ಮಾನವೀಯತೆಯ ಸಾಕ್ಷಾತ್ಕಾರ ಮಾಡಿಸಿದ ಅಂಧ ಮಕ್ಕಳು!

Posted By:
Subscribe to Oneindia Kannada

ಇಲ್ಲಿ ಎಲ್ಲರೂ ಒಂದೆ. ಶ್ರೀಮಂತ ಬಡವ, ದೀನ ದಲಿತ, ಜಾಣ ದಡ್ಡ, ಸುಂದರ ಕುರೂಪಿ ಎಂಬ ಭೇದಭಾವಗಳಿರುವುದೇ ಇಲ್ಲ. ಇಲ್ಲಿ ಬಣ್ಣಗಳಿಲ್ಲದಿದ್ದರೂ ಎಲ್ಲವೂ ಸುಂದರ. ಕೃತ್ರಿಮತೆ, ಕಪಟತನಕ್ಕಂತೂ ಅಜೀಬಾತ್ ಜಾಗವಿಲ್ಲ. ಇಲ್ಲಿ ಪ್ರತಿಯೊಬ್ಬರಿಗೂ ಸಮಾನ ಗೌರವ, ಘನತೆ. ಯಾವುದೇ ಒಣ ಪ್ರತಿಷ್ಠೆಗಳಿಗೆ ಜಾಗವಿಲ್ಲದ ಸುಂದರ ಜಗತ್ತಿದು, ಅವರದೇ ಆದ ಜಗತ್ತು. ಅದೇ ಅಂಧರ ಶಾಲೆ.

ಈ ಅಂಧ ಮಕ್ಕಳದ್ದು ಒಂದು ಜಗತ್ತಾದರೆ, ಆ ಜಗತ್ತನ್ನು ಹೊರತುಪಡಿಸಿ ಮತ್ತೊಂದು ವಾಸ್ತವಿಕ ಜಗತ್ತಿನ ಕುರಿತು ಅವರಿಗೆ ಪ್ರತಿಯೊಂದನ್ನೂ ಕಣ್ಣಿಗೆ ಕಟ್ಟುವಂತೆ, ಮನಸಿಗೆ ನಾಟುವಂತೆ, ಹೃದಯಕ್ಕೆ ತಟ್ಟುವಂತೆ ಪಾಠ ಹೇಳಿಕೊಡುವ ಶಿಕ್ಷಕರ ಪಾತ್ರವೂ ಅಷ್ಟೇ ಹಿರಿದಾದುದು. ಇಂಥ ಅಂಧ ಮಕ್ಕಳ ಶಾಲೆಯಲ್ಲಿ, ವಾರಕ್ಕೆ ಐದು ದಿನ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿರುವ ದಿವ್ಯಾ ಕೆ ಅವರು ವಿಸ್ಮಯಕಾರಿ ಅನುಭವವನ್ನು ಹಂಚಿಕೊಂಡಿದ್ದಾರೆ.

ಈ ಪ್ರಪಂಚ ಹೇಗೆ ಕಾಣುತ್ತದೆ ಎಂಬುದನ್ನು ಅರಿಯದ ಈ ಮುಗ್ಧ ಮಕ್ಕಳನ್ನು ಪ್ರತಿ ತಿಂಗಳು ಒಂದೊಂದು ಸ್ಥಳಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ಈ ಬಾರಿ ಕರೆದುಕೊಂಡು ಹೋಗಿದ್ದು ಸಸ್ಯತೋಟ ಲಾಲ್‌ಬಾಗಿಗೆ. ಅಂಧರಿಗೆ ವಾಸ್ತವದ ಜಗತ್ತನ್ನು ಪರಿಚಯಿಸುವುದಿರಲಿ, ಕಣ್ಣು ಕಾಣಿಸುವವರಿಗೂ ಕಾಣಿಸದಂಥ ಮಾನವೀಯ ಜಗತ್ತಿನ ಅನಾವರಣ ಲಾಲ್‌ಬಾಲ್ ಪ್ರವಾಸ ಮಾಡಿಸಿದೆ. [ಹೂವಿನ ತೋಟದಲ್ಲಿ ಕಳೆದುಹೋದ ಹೂವಿನಂಥ ಹುಡುಗಿ]

