ಹೊಸಪೇಟೆಯ ಒಂದೇ ಕುಟುಂಬದ ಮೂವರಿಗೆ ಕೊರೊನಾ
ಬಳ್ಳಾರಿ, ಮಾರ್ಚ್ 30: ಬಳ್ಳಾರಿಯ ಹೊಸಪೇಟೆಯಲ್ಲಿ ಇಂದು ಮೂರು ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಹೊಸಪೇಟೆಯ ಒಂದೇ ಕುಟುಂಬದ ಮೂವರಲ್ಲಿ ಕೊರೊನಾ ವೈರಸ್ ಸೋಂಕು ಇರುವುದಾಗಿ ತಿಳಿದುಬಂದಿದೆ.
ತೀವ್ರ ಜ್ವರದಿಂದ ಬಳಲುತ್ತಿದ್ದ ಈ ಮೂವರೂ ಕಳೆದ ಎರಡು ದಿನಗಳಿಂದ ಬಳ್ಳಾರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದುದಾಗಿ ತಿಳಿದುಬಂದಿದೆ. ಇವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿರುವುದಾಗಿ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಅವರು ಮಾಹಿತಿ ನೀಡಿದ್ದಾರೆ.

ಇವರಿಗೆ ಸೋಂಕು ತಗುಲಿರುವ ಮೂಲದ ಕುರಿತ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಮೂರು ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ನಾಳೆಯಿಂದ ಹೊಸಪೇಟೆ ಸಂಪೂರ್ಣ ಬಂದ್ ಗೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಹೊಸಪೇಟೆ ಕಂಟೋನ್ಮೆಂಟ್ ಝೋನ್: ಯಾವುದೇ ಸ್ಥಳದಲ್ಲಿ ಪಾಸಿಟಿವ್ ಪ್ರಕರಣ ಕಂಡುಬಂದಾಗ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ನಿರ್ದೇಶನವನ್ನು ಅನುಸರಿಸಬೇಕಾಗುತ್ತದೆ. ಹೊಸಪೇಟೆ ನಗರಸಭೆ ವ್ಯಾಪ್ತಿಯನ್ನು ಕಂಟೋನ್ಮೆಂಟ್ ಝೋನ್ ಆಗಿ ಕೈಗೆತ್ತಿಕೊಳ್ಳಲಾಗುವುದು. ಇಂದಿನಿಂದ ಯಾವುದೇ ರೀತಿಯ ವಾಹನ ಸಂಚಾರ ಆಗಲಿ ಅಥವಾ ಜನರ ಓಡಾಟಕ್ಕಾಗಲಿ ಅವಕಾಶವಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಮನೆ-ಮನೆ ಸಮೀಕ್ಷೆ: ನಾಳೆಯಿಂದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಯಾರಿಗಾದರೂ ಕೆಮ್ಮು,ನಗಡಿ, ಜ್ವರ ಇತ್ಯಾದಿ ಲಕ್ಷಣಗಳಿದ್ದಲ್ಲಿ ಸಮೀಕ್ಷೆ ಮಾಡಲಾಗುತ್ತಿದ್ದು, ಜನರು ಇಂತಹ ಸಂದರ್ಭದಲ್ಲಿ ಸಹಕರಿಸಬೇಕು ಎಂದು ಡಿಸಿ ಮನವಿ ಮಾಡಿದ್ದಾರೆ.












Click it and Unblock the Notifications