ಬೆಂಗಳೂರಲ್ಲಿ ಚೀನಾ ಮಾದರಿ ರೈಲ್ವೆ ಟರ್ಮಿನಲ್ ನಿರ್ಮಾಣ: ದೇಶದಲ್ಲೇ ಮೊದಲು, 600 ಕೋಟಿ ರೂ. ವೆಚ್ಚ
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಪ್ರಮುಖ ಯೋಜನೆ ಜಾರಿ ಆಗುತ್ತಿದ್ದು. ಇದರಿಂದ ಬೆಂಗಳೂರಿನ ವಿವಿಧ ಭಾಗದಲ್ಲಿ ರಿಯಲ್ ಎಸ್ಟೇಟ್ ಅಭಿವೃದ್ಧಿ ಆಗುವ ಸಾಧ್ಯತೆ ಇದೆ. ಏನಿದು ಯೋಜನೆ ಹಾಗೂ ರಿಯಲ್ ಎಸ್ಟೇಟ್‌ಗೆ ಹೇಗೆ ಪೂರಕವಾಗಿ ಇರಲಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರಿನ ಯಲಹಂಕಕ್ಕೆ ಚೀನಾ ಶೈಲಿಯ ಎತ್ತರದ ರೈಲ್ವೆ ಟರ್ಮಿನಲ್ ನಿರ್ಮಾಣ ಯೋಜನೆ ಜಾರಿ ಆಗುತ್ತಿದೆ. ಈ ಟರ್ಮಿನಲ್ ಸುಮಾರು 20 ಎಕರೆ ಪ್ರದೇಶದಲ್ಲಿ ಯೋಜಿಸಲಾಗಿದ್ದು, 16 ಪ್ಲಾಟ್‌ಫಾರ್ಮ್‌ಗಳು ಇರಲಿವೆ. ಈ ಮೂಲಕ ಬೆಂಗಳೂರಿನ ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್‌ನ್ಯೂಸ್ ಸಿಕ್ಕಂತಾಗಿದೆ.

ಬೆಂಗಳೂರಿನ ರೈಲು ನಿಲ್ದಾಣಗಳಲ್ಲಿ ನಿರ್ಮಾಣವಾಗುತ್ತಿರುವ ಒತ್ತಡವನ್ನು ತಪ್ಪಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಮತ್ತೊಂದು ಬೃಹತ್ ರೈಲ್ವೆ ಟರ್ಮಿನಲ್ ನಿರ್ಮಾಣ ಮಾಡುವುದಕ್ಕೆ ಉದ್ದೇಶಿಸಲಾಗಿದೆ. ಬೆಂಗಳೂರಿನ ಬೈಯ್ಯಪ್ಪನಹಳ್ಳಿಯ ಸರ್ ಎಂ.ವಿ. ಟರ್ಮಿನಲ್ ನಂತರ ಮತ್ತೊಂದು ಬೃಹತ್ ಟರ್ಮಿನಲ್ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಮನಿಕಂಟ್ರೋಲ್ ವರದಿ ಮಾಡಿದೆ.
ಇದು ಬೆಂಗಳೂರಿನ 4ನೇ ಬೃಹತ್ ಟರ್ಮಿನಲ್ ಆಗಿರಲಿದೆ. ಅಲ್ಲದೇ ಈ ನಿಲ್ದಾಣವನ್ನು ಚೀನಾದ ಹ್ಯಾಂಗ್‌ಝೌ ಮಾದರಿಯ "ಎಲಿವೇಟೆಡ್" ನಿಲ್ದಾಣವಾಗಿ ನಿರ್ಮಿಸಲು ಉದ್ದೇಶಿಸಲಾಗಿದೆ. ಇದು ದೇಶದಲ್ಲೇ ಮೊದಲ ಪ್ರಯೋಗ ಎನ್ನುವ ಹೆಗ್ಗಳಿಕೆಯನ್ನು ಗಳಿಸಿದೆ. ದೇವನಹಳ್ಳಿಯಲ್ಲಿ ಈ ಟರ್ಮಿನಲ್ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ರೈಲ್ವೆ ಭೂಮಿಯನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಯಲಹಂಕದಲ್ಲಿ ನಿರ್ಮಾಣ ಮಾಡುವುದಕ್ಕೆ ನಿರ್ಧರಿಸಲಾಗಿದೆ.
ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಆಗಮನ ಮತ್ತು ನಿರ್ಗಮನ ಅಭಿವೃದ್ಧಿಪಡಿಸುವುದಕ್ಕೆ ನೀಲ ನಕ್ಷೆ ರೂಪಿಸಲಾಗುತ್ತಿದ್ದು, ಪ್ರಯಾಣಿಕರಿಗೆ ಪ್ರತ್ಯೇಕ ಮಾರ್ಗಗಳು ಇರಲಿವೆ. ಇದರಿಂದ ನೂಕುನುಗ್ಗಲು ತಪ್ಪಲಿದ್ದು, ಜನ ಸರಾಗವಾಗಿ ನಡೆದುಕೊಂಡು ಹೋಗುವುದಕ್ಕೆ ಅನುಕೂಲವಾಗಲಿದೆ.
