ಹೊಸತೊಡಕಿಗೆ ಭರ್ಜರಿ ಸಿದ್ಧತೆ: ಬೆಂಗಳೂರಿನಲ್ಲಿ 18 ಜಟ್ಕಾ ಕಟ್ ಶಾಪ್‌ಗಳ ಓಪನ್, ದರಗಳ ವಿವರ ತಿಳಿಯಿರಿ
ಬೆಂಗಳೂರು, ಮಾರ್ಚ್, 23: ಮಾರ್ಚ್ 22ರಂದು ಕರ್ನಾಟಕದಾದ್ಯಂತ ಯುಗಾದಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಮನೆ-ಮನಗಳಲ್ಲೂ ಭಾರತೀಯ ಸಂಪ್ರದಾಯದಂತೆ ಹೊಸಹೊರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಹಲವಾರು ಜಿಲ್ಲೆಗಳಲ್ಲಿ ಅವರದ್ದೇ ಆದ ಸಂಪ್ರದಾಯದಂತೆ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಇನ್ನು ಹಬ್ಬ ಮುಗಿದ ಮಾರನೇ ದಿನದಂದು ಮಾಂಸದ ಊಟ ಮಾಡುವುದು ತುಂಬಾ ಕಡೆ ರೂಢಿಯಲ್ಲಿದೆ. ಅದೇ ರೀತಿಯಲ್ಲಿ ಗುರುವಾರ (ಮಾರ್ಚ್ 23) ಬೆಂಗಳೂರಿನೆಲ್ಲೆಡೆ ಮಾಂಸದ ಅಂಗಡಿಗಳೆಲ್ಲ ತುಂಬಿತುಳುಕುತ್ತಿವೆ.
ಜಟ್ಕಾ ಕಟ್ ಶಾಪ್‌ಗಳ ಓಪನ್
ಬೆಂಗಳೂರಿನಲ್ಲಿ ಜಟ್ಕಾ ಕಟ್ ಶಾಪ್‌ಗಳನ್ನು ತೆರೆಯಲಾಗಿದ್ದು, ಮಾಂಸದ ದರಗಳ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ. ಹಾಗೆಯೇ ಹಿಂದೂಪರ ಸಂಘಟನೆಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದು, ಹಲಾಲ್ ಕಟ್‌ಗೆ ಸೆಡ್ಡು ಹೊಡೆಯಲು ತಯಾರಾಗಿವೆ. 2 ಕೆ.ಜಿ. ಮಟನ್, 2 ಕೆ.ಜಿ. ಚಿಕನ್, 6 ಮೊಟ್ಟೆ ಸೇರಿದಂತೆ 1,999 ರೂಪಾಯಿ ಕಾಂಬೋ ನೀಡಲಾಗುತ್ತದೆ ಎನ್ನುವ ಸುದ್ದಿಯೂ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

ಹೊಸತೊಡಕಿಗಾಗಿ ಭರ್ಜರಿ ಸಿದ್ಧತೆ
ಹಬ್ಬದ ಮಾರನೇ ದಿನವಾದ ಇಂದು ಬೆಂಗಳೂರಿನೆಲ್ಲೆಡೆ ಹೊಸತೊಡಕಿಗಾಗಿ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಮಟನ್, ಚಿಕನ್ ಅಂಗಡಿಗಳ ಮುಂದೆ ಜನರು ಸರತಿ ಸಾಲಿನಲ್ಲಿ ನಿಂತಿದ್ದು, ಶಾಪ್‌ಗಳೆಲ್ಲ ತುಂಬಿತುಳುಕುತ್ತಿವೆ. ಹೀಗೆ ಜನರು ಬೆಳಗ್ಗೆ 6 ಗಂಟೆಯಿಂದಲೇ ಮಾಂಸದ ಅಂಗಡಿಗಳಿಗೆ ಮುಗಿಬಿದ್ದಿರುವುದು ಕಂಡುಬಂದಿದೆ.
ಕುರಿ ಮಾಂಸದ ವಿವರ
ದೇವನಹಳ್ಳಿ ತಾಲೂಕಿನ ಹಲವೆಡೆ ರಾತ್ರಿಯಿಡಿ ಕುರಿಗಳನ್ನು ಬಲಿ ಕೊಡಲಾಗಿದೆ. ಅದೇ ರೀತಿ ಯಲಿಯೂರು ಬಳಿ ಸಾವಿರಾರು ಕೆ.ಜಿ. ಕುರಿ ಮಾಂಸ ಕಟಾವು ಮಾಡಿ ಸಿದ್ಧತೆ ಮಾಡಿಕೊಂಡಿದ್ದು, ಹೊಸತೊಡಕು ಮಾಡಲು ಮಾಂಸದ ಅಂಗಡಿಗಳಿಗೆ ಜನರು ಮುಗಿಬಿದ್ದಿದ್ದಾರೆ. ಕುರಿ ಮಾಂಸವು ಕಳೆದ ವರ್ಷಕ್ಕಿಂತ ಈ ಬಾರಿಯ ಬೆಲೆಯೂ ದುಪ್ಪಟ್ಟಾಗಿದ್ದು, ಒಂದು ಕೆ.ಜಿ. ಮಾಂಸವನ್ನು 700 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತಿದೆ.