The Blind Make Us Human, a true experience

ಹೊರಗಡೆ ಹೋಗುವುದೆಂದರೆ ಈ ಮಕ್ಕಳಿಗೆ ಹುಮ್ಮಸ್ಸೋಹುಮ್ಮಸ್ಸು. ರಸ್ತೆ ದಾಟುವಾಗ ಏನೋ ಸಂತಸ, ವಾಹನಕ್ಕೆ ಪೆಟ್ರೋಲ್ ತುಂಬಿಸುವಾಗಲೂ ಅದೇ ಸಂತಸ, ಟ್ರಾಫಿಕ್ಕಿನಲ್ಲಿ ವಾಹನ ಭರ್ರನೆ ಚಲಿಸುವಾಗಲೂ ಅದೇನೋ ಖುಷಿ. ಇನ್ನು ಮಳೆ ಹನಿ ಚಿಟಪಟ ಹನಿಸುತ್ತಿದ್ದರೆ ಕೇಳಬೇಕಾ? ವಾಹನದಿಂದ ಹೊರಕ್ಕೆ ಕೈಚಾಚಿ, ಬೊಗಸೆ ತುಂಬುವ ಮಳೆಹನಿಗಳು ಆನಂದವನ್ನು ಮೊಗೆಮೊಗೆದು ನೀಡುತ್ತವೆ. ಇಂಥ ಸುಖವನ್ನು ಎಲ್ಲವನ್ನೂ ನೋಡಬಲ್ಲರಾದ ನಾವು ಎಲ್ಲಿ ಅನುಭವಿಸುತ್ತೇವೆ?

ಲಾಲ್ ಬಾಗ್ ಸುತ್ತಲು ಏನಿಲ್ಲವೆಂದರೂ ಮೂರ್ನಾಲ್ಕು ಗಂಟೆಗಳಾದರೂ ಬೇಕು. ಮಳೆ ಜಿನುಗುತ್ತಿದ್ದರೂ ಕಲ್ಲಿನ ಬೆಟ್ಟವನ್ನು ಹತ್ತಿಸಿ, ಅಲ್ಲಿಂದ ಕಣ್ಣಿಗೆ ಕಾಣುವ ಬೆಂಗಳೂರನ್ನು ಮಕ್ಕಳಿಗೆ ತೋರಿಸಬೇಕೆಂಬುದು ಆಶಯವಾಗಿತ್ತು. ಗೇಟಿನ ಬಳಿ ಸಾಲಾಗಿ ಮಕ್ಕಳು ಕೈಕೈಹಿಡಿದು ಸಾಗುತ್ತಿರುವಾಗ, ಚುರುಮುರಿ ಮಾರುತ್ತಿದ್ದವ, ಮಕ್ಕಳಿಗೆ ಬೇಕಾ ಎಂದು ಕೇಳಿದ. ಇಲ್ಲಪ್ಪ, ನಾವು ಪ್ಯಾಕ್ ಮಾಡಿಸಿಕೊಂಡು ಬಂದಿದ್ದೇವೆ ಎಂದು ಸುಳ್ಳು ಹೇಳಿದೆ. [ಅಂಧರ ಪರೀಕ್ಷೆಗೆ ಸೋಮನಾಥ ಗೌಡರ ದೀವಿಗೆ]

ಬೆಟ್ಟ ಹತ್ತುವುದು ಮಕ್ಕಳಿಗೆ ಬಲು ಕಷ್ಟಕರವಾಗಿತ್ತು. ಭರ್ರನೆ ಬೀಸುವ ಗಾಳಿ, ಸಮನಾಗಿಲ್ಲದ ಬೆಟ್ಟದ ಹಾದಿ.... ಒಬ್ಬರ ಹೆಗಲನ್ನು ಮತ್ತೊಬ್ಬರು ಹಿಡಿದುಕೊಂಡಿದ್ದ ಮಕ್ಕಳು ಹೇಗೆ ಹತ್ತಿಯಾರು? ಕೆಲವರು ಎಡವಿದರೆ, ಕೆಲವರು ಉಸ್ಸಪ್ಪ ಅಂತ ಅಲ್ಲೇ ಕೂತರು. ಆದರೆ, ಯಾರ ಮೊಗದಲ್ಲೂ ನಗು ಮಾಸಿರಲಿಲ್ಲ. ಕಡೆಗೆ ಆರು ಜನರಿದ್ದ ಒಂದು ತಂಡ ಯಶಸ್ವಿಯಾಗಿ ಬೆಟ್ಟದ ತಲುಪಿಯೇ ಬಿಟ್ಟಿತು.

