Bengaluru: ಫಾಕ್ಸ್‌ಕಾನ್ ಫ್ಯಾಕ್ಟರಿ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿ, ಕತ್ತು ಸೀಳಿ ಕೊಂದ ತಾಯಿ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೊರವಲಯದ ದೇವನಹಳ್ಳಿಯಲ್ಲಿರುವ ಫಾಕ್ಸ್‌ಕಾನ್ (Foxconn) ಮೊಬೈಲ್ ತಯಾರಿಕಾ ಘಟಕದಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಆಪಲ್ ಐಫೋನ್ (Apple iPhone) ಅಸೆಂಬಲ್ ಮಾಡುವ ಈ 'ಫಾಕ್ಸ್‌ಕಾನ್ ಫ್ಯಾಕ್ಟರಿ'ಯಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಅವಿವಾಹಿತ ಯುವತಿಯೊಬ್ಬಳು, ಕಾರ್ಖಾನೆಯ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿ, ಬಳಿಕ ಆ ನವಜಾತ ಶಿಶುವಿನ ಕತ್ತು ಸೀಳಿ ಹತ್ಯೆ ಮಾಡಿದ್ದಾಳೆ. ಸಮಾಜದ ನಿಂದನೆ ಹಾಗೂ ಅವಮಾನಕ್ಕೆ ಹೆದರಿ ಈ ಕೃತ್ಯ ಎಸಗಿರುವುದಾಗಿ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಘಟನೆಯ ವಿವರ
ಆರೋಪಿ ಯುವತಿಯನ್ನು ರೇಣುಕಾ (19) ಎಂದು ಗುರುತಿಸಲಾಗಿದೆ. ಆಕೆ ದೇವನಹಳ್ಳಿಯ ಫಾಕ್ಸ್‌ಕಾನ್ ಘಟಕದಲ್ಲಿ ಉದ್ಯೋಗಿಯಾಗಿದ್ದಳು. ಬುಧವಾರದಂದು ತನ್ನ ಪಾಳಿಯಲ್ಲಿದ್ದಾಗ ರೇಣುಕಾ ಕೆಲಸದ ನಡುವೆ ಶೌಚಾಲಯಕ್ಕೆ ತೆರಳಿದ್ದಳು. ಗರ್ಭಿಣಿಯಾಗಿದ್ದ ಆಕೆಗೆ ಅಲ್ಲಿಯೇ ದಿಢೀರ್ ಆಗಿ ಹೆರಿಗೆ ನೋವು ಕಾಣಿಸಿಕೊಂಡು, ಮಗುವಿಗೆ ಜನ್ಮ ನೀಡಿದ್ದಾಳೆ.

ತಾನು ಅವಿವಾಹಿತೆ ಎನ್ನುವ ಕಾರಣಕ್ಕೆ ಮಗು ಜನಿಸಿದರೆ ಸಮಾಜ ಹಾಗೂ ಕುಟುಂಬಸ್ಥರು ತಪ್ಪಾಗಿ ನೋಡಬಹುದು ಹಾಗೆ ಮುಜುಗರ ಎದುರಿಸಬೇಕಾಗುತ್ತದೆ ಎಂಬ ಭಯ ಆಕೆಯನ್ನು ಆವರಿಸಿದೆ. ಈ ಕಳಂಕದಿಂದ ತಪ್ಪಿಸಿಕೊಳ್ಳಲು, ಹೆತ್ತ ಮಗುವನ್ನೇ ಸಾಯಿಸಿದ್ದಾಳೆ. ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಆ ನವಜಾತ ಶಿಶುವಿನ ಕತ್ತು ಸೀಳಿ ಹತ್ಯೆ ಮಾಡಿ, ಮೃತದೇಹವನ್ನು ಕಪ್ಪು ಬಣ್ಣದ ಕಸದ ಕವರ್‌ನಲ್ಲಿ ಸುತ್ತಿ, ಶೌಚಾಲಯದ ಡಸ್ಟ್‌ಬಿನ್‌ನಲ್ಲಿ ಎಸೆದು ಬಂದಿದ್ದಾಳೆ.
ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ?
ರೇಣುಕಾ ಈ ಕೃತ್ಯವೆಸಗಿ ಹೋದ ಸ್ವಲ್ಪ ಸಮಯದ ನಂತರ, ಅದೇ ಕಾರ್ಖಾನೆಯ ಮತ್ತೊಬ್ಬ ಮಹಿಳಾ ಉದ್ಯೋಗಿ ಶೌಚಾಲಯಕ್ಕೆ ತೆರಳಿದ್ದಾರೆ. ಈ ವೇಳೆ ಡಸ್ಟ್‌ಬಿನ್ ಬಳಿ ರಕ್ತದ ಕಲೆಗಳು ಹಾಗೂ ಕಸದ ಕವರ್ ಅನ್ನು ಗಮನಿಸಿದ ಅವರು, ಅನುಮಾನಗೊಂಡು ಪರಿಶೀಲಿಸಿದಾಗ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ತಕ್ಷಣವೇ ಅವರು ಈ ವಿಷಯವನ್ನು ಕಂಪನಿಯ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದಾರೆ. ಕೂಡಲೇ ಎಚ್ಚೆತ್ತ ಫಾಕ್ಸ್‌ಕಾನ್ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ಮಾಹಿತಿ ತಿಳಿದ ತಕ್ಷಣ ವಿಶ್ವನಾಥಪುರ ಠಾಣೆಯ ಪೊಲೀಸರು ಫ್ಯಾಕ್ಟರಿಗೆ ದೌಡಾಯಿಸಿದ್ದಾರೆ. ಸ್ಥಳ ಮಹಜರು ನಡೆಸಿದಾಗ, ಮಗುವಿನ ಕತ್ತು ಸೀಳಿ ಕೊಲೆ ಮಾಡಿರುವುದು ಖಚಿತವಾಗಿದೆ. ಕಾರ್ಖಾನೆಯ ಎಂಜಿನಿಯರ್ ಆಗಿರುವ ಕಾಂತರಾಜು ಎಂಬುವವರು ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 93 ಹಾಗೂ 103 ರ ಅಡಿಯಲ್ಲಿ ರೇಣುಕಾ ವಿರುದ್ಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.
ಆರೋಪಿ ಯುವತಿ ಆಸ್ಪತ್ರೆಗೆ ದಾಖಲು
ಮಗುವಿಗೆ ಜನ್ಮ ನೀಡಿದ ತಕ್ಷಣವೇ ಈ ಕೃತ್ಯವೆಸಗಿದ್ದರಿಂದ ಹಾಗೂ ಅತಿಯಾದ ರಕ್ತಸ್ರಾವದಿಂದ ರೇಣುಕಾಳ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಪೊಲೀಸರು ಆಕೆಯನ್ನು ತಮ್ಮ ವಶಕ್ಕೆ ಪಡೆದು, ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆ ಚೇತರಿಸಿಕೊಂಡ ಬಳಿಕ ಆಕೆಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.












Click it and Unblock the Notifications