೆ ಅಂತ ಓಡೋಗಿ ನೋಡಿದರೆ ಇನ್ನೂ ಜಾಹೀರಾತು ಬರುತ್ತಿರುತ್ತದೆ. ಸಿನಿಮಾ ನೋಡಲು ಹೋದ ನನಗೆ ಮೊದಲ ಅರ್ಧಗಂಟೆ ಜಾಹೀರಾತು ಮೂಲಕ ಟೈಮ್ ವೇಸ್ಟ್ ಮಾಡಲಾಗಿದೆ. ಹೀಗಾಗಿ, ಸಮಯ ಪೋಲು ಮಾಡಿದ್ದಕ್ಕಾಗಿ PVR ಮತ್ತು INOX ವಿರುದ್ಧ ಸಿನಿ ಪ್ರಿಯರೊಬ್ಬರು ಕೇಸ್ ಹಾಕಿದ್ದು. ಈ ಸಂಸ್ಥೆಯ ವಿರುದ್ಧ ಗೆದ್ದಿದ್ದಾರೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.

ಬೆಂಗಳೂರಿನ ಅಭಿಷೇಕ್ ಎಂ.ಆರ್ ಎನ್ನುವವರು PVR ಸಿನಿಮಾಸ್, ಬುಕ್‌ಮೈಶೋ ಹಾಗೂ INOX ವಿರುದ್ಧ ಅಸಮಾಧಾನಗೊಂಡಿದ್ದರು. ಸಿನಿಮಾ ಪ್ರಾರಂಭವಾಗುವುದಕ್ಕೆ ಮುಂಚೆಯೇ ಬರೋಬ್ಬರಿ 25 ನಿಮಿಷಗಳ ಕಾಲ ಜಾಹೀರಾತು ಪ್ರದರ್ಶನ ಮಾಡಲಾಗಿದೆ ಅಂತ ಕೇಸ್ ಹಾಕಿದ್ದರು. 2023 ರಲ್ಲಿ ಸ್ಯಾಮ್ ಬಹದ್ದೂರ್ ಎನ್ನುವ ಹಿಂದಿ ಸಿನಿಮಾವನ್ನು ನೋಡಲು ಹೋದಾಗ ಈ ರೀತಿಯ ಅನುಭವ ಆಗಿತ್ತು ಎಂದು ಅವರು ಪಿವಿಆರ್ ಮೇಲೆ ಕೇಸ್ ಹಾಕಿದ್ದರು.
ನಾವು ಅಂದುಕೊಂಡ ಸಮಯಕ್ಕೆ ಸಿನಿಮಾ ಮುಗಿಯಲಿಲ್ಲ. ಜಾಹೀರಾತಿನಿಂದಾಗಿ ಸಿನಿಮಾ ವಿಳಂಬವಾಗಿ ಕೆಲಸಕ್ಕೆ ಹೋಗುವುದಕ್ಕೆ ತಡವಾಯಿತು. ಈ ರೀತಿ ಚಿತ್ರಮಂದಿರಗಳಲ್ಲಿ ಜನರ ಸಮಯವನ್ನು ವ್ಯರ್ಥ ಮಾಡಬಾರದು ಎಂದು ಅವರು ಕೇಸ್ ಹಾಕಿದ್ದರು.
ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿರುವ ಗ್ರಾಹಕ ನ್ಯಾಯಾಲಯವು ಇದೀಗ ಪಿವಿಆರ್‌ಗೆ ದಂಡ ಪಾವತಿ ಮಾಡುವಂತೆ ಸೂಚನೆ ನೀಡಿದೆ. ಅಲ್ಲದೆ ಸಿನಿಮಾದ ಟಿಕೆಟ್‌ಗಳಲ್ಲಿ ಸಿನಿಮಾ ಪ್ರಾರಂಭವಾಗುವ ಸರಿಯಾದ ಸಮಯವನ್ನು ಹಾಕಿರಬೇಕು ಅಂತ ಆದೇಶ ಮಾಡಿದೆ. ಸಿನಿಮಾ ಯಾವಾಗ ಶುರುವಾಗುತ್ತೆ ಎನ್ನುವುದನ್ನು ಸರಿಯಾಗಿ ಟಿಕೆಟ್‌ನಲ್ಲಿ ತೋರಿಸಬೇಕೇ ಹೊರತು ಜಾಹೀರಾತಿನ ಸಮಯವನ್ನು ಅಲ್ಲ ಅಂತ ಹೇಳಿದೆ.

ಇನ್ನು ಕೇಸ್ ದಾಖಲಿಸಿರುವ ಅಭಿಷೇಕ್ ಎನ್ನುವವರಿಗೆ ಈ ಕಿರಿಕಿರಿಗೆ 20,000 ರೂಪಾಯಿ, ದೂರು ಸಲ್ಲಿಸಲು ಅವರು ಪಾವತಿಸಿರುವ 8,000 ಸಾವಿರ ರೂಪಾಯಿ ಹಾಗೂ ಅನ್ಯಾಯವಾಗಿ / ನ್ಯಾಯ ಸಮ್ಮತವಲ್ಲದ ಜಾಹೀರಾತು ನೀತಿಗೆ ದಂಡನಾತ್ಮಕ ಪರಿಹಾರವಾಗಿ 1 ಲಕ್ಷ ರೂ. ಪಾವತಿ ಮಾಡಬೇಕು ಎಂದು ನ್ಯಾಯಾಲಯವು ಆದೇಶಿಸಿದೆ.
ಇನ್ನು ಈ ಕೇಸ್‌ನ ವೇಳೆ ಪಿವಿಆರ್ ಸಾರ್ವಜನಿಕ ಸೇವಾ ಪ್ರಕಟಣೆ ಅಥವಾ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಜಾಹೀರಾತುಗಳನ್ನು ಚಲನಚಿತ್ರ ಪ್ರದರ್ಶನದ ಮೊದಲು ಪ್ರದರ್ಶಿಸಬೇಕು ಎಂದು ಸರ್ಕಾರಿ ನಿಯಮವಿದೆ ಎಂದು ಸಮರ್ಥಿಸಿಕೊಂಡಿತ್ತು. ಇದಕ್ಕೆ ನ್ಯಾಯಾಲಯವು ಈ ರೀತಿಯ ಪ್ರದರ್ಶನಗಳಿಗೆ ಗರಿಷ್ಠ 10 ನಿಮಿಷಗಳ ಮಿತಿ ಇದೆ ಎನ್ನುವುದನ್ನು ಗಮನಿಸಿದೆ.












Click it and Unblock the Notifications