ಬೆಳಗಾವಿ ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 90 ಲೈಂಗಿಕ ದೌರ್ಜನ್ಯ ಕೇಸ್ ದಾಖಲು
ಬೆಳಗಾವಿ, ಆಗಸ್ಟ್ 20: ಕಳೆದ ವರ್ಷ ಅಂದರೆ 2023 ರಿಂದ ಇಲ್ಲಿಯವರೆಗೆ 2024 ಆಗಸ್ಟ್ ತಿಂಗಳ ವರೆಗೆ ಒಟ್ಟು ಬೆಳಗಾವಿ ಜಿಲ್ಲೆಯಲ್ಲಿ ಒಂದಲ್ಲ.. ಎರಡಲ್ಲ.. ಹತ್ತಲ್ಲ.. ಬರೋಬ್ಬರಿ ತೊಂಬತ್ತು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯಲ್ಲಿ 2023 ರಿಂದ ಇಲ್ಲಿಯವರೆಗೆ 90 ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ವರದಿಯಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಬಹಳ ಕಳವಳ ವ್ಯಕ್ತಪಡಿಸಿದರು.
ಇಂದು ಆಗಸ್ಟ್ 20 ಮಂಗಳವಾರ ಬೆಳಗಾವಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿ ಜಿಲ್ಲಾಸ್ಪತ್ರೆಯ ಸ್ವಚ್ಛತೆ, ಸಿಬ್ಬಂದಿ ಕರ್ತವ್ಯ ಪಾಲನೆ, ಮಹಿಳೆಯರಿಗೆ ರಕ್ಷಣೆ ಸೇರಿದಂತೆ ವಿವಿಧ ವಿಭಾಗಳನ್ನು ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ನಾಗಲಕ್ಷ್ಮೀ ಚೌಧರಿ ಅವರು, ಜಿಲ್ಲೆಯಲ್ಲಿ ನಿರ್ಭಯ ಘಟಕದಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ ತೊಂಬತ್ತಾಗಿದೆ. ಇನ್ನೂ ಕೆಲವು ಪ್ರಕರಣಗಳು ಬೆಳಕಿಗೆ ಬಾರದೇ ಇರಬಹುದು. ಅವುಗಳ ಕುರಿತು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಕರೆದು ಚರ್ಚೆ ನಡೆಸಲಾಗುವುದು ಎಂದರು.
ಇನ್ನು ಬೆಳಗಾವಿ ಜಿಲ್ಲೆಯಲ್ಲಿ ದೇವದಾಸಿಯರ ಪದ್ಧತಿ ಜೀವಂತ ಇರುವ ವಿಷಯದ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ನಾನು ಸವದತ್ತಿಯಲ್ಲಿ ದೇವದಾಸಿಯರನ್ನು ಭೇಟಿಯಾಗಿ ಅವರ ಜೊತೆಗೆ ಚರ್ಚಿಸಿದ್ದೇನೆ. ಅವರಿಗೆ ಕಾನೂನು ಅರಿವು ಮೂಡಿಸುವ ಅಗತ್ಯ ಇದ್ದು, ಸಂಬಂಧಿಸಿದ ಇಲಾಖೆಯವರಿಗೆ ಸೂಚನೆ ನೀಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡಲಾಗುವುದು ಎಂದರು.
ಇನ್ನು ಜಿಲ್ಲೆಯ ಬೈಲಹೊಂಗಲ ಹಾಗೂ ಸವದತ್ತಿ ತಾಲೂಕು ಆಸ್ಪತ್ರೆ ಶುಚಿಯಾಗಿವೆ. ಸರ್ಕಾರದ ಆರೋಗ್ಯದ ಸೌಲಭ್ಯವನ್ನು ಸಾರ್ವಜನಿಕರು ಪಡೆದುಕೊಳ್ಳುತ್ತಿದ್ದಾರೆ. ಉಳಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಅಂಗನವಾಡಿ ಶಾಲೆಗಳಲ್ಲಿ ಶಿಕ್ಷಕಿಯರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ಕೊಡಬೇಕೆಂದು ಸೂಚನೆ ನೀಡಿದ್ದೇನೆ ಎಂದು ಹೇಳಿದರು.












Click it and Unblock the Notifications