ಮಕ್ಕಳಿಗೆ ಗೋಪುರವನ್ನು ಮುಟ್ಟಿ ತೋರಿಸಲಾಯಿತು. ಅದೊಂದು ಪುಟ್ಟ ಮನೆ ಅಂತ ಅವರಿಗೆ ಪರಿಚಯ ಮಾಡಿಸಲಾಯಿತು. ಅಷ್ಟರಲ್ಲಿ ಒಬ್ಬ, ಆ ತುದಿಯಿಂದ ಬೆಂಗಳೂರು ಹೇಗೆ ಕಾಣಿಸುತ್ತದೆ, ಅಲ್ಲಿಂದ ತನ್ನ ಮನೆ ಕಾಣಿಸುತ್ತದಾ ಎಂದು ಮುಗ್ಧವಾಗಿ ಕೇಳಿದ. ಇದಕ್ಕೆ ಪ್ರತಿಯಾಗಿ, ನಿಮ್ಮ ಮನೆ ಹೇಗಿದೆ ನೀನೇ ಹೇಳು ಎಂದು ಕೇಳಿದೆ. ಅದಕ್ಕೆ ಅವನು, ತುಂಬಾ ದೊಡ್ಡದಾಗಿದೆ ಎಂದು ಅಷ್ಟೇ ಮುಗ್ಧವಾಗಿ ಉತ್ತರಿಸಿದ. ಅಷ್ಟರಲ್ಲಿ ಕಪಾಳದ ಮೇಲೊಂದು ಮಳೆಹನಿ ಜಾರಿತ್ತು.

The Blind Make Us Human, a true experience

ಈಗ ಬೆಟ್ಟ ಇಳಿಯುವ ಸಮಯ. ಹತ್ತುವುದಕ್ಕಿಂತ ಇಳಿಯುವುದು ಮಕ್ಕಳಿಗೆ ಕಷ್ಟವೆಂದು ತಿಳಿದಿದ್ದರಿಂದ ನಿಧಾನವಾಗಿ ಇಳಿಯಬೇಕೆಂದು ಆದೇಶಿಸಲಾಗಿತ್ತು. ಆದರೆ ಹುಮ್ಮಸ್ಸಿನಲ್ಲಿ ಮಕ್ಕಳು ಕೇಳುತ್ತವಾ? ಕೆಲವೊಬ್ಬರು ಓಡುವ ತವಕದಲ್ಲಿದ್ದರು, ಕೆಲವರು ಜಾರಬಂಡಿಯಾಡಬೇಕೆಂದಿದ್ದರು. ಎಷ್ಟೇ ಕಿರುಚಿಕೊಂಡರೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಕೊನೆಗೆ ಹೇಗೋ ಮಾಡಿ ಅವರ ಮನವೊಲಿಸಿ ನಿಧಾನವಾಗಿ ಇಳಿಸಲಾಯಿತು.

ಇನ್ನೇನು ನಾವು ಮರಳಿ ವಾಹನದ ಕಡೆಗೆ ಹೆಜ್ಜೆ ಹಾಕಬೇಕು, ಅಷ್ಟರಲ್ಲಿ ಅಲ್ಲಿ ಬಂದವರ ಫೋಟೋ ತೆಗೆಯುವ ಫೋಟೋಗ್ರಾಫರ್ ನನ್ನ ಬಳಿ ಬಂದ. ನನಗೂ ಫೋಟೋಗಾಗಿ ಗೋಗರೆಯುತ್ತಾರೆ ಎಂದು ತಿಳಿದರೆ, ನನ್ನ ಬಳಿ 200 ರು.ಗಳನ್ನು ಚಾಚಿ ಹಿಡಿದ. ಯಾಕೆ ಎಂದು ಕೇಳಿದಾಗ, ಈ ರೀತಿ ಮಾತ್ರ ಆ ಅಂಧ ಮಕ್ಕಳಿಗಾಗಿ ಸಹಾಯ ಮಾಡಲು ಸಾಧ್ಯ ಎಂದು ಬೇಡವೆಂದರೂ ಕೈಗೆ ನೀಡಲು ಬಂದ.

ನಾನು ಮೂಕವಿಸ್ಮಿತಳಾಗಿಬಿಟ್ಟೆ. ಕಣ್ಣು ತೇವವಾಯಿತು. ಪ್ರತಿದಿನ ತಾನು ಗಳಿಸುವ ಸಾವಿರ ರುಪಾಯಿಯಲ್ಲಿ ಇನ್ನೂರು ರುಪಾಯಿ ಮಕ್ಕಳಿಗೆಂದು ನೀಡಿದ ಆತನ ಬಗ್ಗೆ ಅತೀವ ಹೆಮ್ಮೆಯಾಯಿತು. ಇವರು ಮೊದಲು ಫೋಟೋ ತೆಗೆದು ನಂತರ ದುಡ್ಡಿಗಾಗಿ ಕಾಡಿಸಿಪೀಡಿಸುತ್ತಾರೆ ಎಂಬ ಭಾವನೆ ನನ್ನಲ್ಲಿ ಅಚ್ಚು ಒತ್ತಿತ್ತು. ಹೀಗಾಗಿ ಅವರ ಬಂದರೆ ದೂರ ಸರಿಯುತ್ತಿದ್ದೆ. ಆತನ ಮಾನವೀಯತೆಗೆ ಮಾರುಹೋಗಿ, ಆ ಹಣವನ್ನು ಅಂಧ ಶಿಕ್ಷಕಿಗೆ ನೀಡಬೇಕೆಂದು ಹೇಳಿದೆ. [ಬಡವರಿಗಾಗಿ ಆಟೋ ಓಡಿಸುವ ಎಂಬಿಬಿಎಸ್ ವಿದ್ಯಾರ್ಥಿ]

The Blind Make Us Human, a true experience

ಆತನ ಜೊತೆ ಮಾತನಾಡಿ ಇನ್ನೇನು ಹೊರಡಬೇಕೆಂಬಷ್ಟರಲ್ಲಿ ಮಕ್ಕಳೆಲ್ಲ ಕೇಸರಿ ಬಣ್ಣದ ಐಸ್ ಕ್ಯಾಂಡಿಯನ್ನು ಚೀಪುತ್ತಿವೆ! ನನ್ನ ಜೊತೆಗಿದ್ದ ಶಿಕ್ಷಕಿಯೇ ಮಕ್ಕಳಿಗೆ ಕೊಡಿಸಿದ್ದಾರೆಂದು ನಾನು ತಿಳಿದೆ. ಆದರೆ, ವಸ್ತುಸ್ಥಿತಿ ತಿಳಿದಾಗ ಮತ್ತೊಂದು ಅಚ್ಚರಿ ನನಗೆ ಕಾದಿತ್ತು. ಐಸ್ ಕ್ಯಾಂಡಿ ಮಾರುವವ ಮಕ್ಕಳಿಗೆಲ್ಲ ಪುಕ್ಕಟೆಯಾಗಿ ಐಸ್ ಕ್ಯಾಂಡಿ ನೀಡಿದ್ದ. ಏನಿಲ್ಲವೆಂದರೂ ಸಾವಿರ ರುಪಾಯಿಯಷ್ಟು ಐಸ್ ಕ್ಯಾಂಡಿಯನ್ನು ಮಕ್ಕಳು ಚೀಪುತ್ತಿದ್ದವು.

ಐಸ್ ಕ್ಯಾಂಡಿಯವ ಸಾವಿರ ರುಪಾಯಿಷ್ಟು ಪುಗಸಟ್ಟೆಯಾಗಿ ನೀಡುವುದೆಂದರೇನು? ಹಣ ನೀಡಲು ಹೋದರೆ, ಆತ ಒಂದು ಪೈಸೆಯನ್ನೂ ತೆಗೆದುಕೊಳ್ಳಲಿಲ್ಲ. ಇಂಥವರಿಗೆ ಏನು ಹೇಳಬೇಕು? ನಮಗೆ ತಿಳಿದಿರುವ ಜಗತ್ತು ಒಂದಿರುವುದಾದರೆ, ತಿಳಿಯದಿರುವ ಜಗತ್ತು ಇನ್ನೆಷ್ಟು ವಿಸ್ತಾರವಾಗಿದೆಯೋ? ಈ ಮಕ್ಕಳಿಂದಾಗಿ ಅಂಥದೊಂದು ಜಗತ್ತಿನ ಸಾಕ್ಷಾತ್ಕಾರ ನನಗಾಯಿತು. ಮಾನವೀಯತೆಗೆ ಎಲ್ಲೆ ಎಂಬುದೆಲ್ಲಿದೆ? [ದಿವ್ಯಾ ಬ್ಲಾಗ್]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Despite the fact that the blind never get to see things we experience, there is a lot we can learn from them. Not just their actions and words but the way they evoke actions in others. The blind have changed the way I experience things. They make us more human.
Please Wait while comments are loading...