ಸವದತ್ತಿ ತಹಶೀಲ್ದಾರ್ ಸರ್ಕಾರಿ ಕಾರನ್ನು ಕದ್ದ ಕಳ್ಳರು !
ಬೆಳಗಾವಿ, ಡಿಸೆಂಬರ್ 20 : ತಹಶೀಲ್ದಾರರ ಸರ್ಕಾರಿ ವಾಹನವನ್ನು ಕದ್ದು ಪರಾರಿಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಸವದತ್ತಿ ತಹಶೀಲ್ದಾರ್ ಬಸನಗೌಡ ಕೋಟೂರ್ ಅವರ ಕಾರನ್ನು ಡಿ.19ರ ಮಧ್ಯರಾತ್ರಿ ಕಳವು ಮಾಡಲಾಗಿದೆ. ತಹಶಿಲ್ದಾರ್ ಕಚೇರಿ ಮುಂದೆ ನಿಲ್ಲಿಸಿದ್ದ ಸರ್ಕಾರಿ ಕಾರು, ಒಂದು ಬೈಕ್ ಕಳವು ಮಾಡಲಾಗಿದೆ.
ಕೆಎ 24, ಜಿ0069 ಸಂಖ್ಯೆಯ ಕಾರನ್ನು ತಹಶೀಲ್ದಾರ್ ಬಸನಗೌಡ ಕೋಟೂರ್ ಅವರು ಉಪಯೋಗಿಸುತ್ತಿದ್ದರು. ಶುಕ್ರವಾರ ಬೆಳಗ್ಗೆ ಅವರು ಕಚೇರಿಗೆ ಬಂದಾಗ ಕಾರು ಕಳುವಾಗಿರುವುದು ಬೆಳಕಿಗೆ ಬಂದಿದೆ.

ತಹಶೀಲ್ದಾರ್ ಕಾರನ್ನು ಕದ್ದಿರುವ ಬಗ್ಗೆ ಸವದತ್ತಿಯಲ್ಲಿ ಬಿಸಿ-ಬಿಸಿ ಚರ್ಚೆ ನಡೆಯುತ್ತಿದೆ. ಸರ್ಕಾರಿ ವಾಹನವನ್ನು ಕದ್ದು ಎಲ್ಲಿಯ ತನಕ ಹೋಗುವರು? ಕಳ್ಳರು ಸಿಕ್ಕಿಬೀಳುತ್ತಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಸವದತ್ತಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.












Click it and Unblock the Notifications