ಈ ಹೊಸ ಟರ್ಮಿನಲ್‌ನಲ್ಲಿ ಒಟ್ಟು 16 ಪ್ಲಾಟ್‌ಫಾರ್ಮ್‌ಗಳು ಇರಲಿವೆ. ರೈಲು ಹಳಿಗಳು ಕೂಡ ನೆಲಮಹಡಿ ಮತ್ತು ಬೇಸ್‌ಮೆಂಟ್ ಮಟ್ಟದಲ್ಲಿ ಹಾದುಹೋಗಲಿದೆ. ಈ ಕಾರಣಗಳಿಗಾಗಿ ಇದಕ್ಕೆ ಎಲಿವೇಟೆಡ್ ಟರ್ಮಿನಲ್ ಎಂದು ಹೆಸರಿಡಲಾಗಿದೆ. ಇನ್ನು ಈ ಯೋಜನೆಯನ್ನು ಅಂದಾಜು 6,000 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯನ್ನು ಸಾರ್ವಜನಿಕ - ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಅಥವಾ ಡಿಫೋಟ್ (ವಿನ್ಯಾಸ, ನಿರ್ಮಾಣ, ಹಣಕಾಸು, ನಿರ್ವಹಣೆ ಮತ್ತು ವರ್ಗಾವಣೆ) ಮಾದರಿಯಲ್ಲಿ ನಿರ್ಮಿಸುವ ನಿರೀಕ್ಷೆ ಇದೆ.
ರಿಯಲ್ ಎಸ್ಟೇಟ್ ಬೂಸ್ಟ್ ನಿರೀಕ್ಷೆ
ಇನ್ನು ಈ ಯೋಜನೆಯಿಂದ ಬೆಂಗಳೂರಿನ ಹೊರ ವಲಯದಲ್ಲಿ ರಿಯಲ್ ಎಸ್ಟೇಟ್ ಬೂಸ್ಟ್ ಆಗುವ ನಿರೀಕ್ಷೆ ಮೂಡಿದೆ. ಯಲಹಂಕದಲ್ಲಿ ಈಗಾಗಲೇ ಲಭ್ಯವಿರುವ ಜಾಗದ ಮೌಲ್ಯ ಹೆಚ್ಚಿರುವುದು ಹಾಗೂ ಸ್ಥಳಾವಕಾಶದ ಕೊರತೆ ಇರುವುದರಿಂದ, ಲಂಬವಾಗಿ ಟರ್ಮಿನಲ್ ಅನ್ನು ಇಲ್ಲಿ ನಿರ್ಮಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಸುಮಾರು 20 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಈ ಟರ್ಮಿನಲ್ ಬರೋಬ್ಬರಿ 5 ಹಂತಗಳನ್ನು ಒಳಗೊಂಡಿರಲಿದೆ. ಬೇಸ್‌ಮೆಂಟ್, ನೆಲಮಹಡಿ ಹಾಗೂ 3 ಅಂತಸ್ತುಗಳು ಇದರಲ್ಲಿ ಇರಲಿವೆ.
ಈ ಯೋಜನೆಗಾಗಿ ರೈಲು ಗಾಲಿ ಕಾರ್ಖಾನೆಯ (ಆರ್‌ಡಬ್ಲ್ಯೂಎಫ್) 192 ಎಕರೆ ಜಾಗದಲ್ಲಿ ಸುಮಾರು 15 ಎಕರೆಯನ್ನು ಬಳಸಿಕೊಳ್ಳಲಾಗುತ್ತದೆ. ಜೊತೆಗೆ ಅಸ್ತಿತ್ವದಲ್ಲಿರುವ ಯಲಹಂಕ ನಿಲ್ದಾಣದ ಯಾರ್ಡ್ ಮತ್ತು ಸಿಬ್ಬಂದಿ ಕ್ವಾರ್ಟರ್ಸ್ ಜಾಗವನ್ನೂ ಸಹ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಹೊಸ ಟರ್ಮಿನಲ್‌ನಲ್ಲಿ 10 ಸ್ಟೇಬ್ಲಿಂಗ್ ಲೈನ್‌ಗಳು ಮತ್ತು 15 ಪಿಟ್ ಲೈನ್‌ಗಳು ಇರಲಿವೆ ಎಂದು ಹೇಳಲಾಗಿದೆ.
ಇನ್ನು ಯಲಹಂಕದ ವಿವಿಧ ಭಾಗದಲ್ಲಿ ಈಗಾಗಲೇ ಭೂಮಿಗೆ ಒಳ್ಳೆಯ ಬೆಲೆ ಇದ್ದು, ಈ ಹೊಸ ಯೋಜನೆಯಿಂದಾಗಿ ರಿಯಲ್ ಎಸ್ಟೇಟ್‌ಗೆ ಬೂಸ್ಟ್ ಸಿಗುವ ನಿರೀಕ್ಷೆ ಇದೆ.
ನಮ್ಮ ಮೆಟ್ರೋಗೆ ನೇರ ಸಂಪರ್ಕ
ರೈಲು ಪ್ರಯಾಣಿಕರ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಟರ್ಮಿನಲ್ ಅನ್ನು ನಮ್ಮ ಮೆಟ್ರೋ ನೀಲಿ ಮಾರ್ಗದ ಸಮೀಪದ ಕೋಗಿಲು ಕ್ರಾಸ್ ಮೆಟ್ರೋ ನಿಲ್ದಾಣದೊಂದಿಗೆ ಎಲಿವೇಟೆಡ್ ರಸ್ತೆಯ ಮೂಲಕ ಸಂಪರ್ಕಿಸುವಂತೆ ನಿರ್ಮಿಸಲು ನಿರ್ಧರಿಸಲಾಗಿದೆ. ಅಲ್ಲದೇ ಪ್ರಮುಖ ಪ್ರವೇಶ ದ್ವಾರವು ಯಲಹಂಕ -ದೊಡ್ಡಬಳ್ಳಾಪುರ ಹೆದ್ದಾರಿ ಮಾರ್ಗವಾಗಿ ಇರಲಿದೆ.












Click it and Unblock the Notifications