Namma Metro: ಬೆಂಗಳೂರಿನ ಮತದಾರರಿಗೆ ಸಿಹಿ ಸುದ್ದಿ ನೀಡಿದ ನಮ್ಮ ಮೆಟ್ರೋ
ಬೆಂಗಳೂರು, ಏಪ್ರಿಲ್ 25: 2024ರ ಲೋಕಸಭಾ ಚುನಾವಣೆಯ ಮತದಾನದ ದಿನಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ (ಏಪ್ರಿಲ್ 26)ರಂದು ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಒಟ್ಟು 14 ಕ್ಷೇತ್ರಗಳಲ್ಲಿ ನಾಳೆ ಮತದಾನ ನಡೆಯಲಿದ್ದು, ಬೆಂಗಳೂರಿನ ನಾಲ್ಕು ಕ್ಷೇತ್ರಗಳಲ್ಲಿಯೂ ನಾಳೆಯೇ ಮತದಾನ ನಡೆಯಲಿದೆ.
ಬೆಂಗಳೂರು ನಗರದಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಚುನಾವಣಾ ಆಯೋಗದ ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಪ್ರಯತ್ನಿಸುತ್ತಿದ್ದು, ಮತದಾರರಿಗೆ ಅನುಕೂಲವಾಗುವಂತೆ ಅನೇಕ ರೀತಿಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಅದೇ ರೀತಿ ನಮ್ಮ ಮೆಟ್ರೋ (BMRCL) ಸಂಸ್ಥೆ ಮತದಾನದ ದಿನ ಬೆಂಗಳೂರಿಗರಿಗೆ ಸಿಹಿ ಸುದ್ದಿ ನೀಡಿದೆ.

ನಮ್ಮ ಮೆಟ್ರೋ ಏಪ್ರಿಲ್ 26 ಮತದಾನದ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸಲಿದ್ದಾರೆ. ಹೀಗಾಗಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ನಮ್ಮ ಮೆಟ್ರೋ ಸಂಸ್ಥೆ ವಿಶೇಷ ತಯಾರಿ ನಡೆಸುತ್ತಿದೆ. ನಾಳೆ ನಗರದಲ್ಲಿ ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಮೆಟ್ರೋ ಪ್ರಯಾಣದ ಸೇವೆ ಒದಗಿಸಲು ಬಿಎಂಆರ್‌ಸಿಎಲ್‌ಮುಂದಾಗಿದೆ. ಬೆಂಗಳೂರು ನಗರದಾದ್ಯಂತ ಸಂಚರಿಸುವ ಪ್ರಯಾಣಿಕರಿಗೆ ಚುನಾವಣಾ ಸಿಬ್ಬಂದಿಗಳಿಗೆ ಅಗತ್ಯ ಸೇವೆ ನೀಡುವ ಕುರಿತು ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು ನಗರದಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಹಾಗೂ ಮತದಾನದ ದಿನ ಪ್ರಯಾಣಿಕರ ಅನುಕೂಲವಾಗಬೇಕಯ ಎಂದು ನಮ್ಮ ಮೆಟ್ರೋ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ. ಏಪ್ರಿಲ್ 26ರಂದು ನಾಗಸಂದ್ರ, ರೇಷ್ಮೆ ಸಂಸ್ಥೆ, ಚಲ್ಲಘಟ್ಟ, ವೈಟ್ ಫೀಲ್ಡ್ (ಕಾಡುಗೋಡಿ) ನಿಲ್ದಾಣದಿಂದ ಕೊನೆಯ ರೈಲು ಸೇವೆಯನ್ನು ರಾತ್ರಿ 11.55ರವರೆಗೂ ವಿಸ್ತರಿಸಲಾಗಿದೆ.
ಇನ್ನು ನಾಡಪ್ರಭು ಕೇಂಪೇಗೌಡ ಮೆಜೆಸ್ಟಿಕ್ ನಿಲ್ದಾಣದಿಂದ ಎಲ್ಲಾ ನಾಲ್ಕು ದಿಕ್ಕುಗಳಿಗೂ ಕೊನೆಯ ರೈಲು ಮಧ್ಯರಾತ್ರಿ 00.35ರವರೆಗೂ ಹೊರಡಲಿದೆ. ಮತದಾನ ದಿನ ಪ್ರಯಾಣಿಕರು ಮೆಟ್ರೋ ಸೇವೆಯನ್ನು ಹೆಚ್ಚಾಗಿ ಬಳಸಿಕೊಳ್ಳುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಪ್ರಯಾಣಿಕರಲ್ಲಿ ಮನವಿ ಮಾಡಿಕೊಂಡಿದೆ.












Click it and Unblock the Notifications