18 ಜಟ್ಕಾ ಕಟ್ ಅಂಗಡಿಗಳ ಓಪನ್
ನಗರದಲ್ಲಿ ಈ ಬಾರಿ 18 ಜಟ್ಕಾ ಕಟ್ ಅಂಗಡಿಗಳು ತೆರೆದಿವೆ. ಹಲಾಲ್ ಬಾಯ್ಕಾಟ್ ಅಭಿಯಾನದ ಹಿನ್ನೆಲೆ ರಾಜಸ್ಥಾನದ ಅಜ್ಮೇರ್‌ನಿಂದ 200, ಬಾಸವನ ಬಾಗೇವಾಡಿ, ಮಧುಗಿರಿಯಿಂದ 400 ಸೇರಿದಂತೆ ಒಟ್ಟು 600 ಕುರಿ ಮತ್ತು ಮೇಕೆಗಳು ಬೆಂಗಳೂರಿಗೆ ಬಂದಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಳೆದ ಬಾರಿ 4 ಜಟ್ಕಾ ಕಟ್ ಅಂಗಡಿಗಳನ್ನು ಆರಂಭ ಮಾಡಲಾಗಿತ್ತು. ಈ ಬಾರಿ 18 ಅಂಗಡಿಗಳನ್ನು ತೆರೆಯಲಾಗಿದೆ. ಕಮ್ಮನಹಳ್ಳಿ, ಇಟ್ಟಮಡು, ದಾಸರಹಳ್ಳಿ, ಸಂಜಯ ನಗರ, ಗೆದ್ದಲಹಳ್ಳಿ, ಯಲಹಂಕ, ಇಂದಿರಾನಗರ, ಟ್ಯಾನರಿ ರಸ್ತೆ, ಹೊರಮಾವು, ಅನ್ನಪೂರ್ಣೇಶ್ವರಿ ನಗರ ಸೇರಿದಂತೆ 18 ಶಾಪ್‌ಗಳನ್ನು ತೆರೆದಿದ್ದಾರೆ.
ಕಳೆದ ಬಾರಿಯಂತೆ ಈ ಬಾರಿಯು ಮುಸ್ಲಿಂ ವ್ಯಾಪಾರಿಗಳಿಗೆ ಟಾಂಗ್ ನೀಡಲು 12 ಸಾವಿರ ಕೆ.ಜಿ. ಜಟ್ಕಾ ಕಟ್ ಮಾಂಸವನ್ನು ಕಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹಾಗೆಯೇ ಕಳೆದ ಬಾರಿಯಂತೆ ಈ ಬಾರಿಯು ಆನ್‌ಲೈನ್ ಮತ್ತು ಮನೆಗೆ ಡೆಲಿವರಿ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ.
ಹಿಂದೂಪರ ಸಂಘಟನೆಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿವೆ. 2 ಕೆ.ಜಿ. ಮಟನ್, 2 ಕೆ.ಜಿ. ಚಿಕನ್, 6 ಮೊಟ್ಟೆ ಸೇರಿದಂತೆ 1,999 ರೂಪಾಯಿ ಕಾಂಬೋ ನೀಡಲಾಗುತ್ತದೆ. ಹಿಂದವೀ ಮೀಟ್ ಮಾರ್ಟ್ 1,200 ಸಾವಿರ ಕೆ.ಜಿ. ಜಟ್ಕಾ ಕಟ್ ತಯಾರಿ ಮಾಡಿಕೊಂಡಿದೆ. ಇನ್ನು ಕೆ.ಜಿ. ಗುಡ್ಡೆ ಮಾಂಸ 650 ರೂಪಾಯಿ, ಕೆ.ಜಿ. ಮಟನ್ 700 ರೂಪಾಯಿ, ಕೆ.ಜಿ. ಚಿಕನ್ 130 ರಿಂದ 140 ರೂಪಾಯಿವರೆಗೆ ಮಾರಾಟ ಮಾಡುತ್ತಿದ್ದಾರೆ.
ಹೀಗೆ ರಾಜ್ಯಾದ್ಯಂತ ಹಿಂದೂ ಸಂಘಟನೆಗಳು ಹಲಾಲ್ ಕಟ್ ವಿರುದ್ಧ ಸಮರ ಸಾರಲು ಜಟ್ಕಾ ಕಟ್ ಅನ್ನು ಆರಂಭ ಮಾಡಲು ಮುಂದಾಗಿವೆ. ಪ್ರಮೋದ್ ಮುತಾಲಿಕ್ ಅವರು ಕೂಡ ಹಲಾಲ್ ಕಟ್ ವಿರೋಧಿಸಿ ಜಟ್ಕಾ ಕಟ್ ಅಭಿಯಾನ ಮಾಡುತ್ತೇವೆ ಎಂದು ಸೂಚನೆ ನೀಡಿದ್ದರು. ಇದರಂತೆಯೇ ಬೆಂಗಳೂರಿನ ಹಲವೆಡೆ ಯುಗಾದಿಯ ಮಾರನೇ ದಿನವಾದ ಇಂದು ಜಟ್ಕಾ ಕಟ್ ಮೂಲಕ ಮಾಂಸವನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.












Click it and Unblock the Notifications