ನೀತಿ ಸಂಹಿತೆ ಉಲ್ಲಂಘನೆ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ದೂರು
ಬೆಳಗಾವಿ, ಏಪ್ರಿಲ್ 24: ನಿನ್ನೆ ನಡೆದ ಕರ್ನಾಟಕ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನದ ವೇಳೆ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ದೂರು ದಾಖಲಾಗಿದೆ.
ತಮಗೆ ಸಂಬಂಧವಿಲ್ಲದ ಮತಗಟ್ಟೆಗೆ ಹೋಗಿದ್ದಲ್ಲದೆ, ಸಾಲಿನಲ್ಲಿ ನಿಂತಿದ್ದ ಮತದಾರರ ಬಳಿ ಮತಯಾಚನೆ ಮಾಡಿದ್ದಾರೆಂದು ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.
ನಿನ್ನೆ ಮತದಾನದ ನಡೆಯುವ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬೆಳಗಾವಿಯ ವಿಜಯನಗರ ಮತಗಟ್ಟೆಗೆ ಹೋಗಿದ್ದರು, ಅಲ್ಲದೆ ಮತಚಲಾಯಿಸಲು ಸಾಲುಗಟ್ಟಿ ನಿಂತಿದ್ದ ವ್ಯಕ್ತಿಗಳ ಮತಯಾಚನೆ ಮಾಡಿದ್ದರು.

ಚುನಾವಣಾ ನೀತಿ ಸಂಹಿತೆ ಪ್ರಕಾರ, ಆಯೋಗದಿಂದ ಅನುಮತಿ ಪಡೆದ ವ್ಯಕ್ತಿಗಳಷ್ಟೆ ತಮ್ಮದಲ್ಲದ ಮತಗಟ್ಟೆ ಒಳಗೆ ಹೋಗಬಹುದು, ಅಲ್ಲದೆ, ಮತಗಟ್ಟೆಯ ನೂರು ಮೀಟರ್ ಒಳಗೆ ಯಾರೂ ಮತಯಾಚನೆ ಮಾಡುವಂತಿಲ್ಲ. ಇವೆರಡು ನಿಯಮನವನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮುರಿದಿದ್ದಾರೆಂದು ಆರೋಪಿಸಲಾಗಿದೆ.
ಕಳೆದ ವಿಧಾನಸಭೆ ಚುನಾವಣೆ ವೇಳೆಯೂ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕೇಸು ದಾಖಲಾಗಿತ್ತು. ಅಲ್ಲದೆ, ಅವರು ಮತದಾರರಿಗೆ ಕುಕ್ಕರ್ ನೀಡಿ ಆಮೀಷ ಒಡ್ಡಿದ್ದಾರೆಂದು ಆರೋಪಿಸಲಾಗಿತ್ತು.
ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾಧುನ್ವಾರ್ ಅವರು ಚುನಾವಣೆಗೆ ಸ್ಪರ್ಧಿಸಿದ್ದಾರೆ ಅವರ ಪರವಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮತಯಾಚನೆ ಮಾಡಿದ್ದರು. ಸಾಧುನ್ವಾರ್ ಅವರ ಎದುರು ಬಿಜೆಪಿಯಿಂದ ಸುರೇಶ್ ಅಂಗಡಿ ಅವರು ಸ್ಪರ್ಧಿಸಿದ್ದಾರೆ.











Click it and Unblock the Notifications