ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಕೈ ಕಾರ್ಯಕರ್ತನ ಮೇಲೆ ಗುಂಡು ಹಾರಿಸಿದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಸ್‌ಪಿ
G.Janardhana Reddy: ಬಳ್ಳಾರಿಯಲ್ಲಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಮನೆ ಮುಂದೆ ಬ್ಯಾನರ್ ಅಳವಡಿಕೆ ವಿಚಾರವಾಗಿ ಗುರುವಾರ (ಜನವರಿ 1) ರಾತ್ರಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಈ ವೇಳೆ ಗುಂಡು ತಗುಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ (28) ಸಾವವನ್ನಪ್ಪಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಭಂಡಾರ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಹಾಗಾದ್ರೆ, ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಳ್ಳಾರಿಯಲ್ಲಿ ನಡೆದ ಗಲಭೆಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವು ಪೊಲೀಸರ ಗುಂಡಿನಿಂದ ಸಂಭವಿಸಿದ್ದಲ್ಲ. ಬದಲಾಗಿ ಖಾಸಗಿ ವ್ಯಕ್ತಿಯ ರಿವಾಲ್ವಾರ್‌ನಿಂದ ಹಾರಿದ ಗುಂಡು ತಗುಲಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಭಂಡಾರ ಅವರು ಹೇಳಿದ್ದಾರೆ.

ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನೆ ವಿಚಾರವಾಗಿ ನಾರಾ ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ನಡೆದ ಸಂಘರ್ಷ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನೆಗೆ ಬ್ಯಾನರ್ ಕಟ್ಟುವ ವಿಚಾರದಲ್ಲಿ ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಅದು ವಿಕೋಪಕ್ಕೆ ತಿರುಗಿತ್ತು. ಕೊನೆಗೆ ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿದೆ.
ಬಳಿಕ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಈ ನಡುವೆ ಗುಂಡಿನ ಸದ್ದು ಕೇಳಿಬಂದಿತ್ತು. ಘಟನೆ ವೇಳೆ ತೀವ್ರವಾಗಿ ಗಾಯಗೊಂಡಿದ್ದ ರಾಜಶೇಖರ್ ವಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಆರಂಭದಲ್ಲಿ ಪೊಲೀಸರ ಫೈರಿಂಗ್‌ನಿಂದ ಸಾವು ಸಂಭವಿಸಿದೆ ಎಂಬ ವದಂತಿ ಹಬ್ಬಿತ್ತು. ಆದರೆ, ಇದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಅವರು ಒಪ್ಪಿಕೊಳ್ಳದೇ ನಿರಾಕರಿಸಿದ್ದಾರೆ.
ಎಸ್‌ಪಿ ಹೇಳಿದ್ದೇನು?: "ಘಟನಾ ಸ್ಥಳದಲ್ಲಿ ಖಾಸಗಿ ವ್ಯಕ್ತಿಯೊಬ್ಬ ಗುಂಡು ಹಾರಿಸಿರುವ ಬಗ್ಗೆ ಮಾಹಿತಿ ಇದೆ. ಮೃತನ ದೇಹ ಸೇರಿರುವುದು ಖಾಸಗಿ ರಿವಾಲ್ವಾರ್ ಗುಂಡು. ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ," ಎಂದು ಎಸ್‌ಪಿ ರಂಜಿತ್ ಕುಮಾರ್ ಭಂಡಾರ ಅವರು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಘಟನೆ ಬೆನ್ನಲ್ಲೇ ಶಾಸಕ ನಾರಾ ಭರತ್ ರೆಡ್ಡಿ ಅವರು ಪ್ರತಿಕ್ರಿಯಿಸಿ ಜನಾರ್ದನ ರೆಡ್ಡಿ ವಿರುದ್ಧ ಆಕ್ರೋಶ ವ್ತಕ್ತಪಡಿಸಿದ್ದಾರೆ. "ಜನಾರ್ದನ ರೆಡ್ಡಿ ಅವರ ವಿರುದ್ಧ ಎಫ್‌ಐಆರ್ ಆಗುವವರೆಗೂ ನಾನು ಸ್ಥಳ ಬಿಟ್ಟು ಕದಲುವುದಿಲ್ಲ. ಅವರ ಕುತಂತ್ರದಿಂದಲೇ ಒಬ್ಬ ಅಮಾಯಕ ಕಾರ್ಯಕರ್ತ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಘಟನೆ ಬಳಿಕ ನಗರದಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ. ಆದರೂ ಕೂಡ ಇದೀಗ ಈ ಘಟನೆ ರಾಜಕೀಯ ತಿರುವು ಪಡೆದುಕೊಂಡಿದೆ
ಇನ್ನೂ ಮೃತ ರಾಜಶೇಖರ್ ತಾಯಿ ತುಳಸಿ ಅವರ ಆಕ್ರಂದನ ಮುಗಿಲು ಮುಟ್ಟಿದೆ. ಮಗನಿಗೆ ಪೆಟ್ಟಾಗಿದೆ ಎಂದು ಸಮಾಧಾನ ಹೇಳಿದ್ದ ಪೊಲೀಸರು ಶವಗಾರದ ಮುಂದೆ ಕಾವಲಿಟ್ಟಿದ್ದಾರೆ. ಈಗಾಗಲೇ ಈ ಗಲಭೆಗೆ ಸಂಬಂಧ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಇದೀಗ ಬಳ್ಳಾರಿಯಲ್ಲಿ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.












Click it and Unblock the Notifications