ಪಾನಮತ್ತ ಚಾಲನೆ: 973 ಪ್ರಕರಣ ದಾಖಲು
ಬೆಂಗಳೂರು, ಮೇ 5: ವಾರಾಂತ್ಯದ ದಿನಗಳಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿರುವ ಚಾಲಕರ ವಿರುದ್ಧ ರಾಜಧಾನಿಯ ಸಂಚಾರ ವಿಭಾಗದ ಪೊಲೀಸರ ವಿಶೇಷ ಕಾರ್ಯಾಚರಣೆ ಮುಂದುವರಿದಿದೆ.
ಶನಿವಾರ ರಾತ್ರಿ ನಗರದೆಲ್ಲೆಡೆ ವಿಶೇಷ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು, ಐದು ಗಂಟೆಗಳ ಅಂತರದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 973 ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಗರದ 117 ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು ರಾತ್ರಿ 9 ರಿಂದ 2 ಗಂಟೆವರೆಗೆ 3,720 ವಾಹನಗಳನ್ನು ತಪಾಸಣೆ ಮಾಡಿದ್ದಾರೆ.
ಈ ಪೈಕಿ 973 ಚಾಲಕರು ಮದ್ಯ ಸೇವಿಸಿರುವ ಸಂಗತಿ ಕಂಡು ಬಂದಿದೆ.ಈ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ ವಾಹನ ಗಳನ್ನು ಜಪ್ತಿ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಪೀಣ್ಯ ಸಂಚಾರ ಪೊಲೀಸರು ಹೆಚ್ಚು ಪ್ರಕರಣ ದಾಖಲಿಸಿದ್ದಾರೆ. [ಶಾಸಕರ ವಿದೇಶ ಪ್ರವಾಸಕ್ಕೆ ಸರ್ಕಾರದ ಬ್ರೇಕ್]

ಐದು ಬಸ್, 23 ಲಾರಿ, 41 ಆಟೊ, 272 ಕಾರು, 15 ಮ್ಯಾಕ್ಸಿ ಕ್ಯಾಬ್, 48 ಟೆಂಪೊ ಚಾಲಕರು ಹಾಗೂ 569 ಬೈಕ್ ಸವಾರರು ಪಾನಮತ್ತರಾಗಿ ವಾಹನ ಚಾಲನೆ ಮಾಡುವ ವೇಳೆ ಸಿಕ್ಕಿ ಬಿದ್ದಿದ್ದಾರೆ. ಇವರಲ್ಲಿ 971 ಪುರುಷರು ಹಾಗೂ ಇಬ್ಬರು ಮಹಿಳೆಯರು ಇದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.[ನವರಂಗ್- ಮಲ್ಲೇಶ್ವರ 3ದಿನ ವಾಹನ ಸಂಚಾರ ಬಂದ್]
ಆಲ್ಕೋ ಮೀಟರ್ ಮೂಲಕ ತಪಾಸಣೆ ನಡೆಸಿದಾಗ ಒಬ್ಬ ಚಾಲಕನ ಮದ್ಯ ಸೇವನೆ ಪ್ರಮಾಣ 550 ಮಿ.ಗ್ರಾಂನಷ್ಟಿತ್ತು. ಈ ಎಲ್ಲಾ ಸವಾರರ ವಾಹನ ಪರವಾನಗಿಯನ್ನು ಅಮಾನತಿನಲ್ಲಿಡುವಂತೆ ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications